ಸಾರಾಂಶ
। ರೈತರಿಗೆ ಆಗಾಗ ಕಾಣಿಸಿಕೊಳ್ಳುತ್ತಿರುವ ವನ್ಯಜೀವಿ, ಭಯದಲ್ಲೇ ಜನರ ಸಂಚಾರ
। ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶಸತೀಶ ಸಿ.ಎಸ್.
ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿಪಟ್ಟಣದ ಹೊರವಲಯದಲ್ಲಿ ಚಿರತೆ ಆಗಾಗ ರೈತರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗೆ ಜನನಿಬಿಡ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡಿದೆ. ಆದರೆ ಅರಣ್ಯ ಇಲಾಖೆಗೆ ಸೆರೆಹಿಡಿಯಲು ಮಾತ್ರ ಸಾಧ್ಯವಾಗುತ್ತಿಲ್ಲ.
ಜನರು ಭಯದಲ್ಲೇ ಓಡಾಡುವಂತಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಜ. ೧೬ರಂದು ತಾಲೂಕಿನ ಯಲಿವಾಳ ಗ್ರಾಮದ ಕುರಿ ಫಾರಂನಲ್ಲಿ ಕಟ್ಟಿದ್ದ ನಾಯಿಯನ್ನು ಚಿರತೆ ಹೊತ್ತೊಯ್ಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಗ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಅಳವಡಿಸಿದ್ದಾರೆ.
ಎರಡು ತಿಂಗಳ ಹಿಂದೆ ಶಿರಗಂಬಿ ರಸ್ತೆಯ ಬತ್ತದ ಗದ್ದೆಯ ಕಾಲುವೆ ಹತ್ತಿರ ಚಿರತೆ ಮರಿಗಳು ರೈತರಿಗೆ ಕಂಡುಬಂದಿದೆ. ಅದಾದ ಆನಂತರ ಪಟ್ಟಣದ ಹೊರ ವಲಯದ ಕಬ್ಬಿಣಕಂತಿ ಮಠದ ಶಾಲೆಯ ಹತ್ತಿರ ಚಿರತೆ ಮರಿ ಕಾಣಿಸಿಕೊಂಡಿದೆ. ಕವಳಿಕುಪ್ಪಿ ಗ್ರಾಮದ ರೈತರ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನದ ಮೇಲೆ ಚಿರತೆ ದಾಳಿ ನಡೆಸಿತ್ತು. ಆದರೆ ನಾಯಿಗಳು ಬೊಗಳಿದ್ದರಿಂದ ಅಲ್ಲಿಂದ ಪರಾರಿಯಾಗಿದೆ. ಕವಳಿಕುಪ್ಪಿ ಗ್ರಾಮದ ಹೊರ ವಲಯದ ಹೊಲಗಳಲ್ಲಿ ರೈತರಿಗೆ ಕಾಣಿಸಿಕೊಂಡಿದೆ. ಚಿರತೆ ಓಡಾಡುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.೨೦೧೮ರಲ್ಲಿ ಕಡೂರಿನ ಫಕೀರಪ್ಪ ಕಾಗೇರ ಎಂಬವರ ಮೇಲೆ ಚಿರತೆ ದಾಳಿ ಮಾಡಿ ತೀವ್ರ ಗಾಯಗೊಳಿಸಿತ್ತು. ಶಂಕರಗೌಡ ಶಿರಗಂಬಿ ಎಂಬವರು ಜಮೀನಿನ ಮನೆಯಲ್ಲಿ ಮಲಗಿದ್ದಾಗ ದಾಳಿ ಮಾಡಿತ್ತು. ೨೦೨೧ರಲ್ಲಿ ಬುಳ್ಳಾಪುರ ಗ್ರಾಮದ ಗದಿಗೆಪ್ಪ ಯಳವಳ್ಳಿ ರೈತ ಜಮೀನಿಗೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿ ಗಂಭೀರ ಗಾಯಗೊಂಡಿದ್ದರು. ೨೦೧೮ರಲ್ಲಿ ಚಿರತೆ ದಾಳಿಗೆ ಫಕ್ಕೀರಪ್ಪ ಎಂಬ ರೈತ ಇಂದಿಗೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆ ಕಳೆದ ತಿಂಗಳು ಯಲಿವಾಳ ಗ್ರಾಮದಲ್ಲಿ ಬೋನ್ ಅಳವಡಿಸಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಯತ್ನಕ್ಕೂ ಮುಂದಾಗುತ್ತಿಲ್ಲ ಎಂಬುದು ನಾಗರಿಕರ ಅಸಮಾಧಾನವಾಗಿದೆ.ಚಿರತೆ ಸೆರೆಗಾಗಿ ಎರಡು ಕಡೆಗಳಲ್ಲಿ ಬೋನ್ ಅಳವಡಿಸಲಾಗಿದೆ. ಆದ್ದರಿಂದ ಆದಷ್ಟು ಬೇಗ ಸೆರೆ ಹಿಡಿಯಲಾಗುವುದು. ಸಾರ್ವಜನಿಕರು, ರೈತರು ಇಲಾಖೆಯೊಂದಿಗೆ ಸಹಕರಿಸಬೇಕು ಎನ್ನುತ್ತಾರೆ ರಟ್ಟೀಹಳ್ಳಿ-ಹಿರೇಕೆರೂರ ಆಆರ್‌ಎಫ್‌ಒ ವೀರೇಶ ಕಬ್ಬಿನ.
ಎರಡು ತಿಂಗಳುಗಳಿಂದ ಚಿರತೆ ಹಾಗೂ ಅದರ ಮರಿಗಳು ಊರಾಚಿನ ಹೊಲಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಜನನಿಬಿಡ ಪ್ರದೇಶದಲ್ಲಿ ಪ್ರತ್ಯಕ್ಷವಾಗುತ್ತಿವೆ. ಹಗಲಿನಲ್ಲಿ ಓಡಾಡುವುದೇ ಕಷ್ಟವಾಗುತ್ತಿದೆ. ಇನ್ನು ರಾತ್ರಿ ಸಮಯದಲ್ಲಿ ಹೊಲಗಳಿಗೆ ನೀರು ಹಾಯಿಸಲು ಹೋಗಲು ಭಯವಾಗುತ್ತದೆ ಎನ್ನುತ್ತಾರೆ ರೈತ ಗಣೇಶ ತಿಪ್ಪಕ್ಕನವರ.