ಜೀಗೇರಿ ಗ್ರಾಮದಲ್ಲಿ ಬೋನ್‌ಗೆ ಬೀಳದ ಚಿರತೆ, ಹೆಚ್ಚಿದ ಆತಂಕ

| Published : Feb 09 2024, 01:46 AM IST

ಸಾರಾಂಶ

ಸಮೀಪದ ಜೀಗೇರಿ ಗ್ರಾಮದಲ್ಲಿ ಮೂವರ ಮೇಲೆ ಎರಗಿ ಗಾಯಗೊಳಿಸಿದ್ದ ಚಿರತೆಯ ಶೋಧ ಕಾರ್ಯಕ್ಕೆ ಗುರುವಾರ ಅರಣ್ಯ ಇಲಾಖೆ ಚುರುಕುಗೊಳಿಸಿದ್ದರೂ ಸಹ ಚಿರತೆ ಬೋನ್‌ಗೆ ಬೀಳದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಗಜೇಂದ್ರಗಡ: ಸಮೀಪದ ಜೀಗೇರಿ ಗ್ರಾಮದಲ್ಲಿ ಮೂವರ ಮೇಲೆ ಎರಗಿ ಗಾಯಗೊಳಿಸಿದ್ದ ಚಿರತೆಯ ಶೋಧ ಕಾರ್ಯಕ್ಕೆ ಗುರುವಾರ ಅರಣ್ಯ ಇಲಾಖೆ ಚುರುಕುಗೊಳಿಸಿದ್ದರೂ ಸಹ ಚಿರತೆ ಬೋನ್‌ಗೆ ಬೀಳದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.ತಾಲೂಕಿನ ಭೈರಾಪೂರ ತಾಂಡಾ, ಕಾಲಕಾಲೇಶ್ವರ, ನಾಗೇಂದ್ರಗಡ, ಕುಂಟೋಜಿ ಸೇರಿ ಇತರ ಗುಡ್ಡಗಾಡು ಪ್ರದೇಶದಲ್ಲಿನ ದನ, ನಾಯಿ, ಆಡು, ಕುರಿಯಂತಹ ಪ್ರಾಣಿಗಳನ್ನು ಕೊಂದು ತಿನ್ನುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿದ್ದವು. ಆದರೆ ಬುಧವಾರ ಜೀಗೇರಿ ಗ್ರಾಮದಲ್ಲಿ ಮೂವರು ಯುವಕರ ಮೇಲೆ ಚಿರತೆ ದಾಳಿ ಮಾಡಿದ್ದು ಅಕ್ಷರಶಃ ಗ್ರಾಮಸ್ಥರ ನಿದ್ದೆಯನ್ನು ಹಾರಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಜೀಗೇರಿ ಗ್ರಾಮ ಸೇರಿ ಸುತ್ತಲಿನ ಪ್ರದೇಶದಲ್ಲಿ ಚಿರತೆ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಗ್ರಾಮದಲ್ಲಿ ಶರಣಪ್ಪ ಆವಾರಿ ಅವರ ಜಮೀನಿನಲ್ಲಿ ಬೆಳಗ್ಗೆ ಕಾರ್ಯಾಚರಣೆಗೆ ಇಳಿದ ೫೦ಕ್ಕೂ ಅಧಿಕ ಅರಣ್ಯ ಇಲಾಖೆಯ ಸಿಬ್ಬಂದಿಯು ಚಿರತೆ ಶೋಧಕ್ಕೆ ಅನುಕೂಲವಾಗುವಂತೆ ಅಲ್ಲಲ್ಲಿ ಬಾಳೆತೋಟವನ್ನು ಕಡಿದು ಹಾಕಿ, ತೋಟದಲ್ಲಿ ೧ ಬೋನ್ ಇರಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಬೋನ್‌ಗೆ ಕೆಡವಲು ಬೋನಿನ ಇನ್ನೊಂದು ಬದಿಯಲ್ಲಿ ನಾಯಿಯನ್ನು ಕಟ್ಟಿದ್ದಾರೆ.

ಗ್ರಾಮಸ್ಥರ ಜೀವ ಭಯಕ್ಕೆ ಕಾರಣವಾಗಿರುವ ಚಿರತೆಯನ್ನು ಪತ್ತೆ ಹಚ್ಚಿ, ಬೋನ್‌ಗೆ ಕೆಡವಲು ಸಕಲ ಸಿದ್ಧತೆ ಮಾಡಿಕೊಂಡಿರುವ ಅರಣ್ಯ ಇಲಾಖೆಯು ೫ ವಿಶೇಷ ತಂಡಗಳನ್ನು ರಚಿಸಿ ಅಂದಾಜು ೫೦ ಸಿಬ್ಬಂದಿಗಳನ್ನು ಕಾರ್ಯಾಚರಣೆಗೆ ಬಳಸಿಕೊಂಡು ಚಿರತೆಯನ್ನು ಬಲೆ ಕೆಡವಲು ಜೀಗೇರಿ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ, ತೋಟಗಳ ಮೇಲೆ ಹಾಗೂ ಚಿರತೆ ಓಡಾಡುವ ಸ್ಥಳಗಳಲ್ಲಿ ಡ್ರೋಣ ಮೂಲಕ ಚಿರತೆಯನ್ನು ಪತ್ತೆ ಕಾರ್ಯ ಕೈಗೊಂಡಿದ್ದಾರೆ.

ಸಮೀಪದ ಜೀಗೇರಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಜಿಲ್ಲಾ ವಲಯ ಅರಣ್ಯಧಿಕಾರಿ ಮಂಜುನಾಥ ಮೇಗಲಮನಿ, ಮುಂಡರಗಿ ಆರ್‌ಎಫ್‌ಒ ವೀರೇಂದ್ರ ಮರಿಬಸಣ್ಣವರ, ರೋಣ ಆರ್‌ಎಫ್‌ಒ ಅನ್ವರ ಕೋಲ್ಹಾರ ಹಾಗೂ ಗಜೇಂದ್ರಗಡ ಆರ್‌ಎಫ್‌ಒ ಪ್ರವೀಣಕುಮಾರ ಸಾಸಿವಿಹಳ್ಳಿ ಸೇರಿ ಬಿಂಕದಕಟ್ಟಿ ಹಾಗೂ ಅರವಳಿಕೆ ತಜ್ಞರಾದ ನಿಖಿಲ್ ಕುಲಕರ್ಣಿ ಮತ್ತು ಜಟ್ಟಣ್ಣವರ ತಂಡದಲ್ಲಿದ್ದು ಮುಂಡರಗಿ, ರೋಣ, ಗಜೇಂದ್ರಗಡ, ಡಂಬಳ ಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು ಸಂಜೆವೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ಆದರೆ ಅರಣ್ಯ ಇಲಾಖೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಚಿರತೆ ಪತ್ತೆಯಾಗಿಲ್ಲ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಜನತೆಗೆ ಎಚ್ಚರಿಕೆ ಇಂದ ಇರಲು ಸೂಚಿಸುವುದರ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಎರಡನೇ ದಿನವೂ ಸಹ ಚಿರತೆ ಬೋನ್‌ಗೆ ಬಿಳದ್ದು ಜೀಗೇರಿ, ಕಾಲಕಾಲೇಶ್ವರ, ಕುಂಟೋಜಿ, ವದೆಗೋಳ, ಭೈರಾಪೂರ ಸೇರಿ ಹತ್ತಕ್ಕೂ ಅಧಿಕ ಗ್ರಾಮಗಳ ಜನರಲ್ಲಿ ಆಂತಕ ಸೃಷ್ಟಿಯಾಗಿದ್ದು, ಅರಣ್ಯ ಇಲಾಖೆಯು ಚಿರತೆಯನ್ನು ಆದಷ್ಟು ಬೇಗ ಬೋನ್‌ಗೆ ಕೆಡವಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಚಿರತೆಯೊಂದು ಬೋನ್‌ನಲ್ಲಿ ಬೀಳುವುದು ಸ್ವಲ್ಪದರಲ್ಲಿ ಬಿಳುವ ವೇಳೆ ಚಿರತೆ ಬೋನ್‌ನಿಂದ ಹೊರ ಬಂದ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದು, ಜೀಗೇರಿ ಗ್ರಾಮದಲ್ಲಿ ಬೋನಿನಲ್ಲಿ ಬಿಳಬೇಕಿದ್ದ ಚಿರತೆ ಜಸ್ಟ್ ಮಿಸ್ ಎಂದು ವಿಡಿಯೋ ಹಂಚಿಕೊಳ್ಳಲಾಗುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿರುವ ವಿಡಿಯೋ ಗಜೇಂದ್ರಗಡ ಸಮೀಪದ ಜೀಗೇರಿ ಗ್ರಾಮದ್ದಲ್ಲ ಅಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಳೆದ ೨-೩ ದಿನಗಳಿಂದ ಹಸಿವಿನಿಂದ ಇರುವು ಸಾಧ್ಯತೆಯಿದ್ದು, ಮತ್ತೆ ದಾಳಿ ಮಾಡಿದ ಸ್ಥಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಒಂದ್ ಬೋನ್ ಇಟ್ಟಿದ್ದು, ಇನ್ನೊಂದು ಬೋನ್‌ನ್ನು ನಾಗೇಂದ್ರಗಡ ಗ್ರಾಮದಲ್ಲಿ ಇಡಲಾಗುವುದು. ಚಿರತೆಯನ್ನು ಬೋನ್‌ಗೆ ಕೆಡವಲು ಅರಣ್ಯ ಇಲಾಖೆಯು ಕೊನೆ ಕ್ಷಣದವರೆಗಿನ ಪ್ರಯತ್ನಗಳನ್ನು ನಡೆಸುತ್ತಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ಹೇಳಿದರು.