ಸಾರಾಂಶ
ರಾಮನಗರ: ಬನ್ನಿಕುಪ್ಪೆ ಗ್ರಾಮದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಶುಕ್ರವಾರ ಬೆಳಗಿನ ಜಾವ ಸುಮಾರು ಒಂದೂವರೆ ವರ್ಷದ ಚಿರತೆ ಸೆರೆ ಸಿಕ್ಕಿದೆ.
ರಾಮನಗರ: ಬನ್ನಿಕುಪ್ಪೆ ಗ್ರಾಮದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಶುಕ್ರವಾರ ಬೆಳಗಿನ ಜಾವ ಸುಮಾರು ಒಂದೂವರೆ ವರ್ಷದ ಚಿರತೆ ಸೆರೆ ಸಿಕ್ಕಿದೆ.
ಆಹಾರ ಅರಸಿ ಸಂಜೆ ಮತ್ತು ಬೆಳಗಿನ ಜಾವ ಚಿರತೆ ಗ್ರಾಮದೊಳಗೆ ದಾಂಗುಡಿ ಇಡುತ್ತಿತ್ತು. ಕುರಿ, ಹಸುವಿನ ಕರು, ಮೇಕೆ, ಕೋಳಿ, ಸಾಕು ನಾಯಿಗಳ ಮೇಲೆ ದಾಳಿ ನಡೆಸಿ ಹೊತ್ತೊಯ್ಯುತ್ತಿತ್ತು. ಆಗಿಂದಾಗ್ಗೆ ಚಿರತೆ ಕಾಣಿಸಿಕೊಳ್ಳುತ್ತಿದ್ದರಿಂದ ಜನರು ಚಿರತೆ ಸೆರೆಯಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯಲು ರೈತರ ಖಾಸಗಿ ಜಮೀನಿನಲ್ಲಿ ಬೋನು ಇಟ್ಟು ಚಿರತೆಗೆ ಬಲೆ ಬೀಸಿದರು. ಚಿರತೆ ಶುಕ್ರವಾರ ಬೆಳಗಿನ ಜಾವ ಬೋನಿನಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಚಿರತೆ ಬೋನನ್ನು ರಾಮನಗರ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ತಂದು ರಾತ್ರಿ ದೂರದ ಅರಣ್ಯಕ್ಕೆ ಚಿರತೆ ಬಿಡಲು ಸಾಗಿಸಿದರು.ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಮುನ್ಸೂರ್ ಅಹಮದ್, ಉಪ ವಲಯ ಅರಣ್ಯಾಧಿಕಾರಿ ರಾಜಶೇಖರಯ್ಯ, ಅರಣ್ಯ ರಕ್ಷಕರಾದ ವರದರಾಜು, ಸಿಬ್ಬಂದಿ ಮಂಜು ಪಾಲ್ಗೊಂಡಿದ್ದರು. ಜಡೇನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷರಾಮನಗರ: ಮನೆಯೊಂದರ ಮೇಲೆ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿರುವ ಘಟನೆ ತಾಲೂಕಿನ ಬಿಡದಿ ಹೋಬಳಿ ಜಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸಿ ಗ್ರಾಮದೊಳಗೆ ಪ್ರವೇಶಿಸಿರುವ ಚಿರತೆ ರಾತ್ರಿ 12.30ರ ಸಮಯದಲ್ಲಿ ಪ್ರದೀಪ್ ಅವರಿಗೆ ಸೇರಿದ ಮನೆ ಮೇಲೆ ಹತ್ತಿದೆ. ಅಲ್ಲಿಂದ ನಾಯಿಗಳನ್ನು ನೋಡುತ್ತಾ ದಾಳಿ ಮಾಡಲು ಹೊಂಚು ಹಾಕಿದೆ. ಈ ದೃಶ್ಯವನ್ನು ಪುಟ್ಟರಾಜು ಎಂಬುವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಮದಲ್ಲಿ ಆತಂಕ ಸೃಷ್ಟಿಸಿರುವ ಚಿರತೆಯನ್ನು ಕೂಡಲೇ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.