ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಪತಿ-ಪತ್ನಿ ಪ್ರಕರಣಗಳಲ್ಲಿ ಅಂತರ ಜಿಲ್ಲಾ ವರ್ಗಾವಣೆ ಇಲ್ಲದೆ ನೊಂದಿರುವ ಪೊಲೀಸರು ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‘ಸುಪ್ರೀಂ ಕೋರ್ಟ್ ಆದೇಶ ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮದ ಪ್ರಕಾರ ಪತಿ-ಪತ್ನಿಗೆ ಒಂದು ಘಟಕ ಅಥವಾ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬಹುದು. ಆದರೆ, ರಾಜ್ಯ ಸರ್ಕಾರ, ಗೃಹ ಸಚಿವರು, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕಳೆದ ಮೂರು ವರ್ಷಗಳಿಂದ ಯಾವುದೇ ವರ್ಗಾವಣೆ ಮಾಡಿಲ್ಲ. ಪತಿ-ಪತ್ನಿ ಪ್ರಕರಣಗಳಲ್ಲಿ ಅಂತರ ಜಿಲ್ಲಾ ವರ್ಗಾವಣೆ ಕೋರಿ ಗೃಹ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಕೇವಲ ಮಾಧ್ಯಮಗಳ ಎದುರು ಅಂತರ ಜಿಲ್ಲಾ ವರ್ಗಾವಣೆ ಮಾಡುವುದಾಗಿ ಹೇಳಿಕೆ ನೀಡಿ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಲಾಗಿದೆ.‘ನಮ್ಮ ನೆಮ್ಮದಿ ಹಾಳಾಗಿ ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ. ಹೀಗಾಗಿ ನಮಗೆ ಸಾಮೂಹಿಕ ದಯಾಮರಣ ಕಲ್ಪಿಸಿಕೊಡಬೇಕು’ ಎಂದು ನೊಂದ ಪೊಲೀಸರ ಹೆಸರಿನಲ್ಲಿರುವ ಪತ್ರದಲ್ಲಿ ರಾಷ್ಟ್ರಪತಿಗಳನ್ನು ಕೋರಲಾಗಿದೆ.