ಜೀವಿತಾವಧಿ ದುಡಿದ ದುಡ್ಡಲ್ಲಿ ಮಕ್ಕಳಿಗೆ ಗ್ರಂಥಾಲಯ

| Published : Nov 23 2025, 02:30 AM IST

ಸಾರಾಂಶ

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡು ತೆಲುಗು ಪ್ರಭಾವವಿರುವ ಚಿಕ್ಕಬಳ್ಳಾಪುರದಲ್ಲಿ ಕಳೆದ 42 ವರ್ಷಗಳಿಂದಲೂ ಮಕ್ಕಳಾದಿಯಿಂದ ಮುದುಕರವರೆಗೂ ಕನ್ನಡದ ಕಂಪನ್ನು ಪಸರಿಸುತ್ತಾ ಕನ್ನಡಾಂಬೆಯ ಸೇವೆ ಮಾಡುತ್ತಿರುವ ಸಮಾಜ ಶಿಕ್ಷಕ ಕೆ.ಎಂ.ರೆಡ್ಡಪ್ಪ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ.

ದಯಾಸಾಗರ್ ಎನ್.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡು ತೆಲುಗು ಪ್ರಭಾವವಿರುವ ಚಿಕ್ಕಬಳ್ಳಾಪುರದಲ್ಲಿ ಕಳೆದ 42 ವರ್ಷಗಳಿಂದಲೂ ಮಕ್ಕಳಾದಿಯಿಂದ ಮುದುಕರವರೆಗೂ ಕನ್ನಡದ ಕಂಪನ್ನು ಪಸರಿಸುತ್ತಾ ಕನ್ನಡಾಂಬೆಯ ಸೇವೆ ಮಾಡುತ್ತಿರುವ ಸಮಾಜ ಶಿಕ್ಷಕ ಕೆ.ಎಂ.ರೆಡ್ಡಪ್ಪ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ.

ಕೆ.ಎಂ.ರೆಡ್ಡಪ್ಪನವರು, ಕನ್ನಡದ ನುಡಿ, ಸಂಸ್ಕೃತಿ, ಸಾಹಿತ್ಯ ಸೇರಿದಂತೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳ ಪರವಾಗಿ ಹತ್ತು ಹಲವು ಚಟುವಟಿಕೆಗಳನ್ನು ಮಾಡುತ್ತಲೇ ಬರುತ್ತಿದ್ದು, ನಿವೃತ್ತಿಯ ನಂತರ ಜೀವಿತಾವಧಿ ದುಡಿದ ದುಡ್ಡಲ್ಲಿ ಸ್ವಂತ ಮನೆಯ ಮೇಲೆ ಮಕ್ಕಳಿಗಾಗಿ ಗ್ರಂಥಾಲಯ ನಿರ್ಮಾಣ ಮಾಡಿ ಅಲ್ಲಿ ಮಕ್ಕಳಿಂದ ಹಿಡಿದು ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಿ, ಕನ್ನಡದ ಬಗ್ಗೆ ಮತ್ತು ವಿಜ್ಞಾನ, ಸಮಾಜ ವಿಜ್ಞಾನ ಮತ್ತಿತರ ವಿಷಯಗಳ ಬಗ್ಗೆ ಕನ್ನಡ ಭಾಷೆಯಲ್ಲಿ ಇರುವ ಪುಸ್ತಕಗಳನ್ನು, ಗ್ರಾಮಪೋನ್‌ನಿಂದ ರೇಡಿಯೋ, ಟೇಪ್ ರೆರ್ಕಾಡರ್, ಟೆಲಿವಿಷನ್‌ವರೆಗಿನ ಪರಿಕರಗಳನ್ನು ವೀಕ್ಷಣೆ, ಅಧ್ಯಯನಕ್ಕೆ ಅವಕಾಶ ನೀಡಿದ್ದಾರೆ.

1963ರ ಜೂ.1ರಂದು ಅವಿಭಜಿತ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕುರುಮಾಕಲಹಳ್ಳಿ ಎಂಬ ಕುಗ್ರಾಮದಲ್ಲಿ ಮುನಿವೆಂಕಟಪ್ಪ ಮತ್ತು ಮುನಿಯಮ್ಮ ದಂಪತಿಯ ಹತ್ತು ಮಕ್ಕಳಲ್ಲಿ 7ನೆಯ (2ನೇ ಗಂಡು ಮಗು)ವರಾಗಿ ರೆಡ್ಡಪ್ಪ ಹುಟ್ಟಿದರು. ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಚಿಕ್ಕಬಳ್ಳಾಪುರದಲ್ಲಿದ್ದ ಅಕ್ಕ ನಾಗವೇಣಿ ಭಾವ ಲಕ್ಷ್ಮಣಸ್ವಾಮಿ ಅವರ ಮನೆಯಲ್ಲಿದ್ದುಕೊಂಡು ಪ್ರೌಢ ಮತ್ತು ಶಿಕ್ಷಕರ ತರಬೇತಿ ಶಿಕ್ಷಣ ಪಡೆದರು.

ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನವಾದ ಸೆಪ್ಟಂಬರ್ 15, 1982ರಂದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಎಂ.ಎ, ಎಂಇಡಿ ಪದವಿಗಳನ್ನು ಗಳಿಸಿದರು. ಸುಮಾರು 24 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನಂತರ 16 ವರ್ಷಗಳು ಪ್ರೌಢಶಾಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ, 2023ರ ಜೂನ್‌ನಲ್ಲಿ ನಿವೃತ್ತರಾಗಿದ್ದಾರೆ.ನಾಲ್ಕು ದಶಕಗಳ ವೃತ್ತಿಯ ಅವಧಿಯಲ್ಲಿ ಶಾಲೆಗಳಿಗೆ ದಾನಿಗಳಿಂದ ವಸ್ತು ಹಾಗೂ ಹಣದ ರೂಪದಲ್ಲಿ ದೇಣಿಗೆಗಳನ್ನು ಸಂಗ್ರಹಿಸಿದ್ದಾರೆ. ಶಾಲೆಗಳಲ್ಲಿ ಓದುತ್ತಿದ್ದ ಬಡ ವಿದ್ಯಾರ್ಥಿಗಳಿಗೆ ತಾವೇ ಶುಲ್ಕಗಳನ್ನು ಕಟ್ಟಿದ್ದಾರೆ. ಪ್ರತಿಭಾ ಕಾರಂಜಿಯ ಛದ್ಮವೇಷ ಸ್ಪರ್ಧೆಯಲ್ಲಿ ರಾಜ್ಯಮಟ್ಟದವರೆಗೂ ವಿದ್ಯಾರ್ಥಿಗಳು ಭಾಗವಹಿಸಲು ಶ್ರಮವಹಿಸಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ವಿವಿಧ ಕನ್ನಡ ಸ್ಪರ್ಧೆಗಳು, ಚಟುವಟಿಕೆಗಳನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸಿದ್ದಾರೆ.

ಸಂಬಳದಲ್ಲಿ ಶಾಲೆಗಳಿಗೆ ದೇಣಿಗೆ:

ಸ್ವತಃ ತಮ್ಮ ಸಂಬಳದಲ್ಲಿ ವಿವಿಧ ಶಾಲೆಗಳಿಗೆ ದೇಣಿಗೆಗಳನ್ನು ನೀಡಿದ್ದಾರೆ. ಆವಲಗುರ್ಕಿಯ ಸರ್ಕಾರಿ ಪ್ರೌಢಶಾಲೆಗೆ ₹30000 ವೆಚ್ಚದಲ್ಲಿ ಬ್ಯಾಂಡ್ ಸೆಟ್ ಉಡುಪುಗಳನ್ನು ಕೊಡಿಸಿದ್ದಾರೆ. ವಿವಿಧ ಸಂಘಟನೆಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಕೆಲಸ ನಿರ್ವಹಿಸುತ್ತಿರುವ ರೆಡ್ಡಪ್ಪ ಅವರು ಕಸಾಪ ಗೌರವ ಕಾರ್ಯದರ್ಶಿ, ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಕಾರ್ಯದರ್ಶಿಯಾಗಿ ತೊಡಗಿಸಿಕೊಂಡಿದ್ದಾರೆ. ಕಸಾಪ ಪ್ರದರ್ಶನ, ಸಮ್ಮೇಳನ, ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿದ್ದು, ಎಲ್ಲಿಯೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದರೂ ಸಕ್ರಿಯವಾಗಿ ಭಾಗವಹಿಸುತ್ತಾರೆ.

ಸಂದಿರುವ ಪ್ರಶಸ್ತಿ, ಗೌರವಗಳು:

1991ರ ಭಾರತ ಜನಗಣತಿ ಕಾರ್ಯದ ಉತ್ತಮ ಗಣತಿ ಕಾರ್ಯ ಮಾಡಿದ ಕಾರಣ ರಾಷ್ಟ್ರಮಟ್ಟದ ಉತ್ತಮ ಗಣತಿದಾರ ಪ್ರಶಸ್ತಿ (ಬೆಳ್ಳಿ ಪದಕ) ಮತ್ತು ಪ್ರಶಸ್ತಿ ಪತ್ರ, ಭಾರತ ಜನಗಣತಿ ಇಲಾಖೆ, ನವದೆಹಲಿ. ಚಿಂತನ ಪ್ರಕಾಶನ ಚಿತ್ರದುರ್ಗ- ಚಿಂತನಾ ಶಿಕ್ಷಕ ಪ್ರಶಸ್ತಿ. ಚಿಂತನ ಪ್ರಕಾಶನದಿಂದ ಚಿತ್ರದುರ್ಗ ಜಿಲ್ಲಾ ವಿಜ್ಞಾನ ಶಿಕ್ಷಕ ಪ್ರಶಸ್ತಿ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2002-03ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ. ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನದಿಂದ ಕನ್ನಡ ರತ್ನ ಪ್ರಶಸ್ತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ 2025ರ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.