ವ್ಯಸನ ಮುಕ್ತ ಜೀವನ ಶೈಲಿಯಿಂದ ಸಂತೋಷಮಯ ಬದುಕು ಸಾಧ್ಯ ಎಂದು ಶಿಬಿರಾಧಿಕಾರಿ ನಂದಕುಮಾರ್ ಪಿ.ಪಿ. ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ವ್ಯಸನ ಮುಕ್ತ ಜೀವನ ಶೈಲಿಯಿಂದ ಸಂತೋಷಮಯ ಬದುಕು ಸಾಧ್ಯ ಎಂದು ಶಿಬಿರಾಧಿಕಾರಿ ನಂದಕುಮಾರ್ ಪಿ.ಪಿ. ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಡಿಕೇರಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು, ಸರ್ಕಾರಿ ಪ್ರೌಢಶಾಲೆ ಪಾಲಿಬೆಟ್ಟ ಹಾಗೂ ಪೊಲೀಸ್ ಇಲಾಖೆ ಪಾಲಿಬೆಟ್ಟ ಇವುಗಳ ಸಹಯೋಗದಲ್ಲಿ ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಇದುವರೆಗೆ ಕರ್ನಾಟಕ ರಾಜ್ಯದ 22,590 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ನಡೆಸಿ 23,50,185 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಜನಜಾಗೃತಿ ವೇದಿಕೆಯ ಮುಖೇನ ಸಮುದಾಯದ ಸಹಭಾಗಿತ್ವದೊಂದಿಗೆ ಇದುವರೆಗೆ 2105 ಮದ್ಯವರ್ಜನ ಶಿಬಿರಗಳನ್ನು ನಡೆಸಿ 1 ಲಕ್ಷದ 46 ಸಾವಿರಕ್ಕೂ ಹೆಚ್ಚು ಮದ್ಯವ್ಯಸನಿಗಳನ್ನು ವ್ಯಸನಮುಕ್ತಗೊಳಿಸಲಾಗಿದೆ ಎಂದರು.

ಪಾಲಿಬೆಟ್ಟ ಉಪ ಪೊಲೀಸ್ ಠಾಣೆ ಎಎಸ್‌ಐ ಶ್ರೀನಿವಾಸ್ ಮುಖ್ಯ ಅತಿಥಿಯಾಗಿದ್ದರು.

ಮುಖ್ಯ ಶಿಕ್ಷಕ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಸಿದ್ದಾಪುರ ವಲಯ ಮೇಲ್ವಿಚಾರಕ ವೆಂಕಟೇಶ್, ಸ್ಥಳೀಯ ಸೇವಾ ಪ್ರತಿನಿಧಿಗಳಾದ ಇಂದಿರಾ, ನಿಶಾ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮೇಲ್ವಿಚಾರಕರಾದ ವೆಂಕಟೇಶ್ ಸ್ವಾಗತಿಸಿ, ಸೇವಾ ಪ್ರತಿನಿಧಿ ಇಂದಿರಾ ನಿರೂಪಿಸಿದರು.