ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತನ್ನಪಾಡಿಗೆ ಮಾಡುವುದು ಉಪಜೀವನ, ತನ್ನಗಲ್ಲದೇ ಪರಹಿತಕ್ಕೆ ಮಾಡುವುದು ಒಳ್ಳೆಯ ಜೀವನ, ಪರಹಿತದಲ್ಲಿ ಪರಮಾತ್ಮನನ್ನು ಕಾಣುವುದು ದಾಸೋಹ ಜೀವನ ಎಂದು ದಾಸೋಹ ಸೂತ್ರದಲ್ಲಿ ಶರಣಬಸವಪ್ಪ ಅಪ್ಪ ಹೇಳಿದ್ದಾರೆ. ಅಂಥ ದಾಸೋಹ ಜೀವನವೇ ಮನುಜರೆಲ್ಲ ಪಾಲಿಗೆ ಪರಿಪೂರ್ಣ ಬದುಕು ಎಂದು ಯಲಗೋಡ ಪರಮಾನಂದಮಠದ ಗುರುಲಿಂಗ ಸ್ವಾಮೀಜಿಗಳು ನುಡಿದರು.ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶರಣಬಸವೇಶ್ವರರು ಕೇವಲ ಧಾರ್ಮಿಕ ಸಂತನಾಗಿರದೇ ಕಾಯಕ ಮತ್ತು ಜ್ಞಾನದ ಮೂಲಕ ಸಮಾಜದಲ್ಲಿ ಬದಲಾವಣೆ ತಂದ ಮಹಾನ್ ದಾರ್ಶನಿಕರಾಗಿದ್ದರು. ಗ್ರಾಮಸ್ಥರೆಲ್ಲರೂ ಕೂಡಿ ಭಕ್ತಿ ಮಾರ್ಗದ ಮೂಲಕ ಜಾತಿ ಮತ ಭೇದವಿಲ್ಲದೆ ಭಾವೈಕ್ಯತೆಯನ್ನು ಸಾರಿದ್ದೀರಿ ಹಾಗೂ ಸುಮಾರು 12 ಪರಮಾನಂದ ದೇವರು ತಪಸ್ಸು ಗೈದ ಜಾಗೃತ ಸ್ಥಳಗಳ ಪೈಕಿ ಸುಕ್ಷೇತ್ರ ಹುಣಶ್ಯಾಳ ಗ್ರಾಮವು ಒಂದು, ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಒಂದಾಗಬೇಕು, ನಮ್ಮಿಂದಲೂ ಸಹಾಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.ಜಿಪಂ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡ ಬಸನಗೌಡ ಪಾಟೀಲ (ಯಡಿಯಾಪೂರ) ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿದ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಹಲವು ಜನಾಂಗ, ಭಾಷೆ, ಆಚಾರ -ವಿಚಾರಗಳ ಭಾವೈಕ್ಯತೆ ಸಂಗಮವಾಗಿದೆ, ಶರಣರ ತತ್ವಗಳನ್ನು ಎಲ್ಲರೂ ತಿಳಿದುಕೊಂಡು ಸಮಾಜದಲ್ಲಿ ಅವರ ಪಾಲನೆಗಳನ್ನು ಅರಿತು ನಡೆಯಬೇಕು. ಹುಣಶ್ಯಾಳ ಗ್ರಾಮದಲ್ಲಿ ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರ ಪುರಾಣ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.ಮಳಖೇಡದ ಹಜರತ್ ಸೈಯದ್ ಷಾ ಮುಸ್ತಫಾ ಖಾದ್ರಿ ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತ ಬಹುತ್ವದ ದೇಶ. ಎಲ್ಲ ಧರ್ಮ, ಜಾತಿ, ಭಾಷೆ, ಪ್ರಾಂತ್ರ್ಯದವರು ಒಟ್ಟಾಗಿ ಬಾಳಬೇಕು. ಮನುಷ್ಯತ್ವ ಬಹಳ ದೊಡ್ಡದು. ಬಿದ್ದವನನ್ನು ಎಬ್ಬಿಸುವುದೇ ಧರ್ಮದ ಸಾರವಾಗಿದೆ. ಎಲ್ಲರೂ ಪರಸ್ಪರ ಪ್ರೀತಿಸಬೇಕು. ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಶಿಕ್ಷಣ ನೀಡಿ ಎಂದು ಪಾಲಕರಿಗೆ ತಿಳಿಸಿದರು.ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಮಾತನಾಡಿ, ಜೀವನದಲ್ಲಿ ಅಧ್ಯಾತ್ಮ ಆಳವಡಿಸಲು ಪುರಾಣ ಸಹಕಾರಿಯಾಗಿದೆ. ಅಧ್ಯಾತ್ಮ ಇಲ್ಲದೇ ಜೀವನ ಇಲ್ಲ, ಧ್ಯಾನದಿಂದ ಆರೋಗ್ಯ ವೃದ್ಧಿ, ಬದುಕಿನ ಸಿಹಿಕಹಿಗಳನ್ನು ಸಮತೋಲನದಲ್ಲಿಡಲು ಅಧ್ಯಾತ್ಮ ಸಹಕರಿಯಾಗುತ್ತದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಹವ್ಯಾಸಗಳು ಅವಶ್ಯವಾಗಿದೆ. ಸರಳ ಜೀವನದಿಂದ ಮಾತ್ರ ಉತ್ತಮ ಆರೋಗ್ಯ ಸಂಪಾದಿಸಲು ಸಾಧ್ಯ ಎಂದು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ವೈದ್ಯರಾಗಿ ಗ್ರಾಮಸ್ಥರಿಗೆ ತಿಳಿಸಿದರು.
ಬೋರಗಿ-ಪುರದಾಳ ವಿಶ್ವಾರಾಧ್ಯ ಮಠಾಧಿಪತಿ ತಪೋರತ್ನ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಯುವ ಮುಖಂಡರಾದ ಶಂಕರಗೌಡ ಕೋಟಿಖಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕ್ರಯ್ಯ ಹಿರೇಮಠ ವಹಿಸಿದ್ದರು.ಇದೇ ಸಂದರ್ಭದಲ್ಲಿ ಶಾಸಕರ ಸಹೋದರರಾದ ಸಚೀನಗೌಡ ಪಾಟೀಲ(ಕುದರಿಸಾಲವಾಡಗಿ), ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎ.ಮೋಮಿನ್, ಪ್ರವಚನಕಾರ ಮಹಾಂತಯ್ಯ ಸ್ವಾಮೀಜಿ, ಬಿಜೆಪಿ ಮುಖಂಡರಾದ ಸಿದ್ದು ಬುಳ್ಳಾ, ತಾಳಿಕೋಟಿ ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ(ಎಂ.ಎಲ್.ಎ), ಕೋರವಾರ ಪಿಕೆಪಿಎಸ್ ಅಧ್ಯಕ್ಷ ಸಂಗಮೇಶ ಛಾಯಗೋಳ, ಮುಖಂಡರುಗಳಾದ ವೀರೇಶ ನಾಡಗೌಡ, ಸುಭಾಷಗೌಡ ದೇವರಗುಡಿ, ಶಂಕ್ರಪ್ಪ ಬಂಗಾರಗುಂಡ, ಗೋಲ್ಲಾಳಪ್ಪ ಪಟ್ಟಣಶೆಟ್ಟಿ, ಗುತ್ತಪ್ಪಗೌಡ ಕೋಟಿಖಾನಿ, ಹುಸೇನ್ ನಾಗಾವಿ, ಮಹಾಂತಯ್ಯ ಹಿರೇಮಠ, ಶಾಂತಪ್ಪ ಕೋಟಿಖಾನಿ, ಪ್ರಭುಗೌಡ ದೇವರಗುಡಿ, ಸೋಮನಗೌಡ ಕೋಟಿಖಾನಿ, ನಿಂಗಣ್ಣ ಪಾಕಿ, ಸಲಬಣ್ಣ ಬಡಿಗೇರ, ಅವಣ್ಣ ಯಂಕಂಚಿ, ನಾನಾಗೌಡ ಕರ್ನಾಳ, ಶರಣಗೌಡ ಕೋಟಿಖಾನಿ, ಶರಣಪ್ಪ ಹಿಪ್ಪರಗಿ (ಪಡಶೆಟ್ಟಿ), ಅಪ್ಪಸಾಹೇಬ್ ದೇವರಗುಡಿ, ಹುಸೇನ್ ನಾಗಾವಿ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು, ಮಹಿಳೆಯರು ಹಾಗೂ ಯುವಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ಸುರೇಶ ಭೋವಿ ಸ್ವಾಗತಿಸಿ, ವಂದಿಸಿದರು.