ಮಹಾ ಮಳೆಗೆ ನಲುಗಿದ ಬದುಕು

| Published : Jul 29 2024, 12:50 AM IST

ಸಾರಾಂಶ

ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತರುವ ಕಾರಣಕ್ಕೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಈಗಾಗಲೇ ನಂದಗಾಂವ, ಡವಳೇಶ್ವರ, ಮಿರ್ಜಿ ಸೇತುವೆಗಳು ಮುಳುಗಡೆಯಾಗಿವೆ. ಏಕಾಏಕಿ ಅಧಿಕ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಿದ್ದರಿಂದ ನಂದಗಾಂವ ಗ್ರಾಮದ ಸುತ್ತ ನೀರು ಆವರಿಸಿ ಜಲ ದಿಗ್ಬಂಧನ ವಿಧಿಸಿದೆ. ಇದರಿಂದ ಗ್ರಾಮದ ಜನರು ತೀವ್ರ ಪರದಾಟ ಅನುಭವಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತರುವ ಕಾರಣಕ್ಕೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಈಗಾಗಲೇ ನಂದಗಾಂವ, ಡವಳೇಶ್ವರ, ಮಿರ್ಜಿ ಸೇತುವೆಗಳು ಮುಳುಗಡೆಯಾಗಿವೆ. ಏಕಾಏಕಿ ಅಧಿಕ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಿದ್ದರಿಂದ ನಂದಗಾಂವ ಗ್ರಾಮದ ಸುತ್ತ ನೀರು ಆವರಿಸಿ ಜಲ ದಿಗ್ಬಂಧನ ವಿಧಿಸಿದೆ. ಇದರಿಂದ ಗ್ರಾಮದ ಜನರು ತೀವ್ರ ಪರದಾಟ ಅನುಭವಿಸುವಂತಾಗಿದೆ.

9 ಸೇತುವೆ ಜಲಾವೃತ:

ಘಟಪ್ರಭಾ ನದಿಗೆ ಶುಕ್ರವಾರ ರಾತ್ರಿ ದುಪದಾಳ ಮಾರ್ಕಂಡೇಯ, ಬಳ್ಳಾರಿ ನಾಲಾದಿಂದ 60000 ಅಧಿಕ ಕ್ಯುಸೆಕ್ ನೀರು ಹರಿಬಿಟ್ಟ ಹಿನ್ನೆಲೆ ಘಟಪ್ರಭಾ ನದಿ ಪಾತ್ರದ ಹಳ್ಳಿಗಳು ಜಲಾವೃತ್ತವಾಗಿವೆ. ರಬಕವಿ ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮ ಜಲದಿಗ್ಭಂಧನಕ್ಕೆ ಒಳಪಟ್ಟಿದೆ. ಜನ ಜಾನುವಾರುಗಳ ಸುರಕ್ಷತೆ ಬಹಳ ಮುಖ್ಯ ಅದಕ್ಕಾಗಿ ಕಾಳಜಿ ಕೇಂದ್ರ ತೆರೆದಿದ್ದು ಜನರು ಸಹಕರಿಸಲು ಕೋರಲಾಗಿದೆ.

ನಂದಗಾಂವ-ಅವರಾದಿ ಧವಳೇಶ್ವರ-ಢವಳೇಶ್ವರ ಮಿರ್ಜಿ-ಅಕ್ಕಿಮರಡಿ ಹೊಸ ಸೇತುವೆ ಸೇರಿದಂತೆ ಮೂರು ಸೇತುವೆಗಳು ಹಾಗೂ ಮುಧೋಳ ತಾಲೂಕಿನ 6 ಸೇತುವೆಗಳು ಸೇರಿ ಒಟ್ಟು ಒಂಬತ್ತು ಸೇತುವೆಗಳು ಸಂಪೂರ್ಣ ಜಲಾವ್ರತ್ತವಾಗಿವೆ.

ಅನೇಕ ಗ್ರಾಮಗಳಿಗೆ ಸಂಪರ್ಕ ಕಡಿತ:

ಸೇತುವೆಗಳು ಜಲಾವೃತ್ತ ಆಗಿರುವುದರಿಂದ ಮುಧೋಳ ತಾಲೂಕಿನ ಮಿರ್ಜಿ, ಒಂಟಗೋಡಿ, ಚನ್ನಾಳ, ಮಲ್ಲಾಪುರ, ಬೆಳಗಾವಿ ಜಿಲ್ಲೆಯ ಗಡಿಭಾಗ ಮೂಡಲಗಿ ತಾಲೂಕಿನ ಡವಳೇಶ್ವರ, ಬಿಸನಕೊಪ್ಪ, ಹುಣಶ್ಯಾಳ ಪಿ ವೈ, ವೆಂಕಟಾಪುರ, ಅವರಾದಿ, ಆಳ್ಳಿಮಟ್ಟಿ, ಯರಗುದ್ರಿ, ತಿಮ್ಮಾಪುರ, ಹೊಸ ಯರಗುದ್ರಿ, ಕುಲಗೋಡ, ಕೌಜಲಗಿ, ಯಾದವಾಡ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಪ್ರವಾಹ ಪೀಡಿತ ಗ್ರಾಮಗಳಿಗೆ ನೇಮಕಗೊಳಿಸಿರುವ ಎಲ್ಲ ನೋಡಲ್ ಅಧಿಕಾರಿಗಳು ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ಮುಂದಿನ 3-4 ದಿನಗಳಲ್ಲಿ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸ್ಥಳದಲ್ಲಿ ಇದ್ದು ಕಾರ್ಯನಿರ್ವಹಿಸಬೇಕು ಎಂದು ಜಮಖಂಡಿ ಎ.ಸಿ ಶ್ವೇತಾ ಬಡೀಕರ ಸೂಚನೆ ನೀಡಿದ್ದಾರೆ.

ಸ್ಥಳಾಂತರಕ್ಕೆ ಸೂಚನೆ:

ನದಿಗೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಹಳೇ ನಂದಗಾಂವದಲ್ಲಿನ ಎಲ್ಲಾ ಕುಟುಂಬಗಳನ್ನು ಹೊಸ ನಂದಗಾಂವ ಗ್ರಾಮಕ್ಕೆ ಸ್ಥಳಾಂತರಿಸಲು ರಬಕವಿ ಬನಹಟ್ಟಿ ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದೆ.

ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ ನೋಡಲ್ ಅಧಿಕಾರಿ ವೆಂಕಟೇಶ್ ಬೆಳಗಲ, ಠಾಣಾಧಿಕಾರಿ ಪ್ರವೀಣ್ ಬೀಳಗಿ ತಾಪಂ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳು ಪಿಡಿಒ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ತಿಳಿಸಿದ್ದಾರೆ.

ಡಂಗೂರ: ಮಿರ್ಜಿ ಗ್ರಾಮದ ಜನರಿಗೆ ತಮ್ಮ ತಮ್ಮ ಜಾನುವಾರ ಸಮೇತ ಸಾಮಾನು ಸರಂಜಾನು ಕಟ್ಟಿಕೊಂಡು ಸರಕಾರಿ ಪ್ರಾಥಮಿಕ ಶಾಲೆ ಕಡೆ ಬರಲು ಡಂಗೂರ ಸಾರಿ ತಿಳಿಸಲಾಗಿದೆ.

ವೈಜ್ಞಾನಿಕ ರೀತಿ ಸ್ಥಳಾಂತರ:

ಯುಕೆಪಿ ಮಾದರಿಯಲ್ಲಿ ವೈಜ್ಞಾನಿಕವಾಗಿ ನಂದಗಾಂವ ಗ್ರಾಮವನ್ನು ಸ್ಥಳಾಂತರ ಮಾಡಲು ಇಡೀ ನಂದಗಾಂವ ಗ್ರಾಮಸ್ಥರು ಒಕ್ಕೊರಲಿನ ಒತ್ತಾಯ ಮಾಡುತ್ತಿದ್ದಾರೆ. ಅದಕ್ಕೆ ಸರ್ಕಾರ ಕಳೆದ ಹಲವಾರು ವರ್ಷಗಳಿಂದ ಇದೇ ರೀತಿ ತೊಂದರೆ ಅನುಭವಿಸುತ್ತಿದ್ದು. ಸರ್ಕಾರ ಇದಕ್ಕೆ ಬೇಗನೆ ಸ್ಪಂದಿಸಿ ಶಾಶ್ವತ ಪರಿಹಾರ ಒದಗಿಸಬೇಕೆಂದು ಅಗ್ರಹಿಸಿದ್ದಾರೆ.

ಡವಳೇಶ್ವರ ಗ್ರಾಮದಲ್ಲಿ ನದಿ ನೀರು ಲಕ್ಷ್ಮಿ ಗುಡಿಯವರೆಗೆ ಬಂದಿದಿದ್ದು ನೂರಾರು ಮನೆಗಳು ಜಲಾವೃತವಾಗಿವೆ. ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕಾದ ಅವಶ್ಯಕತೆ ಇದೆ. ಇಲ್ಲಿಯೂ ಕಾಳಜಿ ಕೇಂದ್ರ ತೆರೆಯಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ. ಜನ ಜಾನುವಾರ ಸಂಕಷ್ಟಕ್ಕೆ ಸಿಲುಕಿವೆ. ತಕ್ಷಣ ಪರಿಹಾರಕ್ಕಾಗಿ ಒಕ್ಕೊರಲಿನ ಮನವಿ ಮಾಡಿದ್ದಾರೆ.

ಡವಳೇಶ್ವರ, ನಂದಗಾಂವ, ಅಕ್ಕಿಮರಡಿ, ಮತ್ತು ಮಿರಜಿ ಗ್ರಾಮಗಳ ಸಾವಿರಾರು ಎಕರೆ ಬೆಳೆ ನೀರಿನಲ್ಲಿ ಮುಳುಗಿ ತೀವ್ರ ಹಾನಿಯಾಗಿದೆ. ಕಬ್ಬು, ಗೋವಿನ ಜೋಳ ಸೇರಿ ಇತರೆ ವಾಣಿಜ್ಯ ಬೆಳೆಗಳಿಗೆ ಹಾನಿಯಾಗಿವೆ. ಸರ್ಕಾರ ಸೂಕ್ತ ಪರಿಹಾರ ಕೊಡಬೇಕೆಂದು ಸಂತ್ರಸ್ತ ರೈತರ ಒಕ್ಕೊರಲಿನ ಆಗ್ರಹವಾಗಿದೆ.

ಸಮೀಕ್ಷೆಗೆ ಆಗ್ರಹ:

ಪ್ರವಾಹ ಪೀಡಿತ ಪ್ರದೇಶವನ್ನು ನಿಖರವಾಗಿ ಸಮೀಕ್ಷೆ ಮಾಡಿ ಪ್ರವಾಹ ಪೀಡಿತ ರೈತರಿಗೆ ಸೂಕ್ತ ಸ್ಪಂದಿಸಲು ಸರ್ಕಾರಕ್ಕೆ ಸಂತ್ರಸ್ತರ ಆಗ್ರವಾಗಿದೆ.

ಈಚೆಗೆ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರು ನಂದಗಾಂವ, ಢವಳೇಶ್ವರ, ಮಿರ್ಜಿ ಗ್ರಾಮಗಳ ನದಿ ತಟದ ಸಂತ್ರಸ್ತರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಹ ಸಂತ್ರಸ್ತರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರ ಈಗಾಗಲೇ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ. ಸದ್ಯಕ್ಕೆ ಕಾಳಜಿ ಕೇಂದ್ರಗಳಲ್ಲಿ ಎಲ್ಲರೂ ವಾಸ ಮಾಡಬೇಕು. ಬೇರೆ ಕಡೆ ಜಾಗ ಇರುವವರು ಅಲ್ಲಿ ಇರಬಹುದು ಎಂದರು.

---

ಕೋಟ್:

ಜನ ಮತ್ತು ಜಾನುವಾರಗಳ ಸುರಕ್ಷತೆ ದೃಷ್ಟಿಯಿಂದ ಈಗಾಗಲೇ ಕಾಳಜಿ ಕೇಂದ್ರ ತೆರೆಯಲಾಗಿದೆ. ಅಲ್ಲಿ ಸೂಕ್ತ ಅನುಕೂಲಗಳನ್ನು ಮಾಡಲಾಗಿದೆ. ಜನರು ಯಾವುದೇ ರೀತಿಯಲ್ಲಿ ಭಯ ಭೀತರಾಗಬಾರದು.

-ಶ್ವೇತಾ ಬಿಡೀಕರ, ಜಮಖಂಡಿ ವಿಭಾಗದ ಎಸಿ