ತಾಲೂಕಿನ ಸುಕ್ಷೇತ್ರ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪಮುತ್ಯಾನ ಜಾತ್ರೆಯಂಗವಾಗಿ ನಡೆಯುವ ಜಾನುವಾರುಗಳ ಜಾತ್ರೆಯಲ್ಲಿ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಜಾನುವಾರುಗಳು ಶುಕ್ರವಾರ-ಶನಿವಾರ ಜಾತ್ರೆಯಲ್ಲಿ ಕಂಡುಬಂದವು. ಜಾನುವಾರುಗಳ ಜಾತ್ರೆಯಲ್ಲಿ ಜಾನುವಾರುಗಳನ್ನು ಖರೀದಿಸಲು, ಮಾರಾಟ ಮಾಡಲು ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದು ಕಂಡುಬಂದಿತು.
ಬಸವರಾಜ ನಂದಿಹಾಳ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿತಾಲೂಕಿನ ಸುಕ್ಷೇತ್ರ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪಮುತ್ಯಾನ ಜಾತ್ರೆಯಂಗವಾಗಿ ನಡೆಯುವ ಜಾನುವಾರುಗಳ ಜಾತ್ರೆಯಲ್ಲಿ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಜಾನುವಾರುಗಳು ಶುಕ್ರವಾರ-ಶನಿವಾರ ಜಾತ್ರೆಯಲ್ಲಿ ಕಂಡುಬಂದವು. ಜಾನುವಾರುಗಳ ಜಾತ್ರೆಯಲ್ಲಿ ಜಾನುವಾರುಗಳನ್ನು ಖರೀದಿಸಲು, ಮಾರಾಟ ಮಾಡಲು ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದು ಕಂಡುಬಂದಿತು.ಈ ಸಲದ ಜಾನುವಾರುಗಳ ಜಾತ್ರೆಯಲ್ಲಿ ಎತ್ತುಗಳು ₹1.50 ಲಕ್ಷದಿಂದ ₹2 ಲಕ್ಷದವರೆಗೂ ಮಾರಾಟವಾದವು. ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳು ಸಹ ಮಾರಾಟಕ್ಕೆ ಬಂದಿದ್ದವು. ರೈತ ಬಾಂಧವರು ತಮಗೆ ಬೇಕಾದ ಜಾನುವಾರುಗಳನ್ನು ಖರೀದಿ ಮಾಡುವ ಜೊತೆಗೆ ಜಾನುವಾರುಗಳಿಗೆ ಬೇಕಾದ ಹಗ್ಗ, ಗೆಜ್ಜೆ ಸರ, ಹಣೆಕಟ್ಟು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಶುಕ್ರವಾರದಿಂದ ಆರಂಭವಾಗಿರುವ ಜಾನುವಾರುಗಳ ಜಾತ್ರೆಗೆ ಜಿಲ್ಲೆ ಸೇರಿದಂತೆ ಶಹಾಪೂರ, ಯಾದಗಿರಿ, ಬಾಗಲಕೋಟೆ, ರಾಯಚೂರ ವಿವಿಧ ಜಿಲ್ಲೆಯ ರೈತ ಬಾಂಧವರು ಮಾರಾಟ ಮಾಡುವ ಉದ್ದೇಶದಿಂದ ಅವುಗಳಿಗೆ ಅಗತ್ಯವಿರುವ ಮೇವಿನೊಂದಿಗೆ ಬಂದು ಬಿಡು ಬಿಟ್ಟಿದ್ದಾರೆ. ಬಿರು ಬಿಸಿಲಿನಿಂದಾಗಿ ಬಸವಳಿಯುತ್ತಿರುವ ಎತ್ತುಗಳಿಗೆ ಕೆಲ ರೈತರು ನೆರಳು ಮಾಡಿದ್ದಾರೆ. ಈ ಜಾತ್ರೆಯಲ್ಲಿ ಅಥಣಿ, ಗೋಟೆ, ಬೆನಕದಿನ್ನಿಯಿಂದ ಎತ್ತಿನ ಗಾಡಿಗಳು ಮಾರಾಟಕ್ಕೆ ಬಂದಿವೆ. ಎರಡೂವರೆ ಪೂಟ್ನಿಂದ ಹಿಡಿದು 6-7 ಫೂಟ್‌ದವರೆಗೂ ಇರುವ ಎತ್ತಿನ ಗಾಡಿಗಳು ಕಂಡುಬಂದವು. ರೈತರು ಚೌಕಾಸಿ ಮಾಡಿ ಎತ್ತಿನ ಗಾಡಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಎರಡೂವರೆ ಫೂಟ್‌ನ ₹12 ಸಾವಿರ, ನಾಲ್ಕು ಫೂಟ್ ಗಾಡಿಗೆ ₹16 ಸಾವಿರ, ಮೂರುವರೆ ಫೂಟ್‌ನ ಗಾಡಿಗೆ ₹14 ಸಾವಿರ, 5 ಫೂಟ್‌ನ ಗಾಡಿಗೆ ₹22 ಸಾವಿರ, 6 ಫೂಟ್‌ನ ಗಾಡಿಗೆ ₹24 ಸಾವಿರ, 7 ಫೂಟ್‌ನ ಗಾಡಿಗೆ ₹28-30 ಸಾವಿರ ಬೆಲೆ ಇದೆ. ಕಳೆದ ವರ್ಷಕ್ಕಿಂತಲೂ ₹2 ಸಾವಿರ ಎತ್ತಿನ ಗಾಡಿಗಳ ಬೆಲೆ ಹೆಚ್ಚಳವಾಗಿದೆ.ಜಾತ್ರಾ ಉತ್ಸವ ಸಮಿತಿಯಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಜೊತೆಗೆ ರೈತರು ಇರುವೆಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡುತ್ತಿರುವುದು ಕಂಡುಬಂದಿತ್ತು. ಜನರು ವಿವಿಧ ಮನರಂಜನಾ ಆಟಿಕೆಗಳಲ್ಲಿ ಕುಳಿತು ಸಂಭ್ರಮ ಪಡುತ್ತಿರುವುದು ಕಂಡು ಬಂದಿತು. ಪ್ರತಿ ವರ್ಷ ಯುಗಾದಿ ಹಬ್ಬದಂದು ನಡೆಯುವ ಸುಕ್ಷೇತ್ರ ಜಾಯವಾಡಗಿಯ ಶಿವಪ್ಪ ಮುತ್ಯಾ, ಸೋಮನಾಥ ಮುತ್ಯಾ ಜಾತ್ರಾಮಹೋತ್ಸವದಲ್ಲಿ ವಿಶೇಷವಾಗಿ ಜಾನುವಾರು ಜಾತ್ರೆ ನಡೆಯುತ್ತದೆ. ಇದು ರೈತ ಬಾಂಧವರಿಗೆ ತುಂಬಾ ಅನುಕೂಲವಾಗಿದೆ. ಜಾನುವಾರುಗಳಿಗೆ ಏನಾದರೂ ರೋಗ ಬಂದರೇ ಈ ದೇವಸ್ಥಾನಕ್ಕೆ ಬಂದು ಪ್ರದಕ್ಷಿಣೆ ಹಾಕಿಸಿದರೇ ಜಾನುವಾರುಗಳ ರೋಗ ಗುಣಮುಖವಾಗುವುದು ಎಂಬ ನಂಬಿಕೆ ರೈತರಲ್ಲಿದೆ.ಜಾನುವಾರು ಜಾತ್ರೆಯಲ್ಲಿ ಎತ್ತುಗಳಿಗೆ, ಆಕಳುಗಳಿಗೆ ಬಾರಿ ಡಿಮಾಂಡ್ ಇದೆ. ಉತ್ತಮ ರಾಸುಗಳು ಎರಡು ಲಕ್ಷದವರೆಗೂ ಮಾರಾಟವಾಗಿವೆ.-ಹಣಮಂತ ಗುಬ್ಬಾ, ಇಂಗಳೇಶ್ವರ ಗ್ರಾಮಸ್ಥ.
ನಾನು ಎರಡೂವರೆ ಫೂಟ್‌ದಿಂದ ಹಿಡಿದು 7 ಫೂಟ್‌ದವರೆಗೂ ಇರುವ ಎತ್ತಿನ ಗಾಡಿಗಳನ್ನು ಮಾರಾಟಕ್ಕೆ ತಂದಿದ್ದೇನೆ. 52 ಗಾಡಿ ತರಲಾಗಿದೆ. ಸ್ವಲ್ಪ ಮಟ್ಟಿಗೆ ಗಾಡಿಗಳು ಮಾರಾಟವಾಗಿವೆ. ನಿನ್ನೆ 12 ಮಾರಾಟವಾಗಿವೆ. ಇಂದು 7-8 ಗಾಡಿ ಮಾರಾಟವಾಗಿವೆ. ನಾಳೆ ಒಂದು ದಿನ ಇದ್ದು ಎಷ್ಟು ಮಾರಾಟವಾಗುತ್ತವೋ ಅಷ್ಟು ಮಾರಾಟ ಮಾಡುವುದಾಗಿ ಹೇಳಿದ ಅವರು, ಈ ಜಾತ್ರೆಯಲ್ಲಿ ಜಾತ್ರಾ ಸಮಿತಿಯಿಂದ ನಮಗೆ ಎಲ್ಲ ರೀತಿಯ ವ್ಯವಸ್ಥೆಯ ಮಾಡಲಾಗಿದೆ.-ಮಹಾಂತೇಶ ಭಜಂತ್ರಿ,
ಎತ್ತಿನ ಗಾಡಿ ಮಾರಾಟಗಾರ ಜಮಖಂಡಿ.