ಪಂಚಾಂಗ ರೂಪದಲ್ಲಿ ಉಳಿದಿರುವ ಕಾಲಗಣನೆಯನ್ನು ದಿನದರ್ಶಿಕೆಯ ರೂಪದಲ್ಲಿ ಅದೂ ಭಾರತೀಯ ಕಾಲಗಣನೆಯ ದಿನದರ್ಶಿಕೆಯಾಗಿ ಹೊರತರುವ ಸಂಸ್ಕೃತ ವಿದ್ವಾಂ ಸರೂ ಆಗಿರುವ ಕನ್ನಡಿಗರೋರ್ವರ ಸಾರ್ಥಕ ಪ್ರಯತ್ನಕ್ಕೆ ಈ ಯುಗಾದಿಗೆ ಐದು ವರ್ಷ ತುಂಬಿದೆ.

ಹೊಸತನಕ್ಕೆ ನಾಂದಿ ಹಾಡುತ್ತಿದೆ ಆಮ್ನಾಯಃ ಭಾರತೀಯ ದಿನದರ್ಶಿಕೆ!

ಎಂ. ಗಣೇಶ್ ಕಾಮತ್

ಕನ್ನಡಪ್ರಭ ವಾರ್ತೆ ಮೂಡುಬಿದಿರೆಪಂಚಾಂಗ ರೂಪದಲ್ಲಿ ಉಳಿದಿರುವ ಕಾಲಗಣನೆಯನ್ನು ದಿನದರ್ಶಿಕೆಯ ರೂಪದಲ್ಲಿ ಅದೂ ಭಾರತೀಯ ಕಾಲಗಣನೆಯ ದಿನದರ್ಶಿಕೆಯಾಗಿ ಹೊರತರುವ ಸಂಸ್ಕೃತ ವಿದ್ವಾಂ ಸರೂ ಆಗಿರುವ ಕನ್ನಡಿಗರೋರ್ವರ ಸಾರ್ಥಕ ಪ್ರಯತ್ನಕ್ಕೆ ಈ ಯುಗಾದಿಗೆ ಐದು ವರ್ಷ ತುಂಬಿದೆ.ಕಾಲ ಗಣನೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವಾಗ ಪಾಶ್ಚಾತ್ಯ ಕ್ಯಾಲೆಂಡರ್ ಗೆ ಜೋತುಬೀಳುವ ಬದಲಾಗಿ ಕಾಲಗಣನೆಯಲ್ಲೂ ಆತ್ಮನಿರ್ಭರತೆ ಸಾಧಿಸಲು ಸಾಧ್ಯ ಎಂದು ತೋರಿಸಿಕೊಟ್ಟವರು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥರೂ ಆಗಿರುವ ವಿದ್ವಾಂಸ ಡಾ. ವಿನಾಯಕ ಭಟ್ ಗಾಳಿಮನೆ. ಯಗಾದಿಯೇ ಭಾರತೀಯರಿಗೆ ಹೊಸವರ್ಷ ಎನ್ನುವ ವಾಸ್ತವವನ್ನು ತೋರಿಸಿರುವ ಅವರ ದಿನದರ್ಶಿಕೆ ದೇಶದ ರಾಷ್ಟ್ರೀಯ ದಿನಾಂಕ ಪದ್ಧತಿಯನ್ನು ಹೊಂದಿರುವುದು ವಿಶೇಷ. ಯುಗಾದಿಯಿಂದ ಚೈತ್ರ, ವೈಶಾಖ ಮಾಸ ಹೀಗೆ ದಿನದರ್ಶಿಕೆಗಳು ಬಂದಿರಬಹುದು. ಆದರೆ ಗಾಳಿಮನೆಯವರ ದಿನದರ್ಶಿಕೆ ರಾಷ್ಟ್ರೀಯ ದಿನಾಂಕ ಪದ್ಧತಿಯ ಲೆಕ್ಕಾಚಾರವಿರುವ ದಿನದರ್ಶಿಕೆ ಎನ್ನುವುದು ಗಮನಾರ್ಹ.

ಕಾಲಗಣನೆಯಲ್ಲೂ ದೇಶೀಯತೆ: ಈ ಯುಗಾದಿಗೆ ಕಲಿಯುಗದ ಪ್ರಥಮಪಾದದ 5128ನೇ ವರ್ಷಾರಂಭ. ಹಾಗಾಗಿ ನಾಳೆಯ ದಿನಾಂಕ 01.01.5128 ( ಅಂದರೆ ಪಾಡ್ಯ (1) ಚೈತ್ರಮಾಸ(1)ದ 5128ನೇ ವರ್ಷ ಎಂದರ್ಥ). ಒಂದು ತಿಥಿ ಕೊರತೆಯಾದಾಗ, ಒಂದೇ ದಿನ ಎರಡು ತಿಥಿಗಳಿದ್ಧಾಗ ಈ ದಿನಾಂಕಗಳ ಲೆಕ್ಕಾಚಾರವೂ ವಿಶಿಷ್ಟವಾಗಿರುತ್ತದೆ. ಒಮ್ಮೆ ಬಳಕೆ ಆರಂಭಿಸಿದರೆ ರಾಷ್ಟ್ರೀಯ ದಿನಾಂಕವನ್ನು ಬಳಸುತ್ತಿದ್ದೇವೆ ಎನ್ನುವ ಅಭಿಮಾನವೂ ಜತೆಗಿರುತ್ತದೆ.

ಅಷ್ಟಕ್ಕೂ ಇದು ಪಂಚಾಗದ ಸಾರಾಂಶವೂ ಹೌದು. ಒಮ್ಮೆ ಪಾಡ್ಯ, ಬಿದಿಗೆಯ ಲೆಕ್ಕಾಚಾರಕ್ಕೆ ಒಗ್ಗಿಕೊಂಡರೆ ಪ್ರತೀ ತಿಂಗಳು ಬರುವ ಎರಡು ಏಕಾದಶಿಗಳು, ಹುಣ್ಣಿಮೆ, ಅಮವಾಸ್ಯೆ, ಪಂಚಮಿ, ಸಂಕಷ್ಟಿ, ಸಂಕ್ರಮಣ ಹೀಗೆ ಎಲ್ಲದರ ಮಹತ್ವ ಅರಿವಾಗುತ್ತದೆ. ನಮ್ಮ ಆಮಂತ್ರಣ, ಪತ್ರ ವ್ಯವಹಾರ, ದಿನ ಬಳಕೆಯಲ್ಲಿ ದಿನಾಂಕದ ಜತೆ ಆವರಣದಲ್ಲಿ ಭಾರತೀಯ ದಿನಾಂಕವನ್ನೂ ನಮೂದಿಸುವ ಹವ್ಯಾಸ ಬೆಳೆಸಿಕೊಂಡಾಗ ಕಾಲಗಣನೆಯಲ್ಲೂ ನಾವು ಆತ್ಮನಿರ್ಭರತೆ ಸಾಧಿಸಿದಂತಾಗುತ್ತದೆ. ಸನಾತನ ಸಂಸ್ಕೃತಿ ಉಳಿಸಬೇಕು ಎನ್ನುವ ಕಾಳಜಿಯೊಂದಿಗೆ ರಾಷ್ಟ್ರೀಯ ದಿನಾಂಕಗಳೊಂದಿಗೆ ಹೊರ ಬರುತ್ತಿರುವ ದಿನದರ್ಶಿಕೆ ನಾಡಿನಲ್ಲಿ ಮಾತ್ರವಲ್ಲ ದೇಶದಲ್ಲೂ ಇದೊಂದೇ ಎನ್ನುವುದು ಈ ದಿನದರ್ಶಿಕೆಯ ಹೆಗ್ಗಳಿಕೆ. ಮೂಡುಬಿದಿರೆಯ ಸೂರ್ಯೋದಯವನ್ನೇ ಮೂಲವಾಗಿಟ್ಟುಕೊಂಡು ನಿಖರತೆಯಿಂದ ಈ ದಿನದರ್ಶಿಕೆಯ ಲೆಕ್ಕಾಚಾರ ನಡೆದಿದೆ.

ದಿನನಿತ್ಯದ ವ್ಯಾವಹಾರಿಕ ವಿಚಾರ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಹತ್ವದ ದಿನಾಚರಣೆಗಳು, ಪ್ರಮುಖ ಹಬ್ಬ ಹರಿದಿನಗಳು, ಅಷ್ಟೇ ಅಲ್ಲ ದಕ್ಷಿಣ ಕನ್ನಡ , ಉಡುಪಿ, ಉತ್ತರ ಕನ್ನಡದ ದೇವಾಲಯಗಳ ಪ್ರಮುಖ ವಿಶೇಷ ದಿನಗಳ ಬಗ್ಗೆಯೂ ಈ ತೂಗು ಪಂಚಾಂಗ ಮಾಹಿತಿ ನೀಡುತ್ತದೆ. ಇಂತಹದ್ದೊಂದು ಅಪರೂಪದ ಪ್ರಯತ್ನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಹೊಸನಗರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಮೂಡುಬಿದಿರೆಯ ಚಾರುಕೀರ್ತಿ ಭಟ್ಟಾರಕ ಶ್ರೀಗಳ ಪ್ರೋತ್ಸಾಹದ ಜತೆಗೆ ಡಾ. ಎಂ. ಮೋಹನ ಆಳ್ವರ ವಿಶೇಷ ಸಹಕಾರ ಇದೆ ಎನ್ನುವುದು ಗಮನಾರ್ಹ. ಡಾ. ಆಳ್ವರಂತೂ ಸಾವಿರಕ್ಕೂ ಮಿಕ್ಕಿದ ವಿಶೇಷ ಆಳ್ವಾಸ್ ಆವೃತ್ತಿ ರೂಪಿಸಿ ಆಸುಪಾಸಿನ ಪ್ರಮುಖ ಸ್ಥಳಗಳಿಗೆ ಉಚಿತವಾಗಿ ವಿತರಿಸುತ್ತಲೇ ಬಂದಿದ್ದಾರೆ. ಅನೇಕ ದಾನಿಗಳೂ ಗಾಳಿ ಮನೆಯವರ ಪರಿಶ್ರಮವನ್ನು ಬೆಂಬಲಿಸಿದ್ಧಾರೆ. ವಿನಾಯಕ ಭಟ್ಟರೆಂಬ ವಿಸ್ಮಯ!

ಉತ್ತರ ಕನ್ನಡದ ಪ್ರತಿಷ್ಠಿತ ಗಾಳಿಮನೆಯ ಹವ್ಯಕ ವೇದ ರತ್ನ ವಿದ್ವಾನ್ ಚಂದ್ರಶೇಖರ ಭಟ್ - ಸವಿತಾ ಭಟ್ ದಂಪತಿಯ ಸುಪುತ್ರ ವಿನಾಯಕ ಭಟ್ ಹಿಂದಿ ಭಾಷೆ ಮತ್ತು ತರ್ಕ ಶಾಸ್ತ್ರದ ವಿದ್ವಾಂಸರು. ಹನ್ನೊಂದರೆ ಎಳವೆಯಲ್ಲೇ ವೇದಾಧ್ಯಯನ, 18ರ ಹರೆಯದಲ್ಲೇ ಸಂಪೂರ್ಣ ಭಗವದ್ಗೀತೆ ಕಂಠಪಾಠ ಮಾಡಿಕೊಳ್ಳುತ್ತಾ ಬೆಳೆದವರು. ಈಗಾಗಲೇ ಮೂರು ಬಾರಿ ಸಂಪೂರ್ಣ ಭಗವದ್ಗೀತೆ ಕಂಠಪಾಠದೊಂದಿಗೆ ಅರ್ಥ ವಿವರಿಸಿದ ಸಾಧಕರು. ಯಕ್ಷಗಾನ ಅರ್ಥಧಾರಿಯಾಗಿ ನೂರಾರು ಪ್ರವಚನ, ಉಪನ್ಯಾಸಗಳನ್ನೂ ಪೂರೈಸಿರುವ ಪ್ರತಿಭೆ. ಕಳೆದ ಆರು ವರ್ಷಗಳಿಂದ ಯುಗಾದಿಗೆ ದಿನದರ್ಶಿಕೆ ಪ್ರಕಟಿಸುತ್ತಿದ್ದಾರೆ. ಮೊಬೈಲ್ ಮೂಲಕವೂ ಕನ್ನಡ ಹಿಂದಿ ಸಂಸ್ಕೃತ ಹೀಗೆ ನಿತ್ಯ ಪಂಚಾಂಗ ಪ್ರಕಟಿಸುವ ಮೂಲಕ ಸಹಸ್ರಾರು ಮಂದಿಗೆ ನಿತ್ಯವೂ ಇವರು ತಲುಪುತ್ತಿದ್ದಾರೆ. ತನ್ನ ಸಾಧನೆಯ ಹಾದಿಯಲ್ಲಿ ಹೆತ್ತವರ ಮಾರ್ಗದರ್ಶನ, ಡಾ. ಮೋಹನ ಆಳ್ವರ ವಿಶೇಷ ಪ್ರೋತ್ಸಾಹ ಮಾತ್ರವಲ್ಲ ಪತ್ನಿ ಪ್ರಿಯಾ ಪುತ್ರಿ ಸನ್ನಿಧಿಯ ಸಹಕಾರವೇ ಯಶಸ್ಸಿನ ಮೂಲ ಎನ್ನುವ ವಿನಾಯಕ ಭಟ್ ಗಾಳಿಮನೆ ( ಸಂ: 9449163561) ಅವರ ಪರಿಶ್ರಮಕ್ಕೆ ಪ್ರೋತ್ಸಾಹ ಅಗತ್ಯವಿದೆ.