ನರಸಿಂಹರಾಜಪುರ , ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಕುಸುಬೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದಲೂ ಒಂಟಿ ಸಲಗದ ಕಾಟ ಹೆಚ್ಚಾಗಿದ್ದು ಅಡಕೆ ಗಿಡಗಳನ್ನು ನಾಶ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

- ತುಂಟ ಆನೆ ಹಿಡಿಯಲು ಗ್ರಾಮಸ್ಥರ ಆಗ್ರಹ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಕುಸುಬೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದಲೂ ಒಂಟಿ ಸಲಗದ ಕಾಟ ಹೆಚ್ಚಾಗಿದ್ದು ಅಡಕೆ ಗಿಡಗಳನ್ನು ನಾಶ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕುಸುಬೂರು ಗ್ರಾಮದ ಭಾಸ್ಕರ ಎಂಬುವರ ಅಡಕೆ ತೋಟಕ್ಕೆ ಕಳೆದ ಒಂದು ವಾರದಿಂದಲೂ ಪ್ರತಿದಿನ ಎಂಬಂತೆ ಈ ಒಂಟಿ ಸಲಗ ನುಗ್ಗಿ 60 ರಿಂದ 70 ಅಡಕೆ ಮರ ನಾಶ ಮಾಡಿದೆ. ಅಲ್ಲದೆ ರವಿ ಕುಮಾರ್ ಎಂಬುವರ ತಂತಿ ಬೇಲಿ ಮುರಿದು ಹಾಕಿದೆ. ಅಲ್ಲದೆ ನಟರಾಜ, ಶಶಿ, ಅಶೋಕ, ಪ್ರವೀಣ,ಪುಟ್ಟಸ್ವಾಮಿ, ಪ್ರಸನ್ನ, ಉಮೇಶ ಎಂಬುವರ ಅಡಕೆ ತೋಟಕ್ಕೂ ನುಗ್ಗಿ ಅಡಿಕೆ ಗಿಡ ಹಾಳು ಮಾಡುತ್ತಿದೆ.

ಎಲಿಫೆಂಟ್ ಟಾಸ್ಕ್ ಪೋರ್ಸ್ ತಂಡದವರು ಗ್ರಾಮಕ್ಕೆ ಭೇಟಿ ನೀಡಿ ಒಂಟಿ ಸಲಗ ಓಡಿಸಿದ್ದರು.ಆದರೂ ಮತ್ತೆ ಒಂಟಿ ಸಲಗ ಗ್ರಾಮಕ್ಕೆ ಬರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಕೆ.ಕಣಬೂರು ಕಾಲೋನಿ- ಕುಸುಬೂರು ಮದ್ಯೆ ದಟ್ಟವಾದ 50 ರಿಂದ 60 ಎಕ್ರೆ ಅರಣ್ಯವಿದ್ದು ಈ ಒಂಟಿ ಸಲಗ ಹಗಲು ಹೊತ್ತಿನಲ್ಲಿ ಈ ಅರಣ್ಯಕ್ಕೆ ಸೇರಿಕೊಳ್ಳುತ್ತಿದೆ. ರಾತ್ರಿಯಾದ ಕೂಡಲೇ ಮತ್ತೆ ಗ್ರಾಮಕ್ಕೆ ಬಂದು ತೋಟಕ್ಕೆ ನುಗ್ಗುತ್ತಿದೆ. ಶನಿವಾರ ಸಂಜೆ 5.30ರ ಸುಮಾರಿಗೆ ಒಂಟಿ ಸಲಗ ಗ್ರಾಮಕ್ಕೆ ಬಂದಿದೆ. ಇದರಿಂದ ಗ್ರಾಮದ ಜನರು ಭಯ ಭೀತರಾಗಿದ್ದಾರೆ. ಈ ತುಂಟ ಆನೆಯನ್ನು ಸೆರೆ ಹಿಡಿದು ಇಲ್ಲಿನ ಗ್ರಾಮಸ್ಥರಿಗೆ ನೆಮ್ಮದಿ ನೀಡಬೇಕು ಎಂದು ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ.