ಕೋಮುಲ್ ಭ್ರಷ್ಟಾಚಾರ ವಿರುದ್ಧ ಏಕಾಂಗಿ ಹೋರಾಟ

| Published : Sep 15 2025, 01:00 AM IST

ಕೋಮುಲ್ ಭ್ರಷ್ಟಾಚಾರ ವಿರುದ್ಧ ಏಕಾಂಗಿ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಾ ಅಕ್ರಮಗಳನ್ನು ಒಂದೇ ಸಾರಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಶುದ್ದೀಕರಣ ಮಾಡುತ್ತೇನೆ. ಯಾವ ಹೊಲದಲ್ಲಿ ಪಾರಂ ಹುಲ್ಲು ಹಸನಾಗಿ ಬೆಳೆದಿದೆ, ಜೋಳ ಬೆಳೆದಿದೆ ಎಂಬುದನ್ನು ನೋಡಿಕೊಂಡು ಬಂದು ಯಾವ ಹಸುವಿಗೆ ಹುಲ್ಲು, ಹಿಂಡಿ ಮತ್ತು ಬೂಸಾ ಹಾಕಬೇಕು ಎಂಬುದು ಕೋಮುಲ್‌ ಅಧ್ಯಕ್ಷರಿಗೆ ಗೊತ್ತು. ಅದೆನ್ನೆಲ್ಲ ಕಲಿಯಲು ಕಾಲಾವಕಾಶ ಬೇಕು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೋಮುಲ್‌ನಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ತಮಗೆ ಯಾರೂ‌ ಬೆಂಬಲ ನೀಡದಿದ್ದರೂ ಸಹ ಮಹಾಭಾರತದ ಅಭಿಮನ್ಯುವಿನ ರೀತಿಯಲ್ಲಿ ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಒಂಬತ್ತುಗುಳಿ, ಹುಲಿಬೆಲೆ, ಕಾರಮಂಗಲ ಮತ್ತು ಅಬ್ಬಿಗಿರಿಹೊಸಹಳ್ಳಿ ಗ್ರಾಮಗಳಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘಗಳ ವಾರ್ಷಿಕ ಮಹಾಸಭೆಗಳಲ್ಲಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಜಿಡ್ಡುಗಟ್ಟಿದ ಆಡಳಿತಕೋಮುಲ್‌ನಲ್ಲಿ ಆಡಳಿತ ಮಂಡಳಿ ಹಲವು ವರ್ಷಗಳಿಂದ ಜಿಡ್ಡು ಕಟ್ಟಿದ್ದು, ಅನೇಕ ಭ್ರಷ್ಟಾಚಾರ ಅಕ್ರಮಗಳನ್ನು ಮಾಡುತ್ತಿದ್ದಾರೆ. ಎಲ್ಲಾ ಅಕ್ರಮಗಳನ್ನು ಒಂದೇ ಸಾರಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಶುದ್ದೀಕರಣ ಮಾಡುತ್ತೇನೆ. ಯಾವ ಹೊಲದಲ್ಲಿ ಪಾರಂ ಹುಲ್ಲು ಹಸನಾಗಿ ಬೆಳೆದಿದೆ, ಜೋಳ ಬೆಳೆದಿದೆ ಎಂಬುದನ್ನು ನೋಡಿಕೊಂಡು ಬಂದು ಯಾವ ಹಸುವಿಗೆ ಹುಲ್ಲು, ಹಿಂಡಿ ಮತ್ತು ಬೂಸಾ ಹಾಕಬೇಕು ಎಂಬುದು ಗೌರವಾನ್ವಿತ ಅಧ್ಯಕ್ಷರಿಗೆ ಗೊತ್ತು. ಅದೆಲ್ಲವನ್ನೂ ನಾನು ಒಂದೇ ದಿನಕ್ಕೆ ಕಲಿತುಕೊಳ್ಳಲು ಸಾಧ್ಯವಾಗುವುದಿಲ್ಲ ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದರು.

ಒಕ್ಕೂಟದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಲು ನನಗೆ ಯಾವುದೇ ನಿರ್ದೇಶಕರಿಂದ ಬೆಂಬಲ ಸಿಗದಿದ್ದರೂ ಹಾಲು ಉತ್ಪಾದಕರಿಗೆ ನ್ಯಾಯ ದೊರಕಿಸಿಕೊಡಲು ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ. ಅಭಿವೃದ್ದಿ ಹೆಸರಿನಲ್ಲಿ ನೂರಾರು ಕೋಟಿ ಸಾಲ ಮಾಡಿ ರೈತರ ಮೇಲೆ ಆ ಸಾಲವನ್ನು ಹೊರಿಸಿದ್ದಾರೆ ಎಂದು ಶಾಸಕರು ಆರೋಪಿಸಿದರು.

ಸಭೆಯಲ್ಲಿ ನ್ಯಾಯ ಸಿಗುವುದಿಲ್ಲ

ಇದೇ ತಿಂಗಳ ೨೫ ರಂದು ವಾರ್ಷಿಕ ಮಹಾ ಸಭೆಯಲ್ಲಿ ನಡೆಸುವ ಬಗ್ಗೆ ಸುತ್ತೋಲೆ ಕಳುಹಿಸಿದ್ದಾರೆ. ವಾರ್ಷಿಕ ಮಹಾಸಭೆಗೆ ಯಾರೆಲ್ಲಾ ಅಕ್ರಮ ಕೂಟದವರು ಸೇರಿಕೊಂಡು ಏನೆಲ್ಲಾ ಪ್ರಯತ್ನಗಳನ್ನು ಮಾಡಿಕೊಂಡಿದ್ದಾರೆ, ಜಿಲ್ಲೆಯ ನಾಯಕರು ಯಾರೆಲ್ಲಾ ಬೆಂಬಲವಾಗಿ ನಿಂತಿದ್ದಾರೆ ಎಂಬುದು ನನಗೆ ಗೊತ್ತಿದೆ. ನನ್ನ ಅನಿಸಿಕೆ ಪ್ರಕಾರ ವಾರ್ಷಿಕ ಮಹಾ ಸಭೆಯಲ್ಲಿ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಯಾರಿಗೂ ಮಾತನಾಡಲು ಅವಕಾಶ ಕೊಡುವುದಿಲ್ಲ. ಅದೇ ಗುಂಪುಗಾರಿಕೆ, ಅದೇ ದಬ್ಬಾಳಿಕೆ ನಡೆಯೋದು. ವಾರ್ಷಿಕ ಮಹಾಸಭೆಯಲ್ಲಿ ಎಲ್ಲವನ್ನೂ ಅನುಮೋದನೆ ಮಾಡಿಕೊಂಡರೆ ಎಲ್ಲಾ ಅಕ್ರಮಗಳು ಮುಚ್ಚಿ ಹೋಗೋದಿಲ್ಲ. ಮುಂದೆ ಇದೆ ಮಾರಿ ಹಬ್ಬ ಎಂದು ಮುನ್ನೆಚ್ಚರಿಕೆ ನೀಡಿದ ಅವರು, ತಾಲೂಕಿನ ಗಡಿ ಭಾಗದಲ್ಲಿ ಖಾಸಗಿ ಡೇರಿಗಳ ಹಾವಳಿ ಹೆಚ್ಚಾಗಿದ್ದು ಅದಕ್ಕೆ ಕಡಿವಾಣ ಹಾಕಲು ಮುಂದಾಗುವುದಾಗಿ ಹೇಳಿದರು.

ಗ್ಯಾರಂಟಿ ಜತೆ ಕ್ಷೇತ್ರದ ಅಭಿವೃದ್ಧಿ

ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ನಡೆಯುತ್ತಿಲ್ಲ ಎಂದು ವಿಪಕ್ಷಗಳು ಬೊಬ್ಬೆ ಹಾಕುತ್ತಿದ್ದಾರೆ ಬೊಬ್ಬೆ ಹಾಕುವವರು ಕ್ಷೇತ್ರಕ್ಕೆ ಬಂದು ನೋಡಲಿ. ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ದಿಯೂ ಸರಾಗವಾಗಿ ಸಾಗಿದೆ. ಹಾಲು ಡೇರಿಗಳು ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ ಸಂಘವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಬೇಕೆಂದು ಸಲಹೆ ನೀಡಿದರು.ಸಭೆಯಲ್ಲಿ ಡೇರಿಗಳ ಅಧ್ಯಕ್ಷರಾದ ರಾಮರೆಡ್ಡಿ,ಹೆಚ್.ಕೆ.ನಾರಾಯಣಸ್ವಾಮಿ,ಮುನಿರಾಜು,ನಾರಾಯಣಗೌಡ,ಕಾರ್ಯದರ್ಶಿ ಗಳಾದ ರಮೇಶ್,ವೆಂಕಟೇಶರೆಡ್ಡಿ,ರಾಜಣ್ಣ,ರಂಗನಾಥ್,ಒಕ್ಕೂಟದ ಉಪ ವ್ಯವಸ್ಥಾಪಕ ಗಿರೀಶ್ ಗೌಡ,ವಿಸ್ತರಣಾಧಿಕಾರಿ ಕಿರಣ್ ಕುಮಾರ್,ನಟರಾಜ್,ಭಾನುಪ್ರಕಾಶ್ ,ಅ.ನಾ.ಹರೀಶ್‌ ಮತ್ತಿತರರು ಇದ್ದರು.