ಮಹಾ ನಗರ ಪಾಲಿಕೆ ಕಚೇರಿಯಲ್ಲಿ ಪ್ರಮಾಣ ಪತ್ರ ಅರ್ಜಿ ಸಲ್ಲಿಕೆಗೆ ಮಾರುದ್ದದ ಸರತಿ ಸಾಲು!

| Published : Oct 25 2025, 01:02 AM IST

ಮಹಾ ನಗರ ಪಾಲಿಕೆ ಕಚೇರಿಯಲ್ಲಿ ಪ್ರಮಾಣ ಪತ್ರ ಅರ್ಜಿ ಸಲ್ಲಿಕೆಗೆ ಮಾರುದ್ದದ ಸರತಿ ಸಾಲು!
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ನಗರ ವ್ಯಾಪ್ತಿಯಲ್ಲಿ ಮನೆ ಮನೆ ಆರ್ಥಿಕ ಸಾಮಾಜಿಕ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಶಿಕ್ಷಕರ ಜತೆ ಪಾಲಿಕೆ ಸಿಬ್ಬಂದಿಯೂ ಭಾಗವಹಿಸಿದ್ದರು. ಹೀಗಾಗಿ ಕಳೆದ ಹಲವು ದಿನಗಳಿಂದ ಜನನ-ಮರಣ ಪ್ರಮಾಣ ಪತ್ರ ಪಡೆಯುವ ಕೌಂಟರ್‌ ಸಿಬ್ಬಂದಿ ಇಲ್ಲದೆ ಬಂದ್‌ ಆಗಿ ಸೇವೆಯಲ್ಲಿ ವ್ಯತ್ಯಯವಾಗಿತ್ತು.

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಪ್ರವೇಶ ದ್ವಾರದಲ್ಲಿ ಗುರುವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಉದ್ದದ ಸರತಿ ಸಾಲು ಕಂಡು ಬಂದಿದೆ. ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ನೂರಾರು ಮಂದಿ ಸೇರಿದ್ದು, ಹಿರಿಯ ನಾಗರಿಕರು ಸರತಿಯಲ್ಲಿ ನಿಂತು ಪರದಾಡುವಂತಾಯಿತು.ಮಂಗಳೂರು ನಗರ ವ್ಯಾಪ್ತಿಯಲ್ಲಿ ಮನೆ ಮನೆ ಆರ್ಥಿಕ ಸಾಮಾಜಿಕ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಶಿಕ್ಷಕರ ಜತೆ ಪಾಲಿಕೆ ಸಿಬ್ಬಂದಿಯೂ ಭಾಗವಹಿಸಿದ್ದರು. ಹೀಗಾಗಿ ಕಳೆದ ಹಲವು ದಿನಗಳಿಂದ ಜನನ-ಮರಣ ಪ್ರಮಾಣ ಪತ್ರ ಪಡೆಯುವ ಕೌಂಟರ್‌ ಸಿಬ್ಬಂದಿ ಇಲ್ಲದೆ ಬಂದ್‌ ಆಗಿ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಅರ್ಜಿ ಸಲ್ಲಿಸಲು ಬಂದ ಜನರು ಕೌಂಟರ್‌ ಬಂದ್‌ ಆದ ಹಿನ್ನೆಲೆಯಲ್ಲಿ ವಾಪಾಸಾಗಿದ್ದರು. ಮಂಗಳವಾರದಿಂದ ಸಿಬ್ಬಂದಿ ಪಾಲಿಕೆ ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ದೊಡ್ಡದಿತ್ತು. ಒಂದೇ ದಿನ ಸುಮಾರು 300ಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಗುರುವಾರವೂ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ ಕಾರಣದಿಂದ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಜನನ-ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಸಾರ್ವಜನಿಕರು ಸಂಕಟ ಎದುರಿಸುತ್ತಿದ್ದ ವಿಷಯ ತಿಳಿದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಅವರು ಅಧಿಕಾರಿ/ಸಿಬ್ಬಂದಿ ಜತೆಗೆ ಚರ್ಚೆ ನಡೆಸಿದರು. ಜನನ/ಮರಣ ನೋಂದಣಿಯನ್ನು ಕಂಪ್ಯೂಟರ್‌ನಲ್ಲಿಯೇ ನೋಂದಣಿ ಮಾಡಬೇಕಾಗುತ್ತದೆ. ಕಾಗದದ ಮೂಲಕ ನೀಡಲು ನಿಯಮದಲ್ಲಿ ಅವಕಾಶ ಇಲ್ಲ. ಜತೆಗೆ ಸರ್ವರ್‌ ಸಮಸ್ಯೆ ಕೂಡ ಇದೆ ಎಂಬ ಮಾಹಿತಿ ಪಡೆದ ಐವನ್‌ ಡಿಸೋಜಾ, ಜನರು ಹೊರಭಾಗದಲ್ಲಿ ತಾಸುಗಟ್ಟಲೆ ಕಾಯುವ ಬದಲು ದಿನಕ್ಕೆ ಇಂತಿಷ್ಟುಎಂಬಂತೆ ಟೋಕನ್‌ ವ್ಯವಸ್ಥೆ ಕಲ್ಪಿಸಿ ಅವರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದರು.ಎಷ್ಟೇ ಅಗತ್ಯ ಕಾರ್ಯಗಳಿದ್ದರೂ ದಿನವಿಡೀ ಕಾಯಿರಿ ಅಥವಾ ಸ್ವಲ್ಪ ದಿನ ಬಿಟ್ಟು ಬನ್ನಿ ಎಂದು ಸಾರ್ವಜನಿಕರನ್ನು ವಾಪಸ್ ಕಳಿಸಲಾಗುತ್ತಿದೆ. ಜನರ ಸಮಸ್ಯೆಗಳಿಗೆ ಸರ್ಕಾರದ ಬೇಜವಾಬ್ದಾರಿಯೇ ನೇರ ಕಾರಣವಾಗುತ್ತಿದ್ದು, ಜನರು ಹಿಡಿಶಾಪ ಹಾಕುತ್ತಿದ್ದಾರೆ. ಈಗಾಗಲೇ ಶಾಸಕ ವೇದವ್ಯಾಸ್‌ ಕಾಮತ್‌ ಈ ಬಗ್ಗೆ ಸರ್ಕಾರದ ಗಮನ ಸೆಳೆದರೂ ಸಮಸ್ಯೆ ಬಗೆಹರಿದಿಲ್ಲ.