ದಾಬಸ್‍ಪೇಟೆ: ಕಿತ್ತಲೆ ಹಣ್ಣು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಬುಲೇರೋ ವಾಹನ ಅಡ್ಡ ಬಂದ ಪರಿಣಾಮ ಲಾರಿ ಪಲ್ಟಿಯಾಗಿ ಕಿತ್ತಲೆ ಹಣ್ಣು ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲೆಲ್ಲಾ ಬಿದ್ದ ಘಟನೆ ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿಯ ರಾಷ್ಟ್ರೀಯ ಹೆದ್ದಾರಿ-48ರ ತುಮಕೂರು-ಬೆಂಗಳೂರು ರಸ್ತೆಯಲ್ಲಿ ನಡೆದಿದೆ.
ಗುರುವಾರ ಮುಂಜಾನೆ 2 ಗಂಟೆಯಲ್ಲಿ ಪಂಜಾಬ್‌ನಿಂದ ಬೆಂಗಳೂರಿಗೆ ಕಿತ್ತಲೆ ಹಣ್ಣು ತುಂಬಿಕೊಂಡು ಬರುವಾಗ ಕೆಂಗಲ್ ಕೆಂಪೋಹಳ್ಳಿ ಬಳಿ ಲಾರಿ ಪಕ್ಕದಲ್ಲೇ ಬಂದ ಬೊಲೇರೋ ವಾಹನ ಅಡ್ಡಬಂದಿದ್ದು, ಅಪಘಾತ ತಪ್ಪಿಸಲು ಹೋಗಿ ರಸ್ತೆ ಪಕ್ಕದ ಚರಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾಗಿದೆ. ಅದೃಷ್ಟವಷಾತ್ ಯಾವುದೇ ಅನಾಹುತವಾಗಿಲ್ಲ.ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಚಲಿಸುತ್ತಿದ್ದು, ಸರ್ವೀಸ್ ರಸ್ತೆಯನ್ನು ಗುಣಮಟ್ಟದಿಂದ ಮಾಡದ ಪರಿಣಾಮ ರಸ್ತೆ ಗುಂಡಿಗಳು ಬಿದ್ದಿವೆ. ಬೊಲೇರೋ ವಾಹನ ಗುಂಡಿ ತಪ್ಪಿಸಿಕೊಳ್ಳಲು ಹೋದ ಪರಿಣಾಮ ಲಾರಿ ಪಲ್ಟಿಯಾಗಿದೆ.
ರಸ್ತೆಯಲ್ಲಾ ಕಿತ್ತಲೆಹಣ್ಣು:ಲಾರಿ ಪಲ್ಟಿಯಾಗುತ್ತಿದ್ದಂತೆ ಲಾರಿಯಲ್ಲಿದ್ದ ಕಿತ್ತಲೆ ಹಣ್ಣು ರಸ್ತೆಯಲ್ಲೆಲ್ಲಾ ಚಿಲ್ಲಾಪಿಲ್ಲಿಯಾಗಿದ್ದವು. ಬೆಳಿಗ್ಗೆ 6 ಗಂಟೆ ಬಳಿಕ ಮಾಲೀಕರು ಲಾರಿಯಲ್ಲಿದ್ದ ಕಿತ್ತಳೆ ಹಣ್ಣು ಬೇರೆ ವಾಹನಕ್ಕೆ ಸ್ಥಳಾಂತರ ಮಾಡಿಸಿ ತೆಗೆದುಕೊಂಡು ಹೋದರು. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.