ಸಾರಾಂಶ
ದಾಬಸ್‌ಪೇಟೆ: ವೃದ್ಧೆಯೊಬ್ಬರು ಸಂಬಂಧಿಕರ ತಿಥಿ ಕಾರ್ಯ ನೆರವೇರಿಸಿ ರಸ್ತೆ ದಾಟಲು ಪುಟ್ ಪಾತ್ ಮೇಲೆ ನಿಂತಿದ್ದಾಗ ಯಮರೂಪಿಯಂತೆ ಬಂದ ಲಾರಿಯೊಂದು ಸಂಪೂರ್ಣವಾಗಿ ಮೇಲೆ ಹರಿದ ಪರಿಣಾಮ ಆಕೆಯ ದೇಹ ಛಿದ್ರ ಛಿದ್ರವಾಗಿ ಸಾವನ್ನಪ್ಪಿರುವ ಘಟನೆ ನೆಲಮಂಗಲ ಸಂಚಾರಿ ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 48ರ ಕೆಂಗಲ್ ಕೆಂಪೋಹಳ್ಳಿ ಗ್ರಾಮದ ಬಳಿ ನಡೆದಿದೆ. ಮೃತ ಮಹಿಳೆ ಕೆಂಗಲ್ ಕೆಂಪೋಹಳ್ಳಿ ಗ್ರಾಮದ ಗಂಗಮ್ಮ (84) ಮೃತ ವೃದ್ಧೆಯಾಗಿದ್ದು, ಅಪಘಾತದ ತೀವ್ರತೆಗೆ ಆಕೆಯ ದೇಹ ಛಿದ್ರವಾಗಿ ಮಾಂಸದ ಮುದ್ದೆ ರಸ್ತೆಯಲ್ಲೆಲ್ಲಾ ಬಿದ್ದಿದ್ದು, ಇನ್ನು ಅಪಘಾತ ಮಾಡಿ ಪರಾರಿಯಾಗಲು ಯತ್ನಿಸಿದ ಲಾರಿಯನ್ನು ತಡೆಯಲು ಯತ್ನಿಸಿದ ಯುವಕನೊಬ್ಬನ ಬೈಕ್ ಮೇಲೂ ಲಾರಿ ಹತ್ತಿಸಿದ್ದು ಪರಿಣಾಮ ಆತನಿಗೂ ಕಾಲು ಮುರಿದಿದೆ, ನಂತರ ಬಿಲ್ಲಿನಕೋಟೆ ಗ್ರಾಮದ ಬಳಿ ಲಾರಿಯನ್ನು ತಡೆದ ಸಾರ್ವಜನಿಕರು ಲಾರಿಯಲ್ಲಿದ್ದವರಿಗೆ ಹಿಗ್ಗಾಮುಗ್ಗ ತಳಿಸಿದ್ದು, ಗಂಭೀರ ಗಾಯಗಳಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹರಸಾಹಸ ಪಟ್ಟರು. ಸ್ಥಳಕ್ಕೆ ದಾಬಸ್ ಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ರಾಜು, ನೆಲಮಂಗಲ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.