ಬ್ಯಾಡಗಿ: ಪಟ್ಟಣದ ಎಲ್‌ಐಸಿ ನಿವೃತ್ತ ನೌಕರ ಎ.ಎಂ. ಖಾಜಿ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ, ಕಾಂಗ್ರೆಸ್‌ನ್ನು ಅಧಿಕೃತವಾಗಿ ಸೇರಿದರು. ಶಾಸಕ ಮತ್ತು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ, ಹಾವೇರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಉಪಸ್ಥಿತಿಯಲ್ಲಿ ಉಪಚುನಾವಣೆ ಪ್ರಚಾರಾರ್ಥ ಬಾಗಲಕೋಟೆ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಎದುರು ಕಾಂಗ್ರೆಸ್ ಅಧಿಕೃತವಾಗಿ ಸೇರ್ಪಡೆಗೊಂಡರು. ಸುಮಾರು ಮೂರು ದಶಕಗಳ ಕಾಲ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಎ.ಎಂ. ಖಾಜಿ ತಮ್ಮ ಸೇವಾ ಅವಧಿಯಲ್ಲಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಬ್ಯಾಡಗಿ ತಾಲೂಕಿನಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ, ರಾಜಕೀಯ ಪ್ರವೇಶದ ಬಳಿಕ ಜನಸೇವೆಯನ್ನು ಇನ್ನಷ್ಟು ವ್ಯಾಪಕವಾಗಿ ಮುಂದುವರಿಸುವ ಉದ್ದೇಶ ಹೊಂದಿರುವುದಾಗಿ ಖಾಜಿ ಪತ್ರಿಕೆಗೆ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಡಾ.ಎ.ಎಂ. ಸೌದಾಗರ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೆಶಿಮಿ ಮಜೀದ್ ಮುಲ್ಲಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.