ಸಹಸ್ರಾರು ಸದ್ಭಕ್ತರ ಮಧ್ಯೆ ವಿಜೃಂಭಣೆಯ ರಥೋತ್ಸವ

| Published : Apr 13 2025, 02:06 AM IST

ಸಾರಾಂಶ

ಸಮೀಪದ ಸುಕ್ಷೇತ್ರ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದ ಕಾಲಕಾಲೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ಸಂಜೆ ಸಕಲ ವ್ಯಾದ ವೈಭವಗಳೊಂದಿಗೆ, ಸಹಸ್ರಾರು ಸದ್ಭಕ್ತರ ಮಧ್ಯೆ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.

ಗಜೇಂದ್ರಗಡ: ಸಮೀಪದ ಸುಕ್ಷೇತ್ರ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದ ಕಾಲಕಾಲೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ಸಂಜೆ ಸಕಲ ವ್ಯಾದ ವೈಭವಗಳೊಂದಿಗೆ, ಸಹಸ್ರಾರು ಸದ್ಭಕ್ತರ ಮಧ್ಯೆ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.ದವನದ ಹುಣ್ಣಿಮೆ ದಿನದಂದು ವಿಶೇಷ ಪೂಜೆಯೊಂದಿಗೆ ಉತ್ಸವ ಮೂರ್ತಿಗೆ ದವನಾರ್ಪಣೆ, ತೆಂಗಿನ ಕಾಯಿ, ಉತ್ತತ್ತಿ, ಬಾಳೆಹಣ್ಣು, ಕಬ್ಬು ದವಸ-ಧಾನ್ಯ ಸಮರ್ಪಿಸಿದ ನಂತರ ಪಲ್ಲಕ್ಕಿ ಸೇವೆ ಹಾಗೂ ದುರ್ಗಾದೇವಿಯ ವಿಶೇಷ ಪೂಜೆಯೊಂದಿಗೆ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಳಿಕ ಸಂಜೆ ಬಾನಂಗಳದಲ್ಲಿ ನಕ್ಷತ್ರ ಕಾಣಿಸಿಕೊಳ್ಳುತ್ತಿದ್ದಂತೆಯೇ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಹಸ್ರಾರು ಭಕ್ತರು ಸಕಲ ವಾದ್ಯ ವೈಭವದಿಂದ ಶಂಭೋಲಿಂಗ ಹರ-ಹರ ಮಹಾದೇವ ಎಂದು ಭಕ್ತಿ ಭಾವದಿಂದ ಜಯ ಘೋಷ ಹಾಕುತ್ತಾ ರಥವನ್ನು ಭಕ್ತಿಯಿಂದ ಎಳೆದರು. ಕಾಲಕಾಲೇಶ್ವರ ರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆ ಹಾಗೂ ಮಧ್ಯಾಹ್ನದ ಸುಡು ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದ ಭಕ್ತರಿಗೆ ರಸ್ತೆ ಪಕ್ಕದ ಕೆಲ ಹೊಲದ ಮಾಲಿಕರು ಹಾಗೂ ಪಟ್ಟಣದ ವಿವಿಧ ಸಂಘ ಸಂಸ್ಥೆಗಳಿಂದ ಆರಂಭಿಸಿದ್ದ ನೀರಿನ ಅರವಟ್ಟಿಗೆಗಳು ಭಕ್ತರ ನೀರಿನ ದಾಹವನ್ನು ನೀಗಿಸಿದ್ದು ವಿಶೇಷವಾಗಿತ್ತು.

ಅಲ್ಲದೆ ಇತ್ತ ಪಟ್ಟಣದ ದುರ್ಗಾ ವೃತ್ತದಿಂದಲೇ ಟಂಟಂ ವಾಹನಗಳು ಭಕ್ತರನ್ನು ಕಾಲಕಾಲೇಶ್ವರ ಜಾತ್ರೆಗೆ ರಿಯಾಯಿತಿ ದರದಲ್ಲಿ ಕರೆದುಕೊಂಡಲು ಹೋಗಲು ಸ್ಪರ್ಧೆಗೆ ಇಳಿದಂತೆ ಕಂಡಿದ್ದರಿಂದ ರಾಜೂರು ಮಾರ್ಗ ಹಾಗೂ ಪುರ್ತಗೇರಿ ಕ್ರಾಸ್‌ನಲ್ಲಿ ವಾಹನ ದಟ್ಟನೆ ಹೆಚ್ಚಾಗಿ ಕಂಡು ಬಂದ ಪರಿಣಾಮ ಒಂದು ಕಿಲೋ ಮೀಟರ್ ದೂರದಲ್ಲಿಯೇ ಪೊಲೀಸ್ ಅಧಿಕಾರಿಗಳು ವಾಹನಗಳನ್ನು ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರು.ರಾಜ್ಯದ ವಿವಿಧ ಭಾಗಗಳಿಂದ ಹರಿದು ಬಂದ ಭಕ್ತರು ಎತ್ತಿನ ಚಕ್ಕಡಿ, ಟಂ.ಟಂ, ಲಾರಿ, ಟೆಂಪೋ ವಾಹನಗಳ ಮೂಲಕ ಬಂದು ಕಾಲಕಾಲೇಶ್ವರನ ದರ್ಶನ ಪಡೆದರು. ಭಾವೈಕ್ಯತೆಯ ಸಂಕೇತವಾಗಿರುವ ಈ ಜಾತ್ರೆಯು ಐದು ದಿನಗಳ ವರೆಗೆ ನಡೆಯಲಿದೆ.