ಬ್ಯಾಲದಕೆರೆಯಲ್ಲಿ ಗಂಡು ಚಿರತೆ ಸೆರೆ

| Published : Nov 14 2024, 12:54 AM IST

ಸಾರಾಂಶ

ಕಳೆದ ೧೫-೨೦ ದಿನಗಳಿಂದ ಗ್ರಾಮದ ಸುತ್ತಮುತ್ತಲಿನ ತೋಟಗಳಲ್ಲಿ ಚಿರತೆ ಹಲವು ಬಾರಿ ಕಾಣಿಸಿಕೊಂಡಿದ್ದು ಜಾನುವಾರು ಹಾಗೂ ಸಾಕು ನಾಯಿಗಳ ಮೇಲೆ ದಾಳಿ ಮಾಡಿತ್ತು. ಪರಿಣಾಮ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಈ ಚಿರತೆಯನ್ನು ಬ್ಯಾಲದಕೆರೆ ಗ್ರಾಮದಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಜನರು ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ವಲಯ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಬ್ಯಾಲದಕೆರೆ ಗ್ರಾಮದಲ್ಲಿ ಗಂಡು ಚಿರತೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.

ಕಳೆದ ೧೫-೨೦ ದಿನಗಳಿಂದ ಗ್ರಾಮದ ಸುತ್ತಮುತ್ತಲಿನ ತೋಟಗಳಲ್ಲಿ ಚಿರತೆ ಹಲವು ಬಾರಿ ಕಾಣಿಸಿಕೊಂಡಿದ್ದು ಜಾನುವಾರು ಹಾಗೂ ಸಾಕು ನಾಯಿಗಳ ಮೇಲೆ ದಾಳಿ ಮಾಡಿತ್ತು. ಪರಿಣಾಮ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.

ಜನರು ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ವಲಯ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಚಿರತೆ ಓಡಾಟ ಹೆಚ್ಚಾಗಿದ್ದ ಪ್ರದೇಶದಲ್ಲಿ ಬೋನು ಅಳವಡಿಸಿ ಚಿರತೆ ಸೆರೆಗೆ ಕ್ರಮ ಕೈಗೊಂಡಿದ್ದರು. ರಾತ್ರಿ ಆಹಾರ ಅರಸಿ ಬಂದಿರುವ ಸುಮಾರು ೨ರಿಂದ ೩ ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಬುಧವಾರ ಬೆಳಗಿನ ಜಾವ ಸ್ಥಳೀಯರು ಗಮನಿಸಿ ವಿಷಯ ತಿಳಿಸಿದ್ದು ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಚಿರತೆ ಇರುವ ಬೋನನ್ನು ವಾಹನದಲ್ಲಿ ಬೆಲಸಿಂದ ಸಸ್ಯಕ್ಷೇತ್ರಕ್ಕೆ ಸಾಗಿಸಿದರು.

ಚಿರತೆ ಸಂಚಾರವನ್ನು ಖಚಿತಪಡಿಸಿಕೊಂಡು ಬೋನು ಅಳವಡಿಸಲಾಗಿದ್ದು ಅದೇ ಮಾರ್ಗದಲ್ಲಿ ಆಹಾರ ಅರಸಿ ಬಂದಿರುವ ಚಿರತೆ ಬೋನಿಗೆ ಬಿದ್ದಿದೆ. ಮೇಲಧಿಕಾರಿಗಳ ಆದೇಶದ ಮೇರೆಗೆ ಅರಣ್ಯ ಪ್ರದೇಶಕ್ಕೆ ಸಾಗಿಸಿ ಚಿರತೆಯನ್ನು ಬಿಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸಿ.ಸಿ.ದಿಲೀಪ್‌ ಕುಮಾರ್‌ ತಿಳಿಸಿದ್ದಾರೆ.