ಸುಮಾರು ಐದಾರು ಯುವಕರು ಸೇರಿ ಓರ್ವ ಯುವಕನಿಗೆ ಅಮಾನವೀಯವಾಗಿ ಥಳಿಸಿದ್ದಾರೆ ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಗರದ ಹೊರ ಭಾಗದ ಸೋಲಾಪುರ ಬೈಪಾಸ್ ಬಳಿ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಸುಮಾರು ಐದಾರು ಯುವಕರು ಸೇರಿ ಓರ್ವ ಯುವಕನಿಗೆ ಅಮಾನವೀಯವಾಗಿ ಥಳಿಸಿದ್ದಾರೆ ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಗರದ ಹೊರ ಭಾಗದ ಸೋಲಾಪುರ ಬೈಪಾಸ್ ಬಳಿ ಘಟನೆ ನಡೆದಿದೆ ಎನ್ನಲಾಗುತ್ತಿದೆ.ಘಟನೆಯಲ್ಲಿ ಪೈಗಂಬರ್ ಮುಲ್ಲಾ ಎಂಬಾತ ಹಲ್ಲೆಗೊಳಗಾಗಿದ್ದು, ಈತ 2023 ರಲ್ಲಿ ಹತ್ಯೆಯಾದ ನಗರದ ರೌಡಿ ಶೀಟರ್ ಹೈದರ್ ನದಾಫ್ ನಿಕಟವರ್ತಿಯಾಗಿದ್ದ ಎನ್ನಲಾಗಿದೆ. ಹಳೆಯ ವೈಷಮ್ಯದ ಹಿನ್ನೆಲೆ ಕಲಬುರಗಿ ಜಿಲ್ಲೆ ಶಾಬಾದ್‌ನಿಂದ ಕರೆ ತಂದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಗರದ ನಿವಾಸಿಗಳಾದ ಜಾವೀದ ಸೌದಾಗರ, ತೌಫೀಕ್, ಬಿಲಾಲ್ ಹಾಗೂ ಇತರರು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಜರುಗಿದ್ದು, ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಘಟನೆ ಯಾವಾಗ ಜರುಗಿದೆ?, ಏಕೆ ಜರುಗಿದೆ ಎಂಬುದರ ಬಗ್ಗೆ ಹಲ್ಲೆ ವಿಡಿಯೋ ಆಧರಿಸಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.ಐದಾರು ಜನರಿಂದ ಯುವಕನ ಮೇಲೆ ಅಮಾನವೀಯ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಪೈಗಂಬರ ಮುಲ್ಲಾ ಎಂಬಾತ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಅವರನ್ನೇ ಹೊಡೆಯುವುದಾಗಿ ಹೇಳಿ ನಾನೇ ಮೊದಲು ತಪ್ಪು ಮಾಡಿದ್ದೇನೆ. ನನ್ನ ತಪ್ಪಿಗೆ ನನಗೆ ಶಿಕ್ಷೆ ಸಿಕ್ಕಿದೆ. ನಾನು ಕಲಬುರ್ಗಿಯಲ್ಲಿದ್ದೆ, ಜಾವೇದ್ ಎಂಬಾತ ನನ್ನನ್ನು ವಿಜಯಪುರಕ್ಕೆ ಕರೆದುಕೊಂಡು ಬಂದಿದ್ದ. ನಮ್ಮನ್ನು ಏಕೆ ಹೊಡೆಯುವುದಾಗಿ ಹೇಳ್ತಿದ್ದೀಯಾ ಎಂದು ಕೇಳಿದ್ರು, ನಾನು ಕುಡಿದ ನಶೆಯಲ್ಲಿ ಹಾಗೇ ಹೇಳಿದ್ದೇನೆ ಎಂದೆ. ಏನಾದರೂ ಮಾಡೋನಿದ್ರೆ ಎರಡೂವರೆ ವರ್ಷ ಸುಮ್ಮನಿರ್ತಿರಲಿಲ್ಲ ಎಂದೆ. ಆಮೇಲೆ ಜಾವೇದ್‌ಗೆ ಸಿಟ್ಟು ಬಂದು ಹುಡುಗರನ್ನ ಕರೆಯಿಸಿ ಹೊಡೆದಿದ್ದಾನೆ. ನಾನು ಯಾವುದೇ ಕಂಪ್ಲೆಂಟ್ ಕೊಡಲ್ಲ, ಅವರಿಗೆ ಸಿಟ್ಟಿತ್ತು ಹೊಡೆದಿದ್ದಾರೆ. ಈ ವಿಷಯವನ್ನ ನಾನು ದೊಡ್ಡದು ಮಾಡೊಲ್ಲ, ನಾನು ತಪ್ಪು ಮಾಡಿದ್ದೆ, ಅದಕ್ಕೆ ಹೊಡೆದಿದ್ದಾರೆ. ನಾವು ಮನೆಯ ಹಿರಿಯರನ್ನು ಸೇರಿಸಿಕೊಂಡು ಇದನ್ನ ಇಲ್ಲಿಗೆ ಮುಗಿಸ್ತೇವೆ. ಕೋರ್ಟ್ ಕಚೇರಿ ಎಂದು ಹೋಗಲ್ಲ ಎಂದು ಹಲ್ಲೆಗೊಳಗಾದ ಯುವಕ ಪೈಗಂಬರ್ ವಿಡಿಯೋ ಬಿಡುಗಡೆ ಮಾಡಿ ಬಿಡುಗಡೆಗೊಳಿಸಿದ್ದಾನೆ.
