ಸಂಕಷ್ಟದಲ್ಲಿ ಮಾವು ಬೆಳೆಗಾರರು, ದಲ್ಲಾಳಿಗಳು । ಬೂದಿ ರೋಗ ಕಾಣಿಸಿಕೊಂಡ ಪರಿಣಾಮ

ಸಂತೋಷ ದೈವಜ್ಞ ಕನ್ನಡ ಪ್ರಭ ವಾರ್ತೆ ಮುಂಡಗೋಡ


ಹವಾಮಾನ ವೈಪರೀತ್ಯ ಅಥವಾ ಅತಿಯಾದ ಔಷಧ ಸಿಂಪಡಣೆಯಿಂದಲೊ ಇಲ್ಲಿಯ ಮಾವಿನ ಬೆಳೆಗೆ ಬೂದಿ ರೋಗ ಕಾಣಿಸಿಕೊಂಡು ಬಿಟ್ಟ ಮಾವಿನಕಾಯಿ ಸಂಪೂರ್ಣ ಉದುರಿದ ಪರಿಣಾಮ ಮಾವಿನ ಗಿಡಗಳು ಕಾಲಿ ಕಾಲಿಯಂತೆ ಭಾಸವಾಗುತ್ತಿದ್ದು, ಇಳುವರಿಯಲ್ಲಿ ತೀವ್ರ ಕುಂಠಿತವಾಗಿದೆ. ಇದರಿಂದ ಇಲ್ಲಿಯ ಮಾವು ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದು, ಲಾಭಕ್ಕಿಂತ ಎಷ್ಟು ನಷ್ಟವಾಗಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಬಾರಿ ಪ್ರಾರಂಭದಲ್ಲಿ ಮಾವಿನ ಮರಗಳು ಮೈತುಂಬ ಹೂವು ತುಂಬಿಕೊಂಡು ಉತ್ತಮ ಫಸಲು ನೀಡುವ ಸೂಚನೆ ನೀಡಿದ್ದವು. ಇದು ಇಲ್ಲಿಯ ಮಾವು ಬೆಳೆಗಾರರಲ್ಲಿ ಖುಷಿ ತಂದಿತ್ತು. ಈ ಹಿನ್ನೆಲೆ ಅತ್ಯತ್ತಮ ಬೆಳೆ ಗಿಟ್ಟಿಸಿಕೊಳ್ಳುವ ತವಕದಲ್ಲಿ ತೀವ್ರವಾದ ಕೀಟನಾಶಕ ಔಷಧಿ ಸಿಂಪಡಿಸಿ ನಿರ್ವಹಣೆ ಕೂಡ ಮಾಡಲಾಗಿತ್ತು. ಆದರೆ ದಿನ ಕಳೆದಂತೆ ಇಬ್ಬನಿ, ಹವಾಮಾನ ವೈಪರೀತ್ಯದಿಂದ ಮಾವಿನ ಬೆಳೆಗೆ ಇದ್ದಕ್ಕಿದ್ದಂತೆ ಬೂದಿ ರೋಗ ಕಾಣಿಸಿಕೊಂಡು ಬಿಟ್ಟ ಕಾಯಿಗಳು ಉದುರುತ್ತ ಬಂದಿದ್ದು, ಶೇ. ೨೫ರಷ್ಟು ಕೂಡ ಫಸಲು ಕೈಗೆ ಸಿಗುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಮಾವು ಬೆಳೆಗಾರರು ಹಾಗೂ ದಲ್ಲಾಳಿಗಳು ಕಂಗಾಲಾಗಿದ್ದಾರೆ. ಕೈ ಸುಟ್ಟುಕೊಂಡ ದಲ್ಲಾಳಿಗಳು:

ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇಲ್ಲಿಯ ಬಹುತೇಕ ಮಾವಿನ ತೋಟಗಳನ್ನು ಲಕ್ಷಾಂತರ ರೂಪಾಯಿಗೆ ಗುತ್ತಿಗೆ ಪಡೆದು ಹಲವು ತಿಂಗಳಿಂದ ನಿರ್ವಹಣೆ ಮಾಡಿಕೊಂಡು ಬಂದಿದ್ದ ಮಾವು ವ್ಯಾಪಾರಸ್ಥ ದಲ್ಲಾಳಿಗಳಿಗೆ ಕೈ ಸುಟ್ಟುಕೊಂಡ ಅನುಭವವಾಗುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ತಾಲೂಕಿನ ಬಹುತೇಕ ಮಾವಿನ ತೋಪುಗಳನ್ನು ಗಿಡ ಹಾಗೂ ಫಸಲು ಬಿಡುವ ಆಧಾರದ ಮೇಲೆ ಬೇರೆ ಬೇರೆ ಕಡೆಯಿಂದ ಇಲ್ಲಿಗೆ ಬರುವ ಮಾವು ವ್ಯಾಪಾರಸ್ಥರು ವರ್ಷಕ್ಕೆ ಲಕ್ಷಾಂತರ ರುಪಾಯಿಗೆ ಮಾತುಕತೆ ಮಾಡಿ ಗುತ್ತಿಗೆ ಪಡೆಯುತ್ತಾರೆ. ಅದರಂತೆ ಈ ಬಾರಿಯೂ ಹಲವು ದಲ್ಲಾಳಿಗಳು ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿ ಕಳೆದ ವರ್ಷಕ್ಕೆ ದ್ವಿಗುಣ ಹಾಗೂ ತ್ರಿಗುಣ ದರ ಏರಿಸಿ ಇಲ್ಲಿಯ ಮಾವಿನ ಕೊಪ್ಪಲು ಗುತ್ತಿಗೆ ಪಡೆದಿದ್ದಾರೆ. ೩-೪ ತಿಂಗಳಿಂದ ಕಾವಲುಗಾರರನ್ನು ನೇಮಿಸಿ ಬೆಲೆ ಬಾಳುವ ಔಷಧಿ ಸಿಂಪಡಣೆ ಮಾಡುವುದು ಸೇರಿದಂತೆ ವಿವಿಧ ರೀತಿ ತೋಪುಗಳನ್ನು ನಿರ್ವಹಣೆ ಮಾಡಲು ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ್ದಾರೆ. ಆದರೆ ಮಾವಿನ ಕೊಪ್ಪಲಿನ ಈಗಿನ ಪರಿಸ್ಥಿತಿಯಿಂದ ತೀವ್ರ ಆತಂಕಕ್ಕೊಳಗಾಗಿದ್ದಂತೂ ಸುಳ್ಳಲ್ಲ. ಹೂಡಲಾಗಿರುವ ಹಣ ಮೈಮೇಲೆ ಬರುವ ಭಯ ಇವರಲ್ಲಿ ಮನೆ ಮಾಡಿದೆ. ಪ್ರಾರಂಭದಲ್ಲಿ ಉತ್ತಮವಾಗಿಯೇ ಕಾಣಿಸಿಕೊಂಡು ಆಶಾಭಾವನೆ ಮೂಡಿಸಿದ್ದ ಮಾವಿನ ಬೆಳೆ ಇದ್ದಕ್ಕಿದ್ದಂತೆ ಕೈಕೊಟ್ಟಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಇಲಾಖೆ ನಿರ್ಲಕ್ಷ್ಯ, ಆರೋಪ:

ಇಲ್ಲಿ ವಾಣಿಜ್ಯ ಬೆಳೆ ಬೆಳೆಯಲು ಅವಕಾಶ ಕಡಿಮೆ ಇರುವುದರಿಂದ ಇಲ್ಲಿಯ ಬಹುತೇಕ ರೈತರು ಹೆಚ್ಚಿನ ಪ್ರಮಾಣದಲ್ಲಿ ಮಾವಿನ ತೋಪುಗಳನ್ನು ಮಾಡಿಕೊಂಡಿದ್ದಾರೆ. ಮಾವಿನ ಕಣಜ ಎಂದು ಬಿರುದು ಪಡೆದಿರುವ ತಾಲೂಕಿನ ಪಾಳಾ ಭಾಗದಿಂದ ಸಾಕಷ್ಟು ಪ್ರಮಾಣದ ಮಾವಿನ ಬೆಳೆ ವಿವಿಧ ರಾಜ್ಯಗಳಿಗೆ ರವಾನೆಯಾಗುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ಮಾವು ಬೆಳೆಯಲಾಗುತ್ತದೆ. ಪ್ರಸಕ್ತ ಸಾಲಿನ ಪ್ರಾರಂಭದಲ್ಲಿ ಮಾವಿನ ಮರಗಳು ಉತ್ತಮ ಹೂವು ಬಿಟ್ಟು ಉತ್ತಮ ಸೂಚನೆ ನೀಡಿದ್ದವು. ಆದರೆ ತೋಟಗಾರಿಕೆ ಇಲಾಖೆ ಮಾವು ಬೆಳೆಗಾರರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮರ್ಪಕವಾದ ಮಾಹಿತಿ ನೀಡಿದ್ದರೆ ಬೆಳೆಯನ್ನ ಉಳಿಸಿಕೊಳ್ಳಬಹುದಿತ್ತೇನೆ ಎಂಬ ಅಭಿಪ್ರಾಯ ಕೂಡ ಕೇಳಿ ಬರುತ್ತಿವೆ. ಇಲಾಖೆ ಮಾವು ಬೆಳೆಗಾರರ ನೆರವಿಗೆ ಧಾವಿಸಬೇಕಿದೆ ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.