ಸಚಿವ ಬಾಲಕೃಷ್ಣರವರು ಜವಾಬ್ದಾರಿಯುತ ಸ್ಥಾನದಲ್ಲಿರುವುದನ್ನು ಮರೆತು ವ್ಯಕ್ತಿಗತವಾಗಿ ಟೀಕೆ ಮಾಡುವ ಮೂಲಕ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಇನ್ನು ಅವರ ಬೆಂಬಲಿಗರು ಬಾಲಕೃಷ್ಣ ಅವರನ್ನು ಸಂಕಷ್ಟಕ್ಕೆ ಸಿಲುಕಿರುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಬಾಲಕೃಷ್ಣರವರ ಗೌರವ ಕಡಿಮೆಯಾಗುತ್ತದೆ ಎಂಬುದನ್ನು ಮರೆಯಬಾರದು. 2018ರ ಚುನಾವಣೆ ಫಲಿತಾಂಶ 2028ರಲ್ಲಿ ಮರು ಕಳಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಮಾಗಡಿ ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕಾರ್ಯಗಳಿಗೆ ಎ.ಮಂಜುನಾಥ್ ಶಾಸಕರಾಗಿದ್ದಾಗ ಅಡಿಪಾಯ ಹಾಕಿದರು. ಆ ಕಾರ್ಯಗಳನ್ನು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಮುಂದುವರಿಸಿರುವುದನ್ನು ಬಿಟ್ಟರೆ ಮತ್ತೇನು ಮಾಡಿದ್ದಾರೆ ಎಂದು ಬಿಡದಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ದೇವರಾಜು ಪ್ರಶ್ನೆ ಮಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಗಡಿ ಕ್ಷೇತ್ರದ ಜನರು ಬಾಲಕೃಷ್ಣ ಅವರನ್ನು 5ನೇ ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಈಗ ಅವರು ಸಚಿವರಾಗಿರುವುದು ಖುಷಿಯ ವಿಚಾರ. ಆದರೆ, ಬಾಲಕೃಷ್ಣರವರು ಸಚಿವರಾದ ಮೇಲೆ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ಕುಮಾರಸ್ವಾಮಿ ಮತ್ತು ಎ.ಮಂಜುನಾಥ್ ಅವರನ್ನು ತೇಜೋವಧೆ ಮಾಡಲು ಸಮಯ ಮೀಸಲಿಟ್ಟಿದ್ದಾರೆ ಎಂದು ಟೀಕಿಸಿದರು.
ಸಚಿವ ಬಾಲಕೃಷ್ಣರವರು ಜವಾಬ್ದಾರಿಯುತ ಸ್ಥಾನದಲ್ಲಿರುವುದನ್ನು ಮರೆತು ವ್ಯಕ್ತಿಗತವಾಗಿ ಟೀಕೆ ಮಾಡುವ ಮೂಲಕ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಇನ್ನು ಅವರ ಬೆಂಬಲಿಗರು ಬಾಲಕೃಷ್ಣ ಅವರನ್ನು ಸಂಕಷ್ಟಕ್ಕೆ ಸಿಲುಕಿರುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಬಾಲಕೃಷ್ಣರವರ ಗೌರವ ಕಡಿಮೆಯಾಗುತ್ತದೆ ಎಂಬುದನ್ನು ಮರೆಯಬಾರದು. 2018ರ ಚುನಾವಣೆ ಫಲಿತಾಂಶ 2028ರಲ್ಲಿ ಮರು ಕಳಿಸುತ್ತದೆ ಎಂದು ಎಚ್ಚರಿಕೆ ನೀಡಿದರು.ಮಂಜುನಾಥ್ ರವರು ಶಾಸಕರಾಗಿದ್ದಾಗ ಬಿಡದಿ ಪಟ್ಟಣಕ್ಕೆ ಕುಡಿಯುವ ನೀರು, ಯುಜಿಡಿ, ಬೈರಮಂಗಲ ಎಡ ಬಲದಂಡೆ ನಾಲೆ, ಪುರಸಭೆ ಕಚೇರಿಗೆ 2 ಎಕರೆ ಜಾಗ ಹಸ್ತಾಂತರ ಮಾಡಿಸಿದರು. ನೀವು ಅಧಿಕಾರಕ್ಕೆ ಬಂದ ಮೂರುವರೆ ವರ್ಷದಲ್ಲಿ ಏನು ಮಾಡಿದ್ದೀರಿ. ನೀವು ಮತ್ತೊಬ್ಬರ ಬಗ್ಗೆ ಹಗುರವಾಗಿ ಮಾತನಾಡಿದರೆ ಬೋರ್ಡ್ ಚೇರ್ಮನ್ ಮಾಡುತ್ತಾರೆ ಎಂಬ ಭ್ರಮೆಯಲ್ಲಿ ಕೆಲವು ಕಾಂಗ್ರೆಸ್ ಮುಖಂಡರಿದ್ದಾರೆ ಎಂದು ಕಿಡಿಕಾರಿದರು.
ಬಿಡದಿ ಪಟ್ಟಣದಲ್ಲಿ ಗ್ಯಾಸ್ ಲೈನ್ ಕೆಲಸ ಮುಗಿಸಲು ಸಾಧ್ಯವಾಗಿಲ್ಲ. ಜಿಬಿಡಿಎ ಅಧ್ಯಕ್ಷ ನಟರಾಜು ತಮ್ಮ ಮನೆ ಬಳಿ ಸಾರ್ವಜನಿಕರಿಗೆ ರಸ್ತೆ ಬಿಡಿಸಲು ಸಾಧ್ಯವಾಗದೆ ಶಾಲಾ ಮಕ್ಕಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೇತಿಗಾನಹಳ್ಳಿ ಅಭಿವೃದ್ಧಿಗಾಗಿ ನೀಡಿದ್ದ ₹4.50 ಕೋಟಿ ಅನುದಾನ ಬದಲಿಸಿದ್ದು, ದ್ವೇಷದ ರಾಜಕಾರಣವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.ಯಾರ ಅವಧಿಯಲ್ಲಿ ಕೆಲಸ ಮಾಡಿದ್ದೀರಿ ದಾಖಲೆಗಳಿವೆ. ಎಲ್ಲಾದಕ್ಕೂ ಜನರು ಉತ್ತರ ಕೊಡುತ್ತಾರೆ. ಏನೇ ಚರ್ಚೆಗಳಿದ್ದರೂ ಆರೋಗ್ಯಕರವಾಗಿರಲಿ, ವ್ಯಕ್ತಿಗತವಾಗಿ ಟೀಕೆ ಟಿಪ್ಪಣಿ ಮಾಡಿ ಕುಟುಂಬದವರನ್ನು ಬೀದಿಗೆ ಎಳೆಯುವುದು ಯಾರಿಗೂ ಶೋಭೆ ತರುವುದಿಲ್ಲ. ಕುಮಾರಸ್ವಾಮಿ ಮತ್ತು ಎ.ಮಂಜುನಾಥ್ ಅವರನ್ನು ತೇಜೋವಧೆ ಮಾಡಿದರೆ ನಾವು ಎಂದಿಗೂ ಸಹಿಸುವುದಿಲ್ಲ ಎಂದು ದೇವರಾಜು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.
ಎ.ಮಂಜುರವರ ಅಭಿವೃದ್ಧಿ ಮರೆಯಬಾರದು:ಪುರಸಭೆ ಮಾಜಿ ಅಧ್ಯಕ್ಷ ಎಂ.ಎನ್.ಹರಿಪ್ರಸಾದ್ ಮಾತನಾಡಿ, ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಶಾಸಕರಿಗೆ ಎಲ್ಲ ರೀತಿಯ ಗೌರವ ಸಲ್ಲಿಸಿದ್ದೇವೆ. ಬಿಡದಿ ಪಟ್ಟಣವನ್ನು ಅಭಿವೃದ್ಧಿಪಡಿಸಲೆಂದು ಪುರಸಭೆ ಸದಸ್ಯರು ಪಕ್ಷಾತೀತವಾಗಿ ಸಚಿವ ಬಾಲಕೃಷ್ಣ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಬಾಲಕೃಷ್ಣ ಅವರಂತೆ ಎ.ಮಂಜುನಾಥ್ ರವರು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಯಾರೂ ಮರೆಯಬಾರದು ಎಂದರು.
ಚುನಾವಣೆಗಳಲ್ಲಿ ಜನರು ಗೆಲ್ಲಿಸುವುದೇ ಅಭಿವೃದ್ಧಿ ಕೆಲಸ ಮಾಡಲು. ಶಾಸಕರಾಗಿರಲಿ ಅಥವಾ ಪುರಸಭೆ ಸದಸ್ಯರಾಗಿರಲಿ ಎಲ್ಲರೂ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಬಾಲಕೃಷ್ಣ ಮತ್ತು ಎ.ಮಂಜುನಾಥ್ ರವರು ಸಮಬಲ ಉಳ್ಳವರಾಗಿದ್ದು, ಟೀಕೆ ಟಿಪ್ಪಣಿ ಮಾಡಿಕೊಳ್ಳುತ್ತಾರೆ. ಅವರಿಬ್ಬರ ಮಧ್ಯೆ ಬೇರೆಯವರು ಮಧ್ಯ ಪ್ರವೇಶಿಸಿ ಬೇಳೆ ಬೇಯಿಸಿಕೊಳ್ಳುವುದು ಬೇಡ ಎಂದು ತಿರುಗೇಟು ನೀಡಿದರು.ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ರಾಕೇಶ್, ರಮೇಶ್, ಮಾಜಿ ಸದಸ್ಯ ಕುಮಾರ್, ಪುಟ್ಟಮಾದಯ್ಯ, ಜೆಡಿಎಸ್ ಮುಖಂಡರಾದ ಇಟ್ಟಮಡು ಗೋಪಾಲ್, ಡಾ.ಭರತ್ ಕೆಂಪಣ್ಣ, ಮುನಿತಿಮ್ಮಯ್ಯ, ಇಟ್ಟಮಡು ಪುಟ್ಟಪ್ಪ, ಬಾನಂದೂರು ಪಾಪಣ್ಣ, ಖಲೀಲ್, ಚಂದ್ರಶೇಖರ್, ಧನಂಜಯ್ಯ, ಸಂಪತ್ತು, ಬಸವರಾಜು ಮತ್ತಿತರರು ಇದ್ದರು.
-----ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಅಭಿವೃದ್ಧಿ ಚಿಂತನೆ ಇಟ್ಟುಕೊಂಡು ಜನರ ಒಳಿತಿಗೆ ನೀಡುವ ಹೇಳಿಕೆಗೆ ಇಡೀ ಸಚಿವ ಸಂಪುಟವೇ ಮಾತನಾಡುತ್ತದೆ ಎಂದರೆ ಎಚ್ ಡಿಕೆಗೆ ರಾಜಕೀಯ ಶಕ್ತಿ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಚುನಾವಣೆ ಬಂದಾಗ ರಾಜಕೀಯ ಮಾಡಿ, ಅಧಿಕಾರ ಇದ್ದಾಗ ಅಭಿವೃದ್ಧಿ ಕೆಲಸ ಮಾಡಲಿ. ಕಾಂಗ್ರೆಸ್ಸಿಗರು ಏನೇ ಮಾಡಿದರೂ 2028ಕ್ಕೆ ರಾಜ್ಯದಲ್ಲಿ ಬದಲಾವಣೆ ಪರ್ವವನ್ನು ತಡೆಯಲಾಗದು.
- ಟಿ.ಕುಮಾರ್ , ಮಾಜಿ ಸದಸ್ಯರು, ಬಿಡದಿ ಪುರಸಭೆ.----
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ರೌಡಿಸಂ ನಡೆಯುತ್ತದೆ. ಮಾತೆತ್ತಿದ್ದರೆ ರಣರಂಗಕ್ಕೆ ಬನ್ನಿ ನಾವಾ ನೀವಾ ನೋಡೋಣ ಎನ್ನುತ್ತಾರೆ. ಅವರ ಮನೆಯ ಹೆಣ್ಣು ಮಕ್ಕಳಿಗೆ ಊಟ ಹಾಕದವರು ಎ.ಮಂಜುನಾಥ್ ರವರ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ರಾಜಕಾರಣದಲ್ಲಿ ಮೆರೆದವರೆಲ್ಲ ಮಣ್ಣಾಗಿ ಹೋಗಿದ್ದಾರೆ. 2028ರ ಚುನಾವಣೆಯಲ್ಲಿ ಪಾಪಕ್ಕೆ ಪ್ರಾಯಶ್ಚಿತ ಆಗಲಿದ್ದು, ಜನರೇ ತಕ್ಕ ಪಾಠ ಕಲಿಸುತ್ತಾರೆ.- ಇಟ್ಟಮಡು ಗೋಪಾಲ್, ಜೆಡಿಎಸ್ ಮುಖಂಡರು.