ಮಾರುಕಟ್ಟೆಯಲ್ಲಿ ಚೆಂಡು ಹೂವಿನ ದರ್ಬಾರ್!

| Published : Oct 19 2025, 01:02 AM IST

ಸಾರಾಂಶ

ದೀಪಾವಳಿ ಆಯುಧ ಪೂಜೆ ಸೇರಿದಂತೆ ಮನೆಯಲ್ಲಿ ಚೆಂಡು ಹೂವಿಗೆ ಪ್ರಥಮ ಆದ್ಯತೆ. ಹಬ್ಬಕ್ಕೆ ಎರಡ್ಮೂರು ದಿನ ಬಾಕಿ ಇರುವಾಗಲೇ ಬಣ್ಣ ಬಣ್ಣದ ಚೆಂಡು ಹೂವುಗಳು ಮಾರುಕಟ್ಟೆಕ್ಕೆ ಲಗ್ಗೆ ಇಟ್ಟಿದ್ದು ಗ್ರಾಹಕರನ್ನು ಸೆಳೆಯುತ್ತಿವೆ.

ಬಸವರಾಜ ಜಾಧವ

ಹುಬ್ಬಳ್ಳಿ:

ದೀಪಾವಳಿ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು ಮಾರುಕಟ್ಟೆಗೆ ತರಹೇವಾರಿ ಹೂವುಗಳು ಲಗ್ಗೆ ಇಡುತ್ತಿವೆ. ಇವುಗಳ ನಡುವೆ ಚೆಂಡು ಹೂವಿಗೆ ಬಹುಬೇಡಿಕೆ ಇದ್ದು ದರದಲ್ಲೂ ಏರಿಕೆಯಾಗಿದ್ದು ರೈತರು ಪುಲ್‌ ಖುಷ್‌ ಆಗಿದ್ದಾರೆ.

ದೀಪಾವಳಿ ಆಯುಧ ಪೂಜೆ ಸೇರಿದಂತೆ ಮನೆಯಲ್ಲಿ ಚೆಂಡು ಹೂವಿಗೆ ಪ್ರಥಮ ಆದ್ಯತೆ. ಹಬ್ಬಕ್ಕೆ ಎರಡ್ಮೂರು ದಿನ ಬಾಕಿ ಇರುವಾಗಲೇ ಬಣ್ಣ ಬಣ್ಣದ ಚೆಂಡು ಹೂವುಗಳು ಮಾರುಕಟ್ಟೆಕ್ಕೆ ಲಗ್ಗೆ ಇಟ್ಟಿದ್ದು ಗ್ರಾಹಕರನ್ನು ಸೆಳೆಯುತ್ತಿವೆ. ಹೀಗಾಗಿ ದರದಲ್ಲಿಯೂ ದಿಢೀರನೇ ಏರಿಕೆಯಾಗಿದ್ದು ಗ್ರಾಹಕರು ಚೌಕಾಶಿ ಮಾಡುತ್ತಿದ್ದಾರೆ.

ಹುಬ್ಬಳ್ಳಿ ಎಪಿಎಂಸಿಗೆ ಧಾರವಾಡ ಜಿಲ್ಲೆ ಸೇರಿದಂತೆ ಗದಗ, ಹಾವೇರಿ ಹಾಗೂ ವಿವಿಧೆಡೆಯಿಂದ ಹೂವುಗಳು ಬರುತ್ತಿವೆ. ಇಲ್ಲಿನ ಎಪಿಎಂಸಿಗೆ ಸೋಮವಾರ ರಜೆ ಇರುವುದರಿಂದ ಶನಿವಾರ ಹಾಗೂ ಭಾನುವಾರ ಸಾಕಷ್ಟು ಹೂವುಗಳು ಆವಕವಾಗುವ ನಿರೀಕ್ಷೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಭರ್ಜರಿ ಹೂವು ಬೆಳೆದ ರೈತರು:

ಹುಬ್ಬಳ್ಳಿ ತಾಲೂಕಿನ ಚವರಗುಡ್ಡ, ರಾಮಾಪೂರ, ಚಳಮಟ್ಟಿ, ಮಿಶ್ರಿಕೋಟಿ, ಕಾಡನಕೊಪ್ಪ, ಕೂರವಿನಕೊಪ್ಪ, ಹೀರೆಹೊನ್ನಳ್ಳಿ ಭಾಗಗಳಲ್ಲಿ 50ಕ್ಕೂ ಹೆಚ್ಚು ರೈತರು ನೂರಾರು ಎಕರೆಯಲ್ಲಿ ಬಗೆ-ಬಗೆಯ ಹೂವಿನ ಬೆಳೆ ಬೆಳೆದಿದ್ದಾರೆ. ಅದರಲ್ಲಿ ಚೆಂಡು ಹೂವು ಪ್ರದೇಶವೇ ಹೆಚ್ಚಿದೆ. ತೋಟಗಳಲ್ಲಿ ಆಕಾಶದಲ್ಲಿ ನಕ್ಷತ್ರಗಳು ಹೊಳೆಯುವಂತೆ ತರಹೇವಾರಿ ಹೂವುಗಳು ಕಣ್ಣಿಗೆ ರಾಚುತ್ತವೆ. ಬಣ್ಣ ಬಣ್ಣದ ಸೇವಂತಿಗೆ, ಚೆಂಡು ಹೂ, ಮಲ್ಲಿಗೆ, ಚಿಂತಾವಣಿ, ಗುಲಾಬಿ ಹೂವುಗಳು ಕಾಣಿಸುತ್ತಿವೆ.

ಉತ್ತಮ ಫಸಲು:

ದೀಪಾವಳಿ ಹಬ್ಬಕ್ಕೆ ಹೂವಿಗೆ ಉತ್ತಮ ದರ ಸಿಗುತ್ತದೆ ಎಂದು ಅರಿತ ಚವರಗುಡ್ಡದ ಧರ್ಮರಾಜ ಕಾಡನಕೊಪ್ಪ, ಮೂರು ತಿಂಗಳ ಮೊದಲೇ ಬೆಳಗಾವಿ, ಹೀರೆಬಾಗೇವಾಡಿ, ಕಲ್ಲೋಳ್ಳಿ, ಗೋಕಾಕ ನರ್ಸರಿಗಳಿಂದ ವಿವಿಧ ಹೂವಿನ ಸಸಿ ತಂದು ನಾಟಿ ಮಾಡಿದ್ದಾರೆ. ಅವುಗಳನ್ನು ಸಾವಯವ ಗೊಬ್ಬರ ಹಾಕಿ ಬೆಳೆಸಿದ್ದು ಇದೀಗ ಉತ್ತಮ ಫಸಲು ಬಂದಿದೆ. ಮಾರುಕಟ್ಟೆಯಲ್ಲಿ ಹೂವಿನ ದರವೂ ಗಗನಕ್ಕೇರಿದ್ದು ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇದ್ದಾರೆ.

15 ವರ್ಷಗಳಿಂದ ಚೆಂಡು ಹೂ, ಗಲಾಟಿ, ಗುಲಾಬಿ ಹೂವುಗಳನ್ನು ಬೆಳೆಯುತ್ತಿದ್ದು ಲಾಭ ಗಳಿಸಿದ್ದೇನೆ. ಹಬ್ಬಕ್ಕೆ ಅನುಗುಣವಾಗಿ ಹೂವುಗಳನ್ನು ಬೆಳೆಯುತ್ತಿದ್ದು ಮಾರುಕಟ್ಟೆಯಲ್ಲಿ ಉತ್ತಮ ದರವೂ ಸಿಗುತ್ತಿದೆ. ನಾವೇ ಮನೆಯಲ್ಲಿ ಕುಟುಂಬಸ್ಥರೆಲ್ಲರೂ ಸೇರಿ ಮಾಲೆ ಮಾಡಿ ಹುಬ್ಬಳ್ಳಿ ಎಪಿಎಂಸಿ, ಜನತಾ ಬಜಾರ, ದುರ್ಗದಬೈಲ್, ಹಳೇಹುಬ್ಬಳ್ಳಿ, ಕೇಶ್ವಾಪೂರ, ಅಂಕೋಲಾ, ಕಾರವಾರ, ಗೋಕರ್ಣ, ಮುರ್ಡೇಶ್ವರಕ್ಕೆ ಹೋಗಿ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಧರ್ಮರಾಜ.ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್‌ ಹೂವುಗಳನ್ನು ಖರೀದಿಸದೆ ನೈಸರ್ಗಿಕ ಹೂವುಗಳನ್ನು ಗ್ರಾಹಕರು ಖರೀದಿಸಿದರೆ ರೈತರ ಶ್ರಮಕ್ಕೆ ಬೆಲೆ ಸಿಗುತ್ತದೆ.

ದರ್ಶನ್ ಮೋರೆ, ರೈತರು ಸಣ್ಣ ಜಮೀನಿನಲ್ಲಿ 15 ವರ್ಷದಿಂದ ಹೂವಿನ ಕೃಷಿ ಮಾಡುತ್ತಿದ್ದು ದೀಪಾವಳಿ, ತುಳಸಿ ಪೂಜೆ, ದಸರಾ, ಗಣೇಶ ಚತುರ್ಥಿ, ಶ್ರಾವಣ ಮಾಸ, ಬಸವ ಜಯಂತಿ ವೇಳೆಗೆ ಹೂ ಸಿಗುವ ರೀತಿಯಲ್ಲಿ ತೋಟ ಬೆಳೆಸುತ್ತೇವೆ. ಪ್ರತಿನಿತ್ಯ ಹುಬ್ಬಳ್ಳಿಯ ಎಪಿಎಂಸಿಗೆ ಹೂ ತಂದು ಮಾರಾಟ ಮಾಡುತ್ತೇವೆ. ತೋಟದಲ್ಲಿ ಈ ಭಾರಿ ಭರ್ಜರಿ ಫಸಲು ಬಂದಿದ್ದು ಶನಿವಾರದಿಂದ ಕಟಾವು ಆರಂಭಿಸುತ್ತಿದ್ದು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೇವೆ.

ಧರ್ಮರಾಜ ಕಾಡನಕೊಪ್ಪ, ಚವರಗುಡ್ಡ ರೈತ