ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ದೇಶದಲ್ಲಿ ಪ್ರತಿ ಒಂಬತ್ತು ನಿಮಿಷಕ್ಕೆ ಒಬ್ಬ ವಿವಾಹಿತ ಪುರುಷ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, ದಿನವೊಂದಕ್ಕೆ 168 ವಿವಾಹಿತ ಪುರುಷರ ಆತ್ಮಹತ್ಯೆ ನಡೆಯುತ್ತಿದೆ. ಇದು ಪುರುಷರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಪ್ರಮಾಣ ಸೂಚಿಸುತ್ತದೆ ಎಂದು ಹಿರಿಯ ಪತ್ರಕರ್ತ ಮುರುಗೇಶ ಶಿವಪೂಜಿ ಕಳವಳ ವ್ಯಕ್ತಪಡಿಸಿದರು.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಾಡಹಬ್ಬ ಉತ್ಸವ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪುರುಷರ ಮೇಲೆ ದೌರ್ಜನ್ಯ ಕುರಿತು ಉಪನ್ಯಾಸ ನೀಡಿದರು. 2005 ರಿಂದ 2010ರವರೆಗೆ 3,42,812 ವಿವಾಹಿತ ಪುರುಷರು (ಶೇ.66) ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಪ್ರತಿ 19 ನಿಮಿಷಕ್ಕೆ ಒಬ್ಬ ವಿವಾಹಿತ ಪುರುಷನ ಕೊಲೆಯಾಗುತ್ತದೆ. 2018 ರಿಂದ 21ರವರಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಪುರುಷರ ಸಂಖ್ಯೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಸ್ತ್ರೀಯರಿಗೆ ಹೋಲಿಸಿದರೆ ಮೂರುವರೆ ಪಟ್ಟು ಅಧಿಕವಾಗಿದೆ. 2015 ರಿಂದ 2021 ರವರೆಗೆ ವಾರ್ಷಿಕ ಸರಾಸರಿ 64,000 ದಿಂದ 81000ರವರೆಗೆ ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ವಾರ್ಷಿಕ ಸರಾಸರಿ 25000 ದಿಂದ 28000 ವಿವಾಹಿತ ಸ್ತ್ರೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಪುರುಷರ ಸಂರಕ್ಷಣೆಗಾಗಿ ದೇಶದಾದ್ಯಂತ 15ರಿಂದ 20 ಸರ್ಕಾರೇತರ ಸಂಸ್ಥೆಗಳು ಕಾರ್ಯನಿರ್ವ ಹಿಸುತ್ತಿವೆ. ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಬಹಳಷ್ಟು ಸಂಕಟಕ್ಕೆ ಒಳಗಾಗುವ ಸ್ಥಿತಿ ಪುರುಷರದ್ದೇ ಆಗಿದೆ. ಎಷ್ಟೋ ಬಾರಿ ಸುಳ್ಳು ಪ್ರಕರಣ ಪ್ರಕರಣ ದಾಖಲಾಗಿ, ಬಹಳಷ್ಟು ಬಾರಿ ಕೂಡ ಪುರುಷರೇ ಬಲಿಪಶುಗಳಾಗುತ್ತಾರೆ ಎಂದ ಅವರು, ಪುರುಷ ನಿರಂತರವಾಗಿ ಒಂದಿಲ್ಲೊಂದು ಕಾರಣಕ್ಕೆ ಮಾನಸಿಕ ಹಿಂಸೆ ಅನುಭವಿಸುತ್ತಲೇ ಇರುತ್ತಾನೆ. ಒಂದು ಹಂತದಲ್ಲಿ ಆತ ಮನೆಯ ಎಟಿಎಂ ಆಗಿದ್ದಾನೆ. ಆ ಎಟಿಎಂ ಬಂದ್ ಆದ ದಿವಸ ಆತನಿಗೆ ದೇವರೇ ಗತಿ? ಎಂದರು.ಹಾವೇರಿಯ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ.ವಿಜಯಲಕ್ಷ್ಮಿ ಪುಟ್ಟಿ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಂಗಲಾ ಮೆಟಗುಡ್ಡ ಪುರುಷರ ಮೇಲೆ ಅದರಲ್ಲೂ ವಯಸ್ಸಾದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಮ್ಮ ಸುತ್ತಲೂ ಆಗಾಗ ಕಂಡು ಬರುತ್ತವೆ. ಆದರೂ ಒಂದು ಹಂತದಲ್ಲಿ ಅಸಹಾಯಕರಾಗಿ ಏನೂ ಮಾಡಿದ ಸ್ಥಿತಿಯಲ್ಲಿ ನಾವಿದ್ದು, ಇದು ನಿಲ್ಲಬೇಕು. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಡಾ.ಎಚ್.ಬಿ. ರಾಜಶೇಖರ, ಕಾರ್ಯದರ್ಶಿ ಸಿ.ಕೆ. ಜೋರಾಪುರ, ಪ್ರಾಚಾರ್ಯ ಪಾಟೀಲ, ಕಾಡಪ್ಪನವರ, ಪ್ರೊ.ಎಂ.ಎಸ್. ಇಂಚಲ ವೇದಿಕೆ ಮೇಲಿದ್ದರು. ಮಾವಿನಕಟ್ಟಿ ನಿರೂಪಿಸಿದರು.