10ರಂದು ಬೆಂಗ್ಳೂರಲ್ಲಿ ಬೃಹತ್‌ ರೈತ ಸಮಾವೇಶ

| Published : Feb 07 2024, 01:45 AM IST

ಸಾರಾಂಶ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಫೆ. ೧೦ರ ಶನಿವಾರ ಬೆಳಗ್ಗೆ ೧೧ ಗಂಟೆಗೆ ಬೃಹತ್ ರೈತ ಸಮಾವೇಶ ಮತ್ತು ರೈತಪರ ಬಜೆಟ್ ರೂಪಿಸಲು ಹಕ್ಕೊತ್ತಾಯ ಮಂಡನೆ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎ.ಎಂ. ಮಹೇಶ್‌ಪ್ರಭು ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಫೆ. ೧೦ರ ಶನಿವಾರ ಬೆಳಗ್ಗೆ ೧೧ ಗಂಟೆಗೆ ಬೃಹತ್ ರೈತ ಸಮಾವೇಶ ಮತ್ತು ರೈತಪರ ಬಜೆಟ್ ರೂಪಿಸಲು ಹಕ್ಕೊತ್ತಾಯ ಮಂಡನೆ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎ.ಎಂ. ಮಹೇಶ್‌ಪ್ರಭು ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಅಧ್ಯಕ್ಷತೆ ಮತ್ತು ಹಕ್ಕೊತ್ತಾಯ ಮಂಡನೆಯನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾಡಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಶಾಸಕ ಬಿ.ಆರ್. ಪಾಟೀಲ್, ದರ್ಶನ್ ಪುಟ್ಟಣ್ಣಯ್ಯ ಭಾಗವಹಿಸಲಿದ್ದು ದಿಕ್ಸೂಚಿ ಭಾಷಣವನ್ನು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಮಾಡಲಿದ್ದಾರೆ ಅತಿಥಿಗಳಾಗಿ ಯವ ಘಟಕದ ವಿನೋದ ಜೆ.ಎಂ. ವೀರಸಂಗಯ್ಯ ಭಾಗವಹಿಸಲಿದ್ದಾರೆ ಎಂದರು.

ಸಮಾಜದಲ್ಲಿ ಗಟ್ಟಿಯಾಗಿ ಬೇರು ಬಿಟ್ಟಿರುವ ಜಾತಿ ವ್ಯವಸ್ಥೆಯಲ್ಲಿ ವಿವಿಧ ಜಾತಿ ಸಮುದಾಯಗಳಿಂದ ಕೂಡಿರುವ ರೈತ ಸಮುದಾಯಕ್ಕೆ ಸಮಾಜವಾದಿ ಚಿಂತನೆಗಳನ್ನು ಕಾರ್ಯಯೋಜನೆಗಳ ಮೂಲಕ ತಲುಪಿಸಿ ಅವರಲ್ಲಿ ಜಾತಿಗಿಂತ ವರ್ಗ ದೊಡ್ಡದು ಎಂಬ ಪ್ರಜ್ಞೆ ಮೂಡಿಸಿ, ಸಂಘಟಿತ ಹೋರಾಟಕ್ಕಿಳಿಸಿದ ಕೀರ್ತಿ ಈ ನಾಡು ಕಂಡ ಜಾಗತಿಕ ಮಟ್ಟದ ಅಪ್ರತಿಮ

ಹೋರಾಟಗಾರ, ರಾಜಿ ಇಲ್ಲದ ಚಳುವಳಿಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರಿಗೆ ಸಲ್ಲಲೇಬೇಕು ಈ ದಿಸೆಯಲ್ಲಿ ಅವರ ನೆನಪಿಗೋಸ್ಕರ ಈ ಸಮಾವೇಶ ಆಯೋಜಿಸಲಾಗಿದೆ ಎಂದರು. ಕರ್ನಾಟಕದ ರೈತ ಚಳುವಳಿ ಒಂದು ವಿಶಿಷ್ಟ ಮತ್ತು ಪರಿಣಾಮಕಾರಿ ಹಾಗೂ ಅತ್ಯಂತ ಪ್ರಭಾವ ಬೀರುವ ಚಳವಳಿಯಾಗಿ ರೂಪುಗೊಳ್ಳಲು ಪ್ರೊ. ನಂಜುಂಡಸ್ವಾಮಿಗಿದ್ದ ತಾತ್ವಿಕ ಚಿಂತನೆ, ಕ್ರಿಯಾಶೀಲತೆ ಅಳವಾದ ಜ್ಞಾನ ಮತ್ತು ಅನುಭವ ಬಹುಮುಖ್ಯ ಕಾರಣವಾಗಿದೆ ಎಂದರು.ರೈತ ಚಳುವಳಿ ಒಂದೇ ಅಲ್ಲ, ಈ ನೆಲದ ಸಾಮಾಜಿಕ, ಸಾಂಸ್ಕೃತಿಕ, ಪ್ರಗತಿಪರ, ದಲಿತ, ಬಂಡಾಯ ಚಳುವಳಿಗಳ ಮೇಲೆ ಅವರ ವಿಚಾರಗಳು ಅತ್ಯಂತ ಪರಿಣಾಮ ಬೀರಿವೆ ಎಂದರೆ ಉತ್ಪೇಕ್ಷೆ ಆಗಲಾರದು. ವಿಶ್ವ ವಾಣಿಜ್ಯ ಒಪ್ಪಂದ ಜಾರಿಗೆ ಬಂದರೆ ಇಂಡಿಯಾದಂತಹ ದೇಶದ ಪರಿಸ್ಥಿತಿಗಳು ಯಾವ ಕೆಟ್ಟಮಟ್ಟಕ್ಕೆ ತಲುಪುತ್ತವೆ ಎಂದು ಏನು ಭವಿಷ್ಯ ನುಡಿದಿದ್ದರೋ ಅವೆಲ್ಲ ನಿಜವಾಗಿ ಒಂದೊಂದಾಗಿ ನಮಗೆ ಗೋಚರಿಸುತ್ತಿವೆ ಎಂದರು, ಪ್ರೊಎಂಡಿಎನ್ ಜೀವಂತ ಇದ್ದಿದ್ದರೆ ೮೮ ವರ್ಷದ ಪ್ರಾಯದವರಾಗಿ ವಿಶ್ವದಾದ್ಯಂತ ಇಂದು ರೂಪುಗೊಳ್ಳುತ್ತಿರುವ ಬಂಡವಾಳತಾಹಿ ಪರ, ದುಡಿಯುವ ವರ್ಗದ ವಿರೋಧಿ ನೀತಿಗಳ ವಿರುದ್ಧ ಕೆಚ್ಚೆದೆಯ ಹೋರಾಟವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಕಟ್ಟುತ್ತಿದ್ದರು ಎಂದರು.

ಇಂದು ಎಲ್ಲ ಜನಪರ ಚಳುವಳಿಗಳು ಎಂಡಿಎನ್ ಚಿಂತನೆ ಮತ್ತು ಹೋರಾಟದ ಮಾರ್ಗವನ್ನು ಮುಂದುವರಿಸಿದರೆ, ಬೇರೂರುತ್ತಿರುವ ಕೆಟ್ಟ ವ್ಯವಸ್ಥೆಯನ್ನು ಬದಲು ಮಾಡಿ ದುಡಿಯುವ ವರ್ಗಕ್ಕೆ ಘನತೆ, ಗೌರವವುಳ್ಳ ಬದುಕನ್ನು ತಂದುಕೊಡಲು ಸಾಧ್ಯವಾಗುತ್ತದೆ ಎಂದರು.ಇಂತಹ ಮಹಾನ್ ನಾಯಕನ ನೆನಪಿನ ದಿನವನ್ನು ಫೆ. ೧೦ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ರೈತ ಸಮಾವೇಶ ಮಾಡಲಾಗುತ್ತದೆ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳು, ಸಾವಿರಾರು ರೈತ ಬಂಧುಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದು, ಈ ಜಿಲ್ಲೆಯಿಂದಲೂ ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಶಾಂತಮಲ್ಲಪ್ಪ, ಚಿನ್ನಸ್ವಾಮಿ ಗೌಂಡರ್, ಭಾಸ್ಕರ್, ಶೈಲೇಂದ್ರ, ಬಸವರಾಜು ಇದ್ದರು.