ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯ ಬೇಲೂರು-ಆಲೂರು-ಸಕಲೇಶಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಆದಷ್ಟು ಬೇಗ ಸ್ಥಳಾಂತರ ಅಥವಾ ದೂರದ ಕಾಡಿಗೆ ಶಾಶ್ವತವಾಗಿ ಓಡಿಸಬೇಕು. ಇನ್ನು ಹತು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೇ ನಮ್ಮ ಸಂಘಟನೆಯಿಂದ ರೈತರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಧರಣಿ ಮಾಡುವುದಾಗಿ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್ ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಎರಡು ದಶಕಗಳಿಂದಲೂ ಕಾಡಾನೆಗಳ ಸಮಸ್ಯೆ ಕಾಡುತ್ತಿದೆ. ಆದರೆ ಕಾಡಾನೆಗಳು ಪ್ರಾರಂಭದಲ್ಲೆ ಬಂದಂತಹ ಸಂದರ್ಭದಲ್ಲಿ ಸರ್ಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಆನೆಗಳನ್ನು ದೂರದ ಕಾಡಿಗೆ ಓಡಿಸಿದ್ದರೆ ಇಂದಿನ ಸ್ಥಿತಿ ಬರುತ್ತಿರಲಿಲ್ಲ. ಜಿಲ್ಲೆಯಲ್ಲಿ ಆನೆಗಳ ದಾಳಿಗೆ ಈಗಾಗಲೇ ಸಾಕಷ್ಟು ಅಮಾಯಕ ಜೀವಗಳೂ ಬಲಿಯಾಗುತ್ತಿರಲಿಲ್ಲ. ಜೊತೆಗೆ ಗಾಯ ಗೊಳ್ಳುತ್ತಿರಲಿಲ್ಲ ಎಂದರು.
ಅಂದಿನ ಅಧಿಕಾರಿಗಳ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲೆಯ ಬೇಲೂರು-ಆಲೂರು-ಸಕಲೇಶಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೂರಾರು ಕಾಡಾನೆಗಳು ಬೀಡು ಬಿಟ್ಟು ರೈತರ, ಬೆಳೆಗಾರರ ತೋಟ, ಜಮೀನುಗಳಿಗೆ ನುಗ್ಗುತ್ತಿರುವುದರಿಂದ ರೈತರು ವರ್ಷಪೂರ್ತಿ ಶ್ರಮಪಟ್ಟು ಬೆಳೆದ ಬೆಳೆ ಕ್ಷಣಾರ್ಧದಲ್ಲಿ ನಾಶವಾಗುತ್ತಿದೆ. ಜನ ವಸತಿ ಪ್ರದೇಶಗಳ ಆಸುಪಾಸಿನಲ್ಲೆ ಬೀಡು ಬಿಡುವುದಲ್ಲದೆ ಗ್ರಾಮದ ಮನೆ ಮುಂದಿನ ರಸ್ತೆಯಲ್ಲೆ ಓಡಾಡುತ್ತಿರುವುದರಿಂದ ಎಲ್ಲಿ ಯಾವಾಗ ಅವಘಡ ಸಂಭವಿಸುತ್ತದೆ ಎಂಬ ಆತಂಕ ಮತ್ತು ಜೀವ ಭಯದಲ್ಲೇ ಜನರು ದಿನ ದೂಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಹಬ್ಬ ಹರಿದಿನಗಳನ್ನು ಸಂತೋಷದಿಂದ ಆಚರಿಸಲಾಗದೆ ಜಿಗುಪ್ಸೆ ಪಡುವಂತಾಗಿದೆ. ಆದ್ದರಿಂದ ಮತ್ತಷ್ಟು ಬೆಳೆ ನಾಶ ಮತ್ತು ಜೀವ ಹಾನಿಯಾಗುವ ಮುನ್ನ ಸರ್ಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ತಕ್ಷಣವೇ ಕಾಡಾನೆಗಳನ್ನು ಹಿಡಿದು ಅಥವಾ ದೂರದ ಕಾಡಿಗೆ ಓಡಿಸಲು ಮುಂದಿನ ಹತ್ತು ದಿನಗಳ ಒಳಗಾಗಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜಯ ಕರ್ನಾಟಕ ಸಂಘಟನ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು, ರೈತರು, ಬೆಳೆಗಾರರೊಂದಿಗೆ ಸರ್ಕಾರ, ಜಿಲ್ಲಾಡಳಿತ ಮತ್ತು ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರವಾದ ಬೃಹತ್ ಧರಣಿ ಸತ್ಯಾಗ್ರಹಕ್ಕೆ ಮುಂದಾಗಬೇಕಾಗುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮ್, ರಾಜ್ಯ ಸಂಚಾಲಕ ಸಂದೇಶ್, ಬೇಲೂರು ತಾಲೂಕು ಅಧ್ಯಕ್ಷ ಎಸ್.ಎಂ. ರಾಜು, ಸಕಲೇಶಪುರ ತಾಲೂಕು ಅಧ್ಯಕ್ಷ ಚೇತನ್ ಶೆಟ್ಟಿ, ಹೋಬಳಿ ಅಧ್ಯಕ್ಷ ಅಬ್ದುಲ್ ರಜಾಕ್ , ಇತರರು ಉಪಸ್ಥಿತರಿದ್ದರು.