ಸಾರಾಂಶ
ಮೂರು ಸಾಲಿನಲ್ಲಿ ಬರೆಯುವಂತಹ ಚುಟುಕುಗಳನ್ನು ನಾವು ಅರ್ಥೈಸಿಕೊಂಡು ಹೋದಾಗ ಅರ್ಥಪೂರ್ಣವಾದ ವಿವರಣೆ ಸಿಗಲಿಕ್ಕೆ ಸಾಧ್ಯವಾಗುತ್ತದೆ ಎಂದು ಬನ್ನಿಕೊಪ್ಪ ಹಾಗೂ ಮೈಸೂರಿನ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮುಂಡರಗಿ: ಎಲ್ಲ ವಿಷಯಗಳ ಕುರಿತು ಸ್ವತಃ ನೂರಾರು ಚುಟುಕುಗಳನ್ನು ಬರೆಯುವ ಮೂಲಕ ಅನ್ನದಾನೀಶ್ವರ ಸ್ವಾಮೀಜಿ ನಮಗೆಲ್ಲ ಮಾದರಿಯಾಗಿದ್ದಾರೆ. ನಮಗೆಲ್ಲ ಸಾಹಿತ್ಯದ ರುಚಿಯನ್ನು ತೋರಿಸಿದ ನೆಲೆ ಎಂದರೆ ಅದು ಮುಂಡರಗಿ ಅನ್ನದಾನೀಶ್ವರ ಮಠವಾಗಿದೆ. ಮೂರು ಸಾಲಿನಲ್ಲಿ ಬರೆಯುವಂತಹ ಚುಟುಕುಗಳನ್ನು ನಾವು ಅರ್ಥೈಸಿಕೊಂಡು ಹೋದಾಗ ಅರ್ಥಪೂರ್ಣವಾದ ವಿವರಣೆ ಸಿಗಲಿಕ್ಕೆ ಸಾಧ್ಯವಾಗುತ್ತದೆ ಎಂದು ಬನ್ನಿಕೊಪ್ಪ ಹಾಗೂ ಮೈಸೂರಿನ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಪಟ್ಟಣದ ಅನ್ನದಾನೀಶ್ವರ ಮಠದ 154ನೇ ಯಾತ್ರಾ ಮಹೋತ್ಸವದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ, ಜಿಲ್ಲಾ ಘಟಕ ಗದಗ, ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠ ಮುಂಡರಗಿ, ಚುಟುಕು ಸಾಹಿತ್ಯ ಪರಿಷತ್ತು ತಾಲೂಕಾ ಘಟಕದ ಸಂಯುಕ್ತ ಆಶ್ರಯದಲ್ಲಿ ಅಖಂಡ ಧಾರವಾಡ ಜಿಲ್ಲಾ ಮಟ್ಟದ 10ನೇ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಇಂತಹ ಒಂದು ಅರ್ಥಪೂರ್ಣವಾಗಿರುವಂತಹ ನೆಲೆಗಟ್ಟಿನಲ್ಲಿ ಸಾಹಿತ್ಯವನ್ನು ಅರಿತುಕೊಂಡು ಸಾಹಿತ್ಯದ ರುಚಿಯನ್ನು ತಿಳಿದುಕೊಂಡು ಸಾಹಿತ್ಯ ಬರೆಯುವಂತವರಾಗಬೇಕು. ಇಂದಿನ ಯಾಂತ್ರಿಕ ಯುಗದಲ್ಲಿ ಪುಸ್ತಕಗಳನ್ನು ಓದುವುದನ್ನು ನಿಲ್ಲಿಸಿದ್ದೇವೆ. ಅವುಗಳ ಓದಿನಿಂದ ನಮಗೆ ಅಪಾರವಾದ ಜ್ಞಾನ ಬೆಳೆಯಲು ಸಾಧ್ಯವಿದೆ. ಮೂರೇ ಸಾಲಿನಲ್ಲಿ ಅರ್ಥಪೂರ್ಣವಾದ ವಿಚಾರಧಾರೆಗಳನ್ನು ಬಿತ್ತರಿಸುವಂತ ಮಹಾಜ್ಞಾನಿ ಎಂದರೆ ಅದು ಸರ್ವಜ್ಞ ಕವಿ. ಕೃಷ್ಣಮೂರ್ತಿ ಕುಲಕರ್ಣಿ ತೊಂದರೆಗಳ ಮಧ್ಯದಲ್ಲಿಯೂ ಈ ಚುಟುಕು ಸಾಹಿತ್ಯ ಪರಿಷತ್ತನ್ನು ಮುನ್ನಡೆಸಿಕೊಂಡು ಹೋಗುವ ಮೂಲಕ, ಎಸ್.ಎಸ್. ಪಾಟೀಲರಂತಹ ಮುತ್ಸದ್ದಿ ರಾಜಕಾರಣಿಯನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿರುವುದು, ಅನ್ನದಾನೀಶ್ವರ ಸ್ವಾಮೀಜಿಗೆ ಚುಟುಕು ತಪಸ್ವಿ ಪ್ರಶಸ್ತಿ ನೀಡಿ ಗೌರವಿಸಿದ್ದರ ಜತೆಗೆ ನಾಡಿನ ಜನತೆಗೆ ಚುಟುಕುಗಳ ಮಹತ್ವ ತಿಳಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಮಾತನಾಡಿ, ಬಸವಣ್ಣನವರ ತತ್ವಾದರ್ಶಗಳನ್ನು ಇಟ್ಟುಕೊಂಡು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದ್ದು, ನಾವು ಸರ್ಕಾರದ ಯಾವುದೇ ಅನುದಾನವಿಲ್ಲದೇ ಮಠಾಧೀಶರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸಮ್ಮೇಳನ ಆಯೋಜಿಸುತ್ತಾ ಬರುತ್ತಿದ್ದೇವೆ ಎಂದರು. ಸಾನಿಧ್ಯವಹಿಸಿದ್ದ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಚುಟುಕು ಸಾಹಿತ್ಯ ಸಂಕ್ಷಿಪ್ತದಲ್ಲಿದ್ದರೂ ಮಾನವನನ್ನು ಎಚ್ಚರಗೊಳಿಸುತ್ತದೆ. ಜತೆಗೆ ಪ್ರೀತಿಯನ್ನು ಕಲಿಸುತ್ತಿದೆ. ಇವತ್ತಿನ ದಿನಮಾನದಲ್ಲಿ ಮಕ್ಕಳ ಹಕ್ಕು ಶಿಕ್ಷಣ, ಶಿಕ್ಷಣ ಎನ್ನುವುದು ಜನ ಸಂಪದ. ಅದನ್ನು ಕಳ್ಳರು ಕದಿಯರು, ಅದು ಎಂದೂ ನಶಿಸದು. ಇಂದು ಅಂತಹ ಶಿಕ್ಷಣ ಕೊಡುವ ಶಾಲಾ-ಕಾಲೇಜುಗಳಲ್ಲಿನ ಅನೇಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಹೇಗೆ ಸಾಧ್ಯ. ಸರ್ಕಾರ ಶಿಕ್ಷಕರನ್ನು ತುಂಬಲು ಮುಂದಾಗಬೇಕು. ಅನವಶ್ಯಕ ಭಾಗ್ಯಗಳನ್ನು, ಅನವಶ್ಯಕ ಗ್ಯಾರಂಟಿ ಯೋಜನೆಗಳನ್ನು ಕೈಬಿಡಬೇಕು. ದುಡಿಯದೇ ದೊರೆಯುವ ಹಣ ಮನುಷ್ಯನನ್ನು ಎಂದಿಗೂ ಉದ್ಧಾರ ಮಾಡಲು ಸಾಧ್ಯವಿಲ್ಲ ಎಂದರು. ಮಾಜಿ ಸಚಿವ ಎಸ್,ಎಸ್. ಪಾಟೀಲ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ರಾಂತ ಪ್ರಾ. ಎಸ್.ಬಿ. ಕರಿಭರಮಗೌಡ್ರ ಆಶಯ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಜ. ಅನ್ನದಾನೀಶ್ವರ ಸ್ವಾಮೀಜಿಗೆ ಚುಟುಕು ತಪಸ್ವಿ, ಮಾಜಿ ಸಹಕಾರ ಸಚಿವ ಎಸ್.ಎಸ್. ಪಾಟೀಲರಿಗೆ ಸಹಕಾರಿ ದಾಸೋಹಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಚನ್ನಬಸವ ದೇವರು, ಬಳೂಟಗಿ ಶಿವಕುಮಾರ ದೇವರು, ಯಾತ್ರಾ ಮಹೋತ್ಸದ ಅಧ್ಯಕ್ಷ ನಾಗೇಶ ಹುಬ್ಬಳ್ಳಿ, ತಾಲೂಕು ಚುಸಾಪ ಅಧ್ಯಕ್ಷ ಪ್ರೊ. ಸಿ.ಎಸ್. ಅರಸನಾಳ, ಶಂಕರ ಕುಂಬಿ, ಡಿ.ಡಿ.ಎಂ.ದೇಸಾಯಿ, ಚನ್ನಬಸಪ್ಪ ಧಾರವಾಡಶೆಟ್ಟರ, ಜಿಲ್ಲಾ ಚುಸಾಪ ಅಧ್ಯಕ್ಷ ಶೋಭಾ ಮೇಟಿ, ಡಾ.ಬಿ.ಜಿ. ಜವಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿ.ಎಸ್. ಕುಲಕರ್ಣಿ ಐಕ್ಯತಾ ಘೋಷಣೆ ಮಾಡಿದರು. ಕಾಶೀನಾಥ ಬಿಳಿಮಗ್ಗದ ಸ್ವಾಗತಿಸಿ, ಶಶಿಕಲಾ ಕುಕನೂರು ನಿರೂಪಿಸಿ, ವಿಜಯಕುಮಾರ ಬಣಕಾರ ವಂದಿಸಿದರು.