ಇತರರಿಗಾಗಿ ಬದುಕುವವರದ್ದು ಸಾರ್ಥಕ ಜೀವನ: ಡಾ.ಸಿ.ಸೋಮಶೇಖರ

| Published : Mar 30 2024, 12:46 AM IST

ಸಾರಾಂಶ

ರಾಯಚೂರಿನ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಡಾ.ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದ 20ನೇ ವಾರ್ಷಿಕೋತ್ಸವ ಹಾಗೂ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಇತರರಿಗಾಗಿ ಬದುಕುವವರದ್ದು ಸಾರ್ಥಕ ಜೀವನ ಎನಿಸಿಕೊಳ್ಳುತ್ತದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ ತಿಳಿಸಿದರು.

ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಡಾ.ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದ 20ನೇ ವಾರ್ಷಿಕೋತ್ಸವ ಹಾಗೂ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು. ನಮ್ಮ ಮನೆಯಲ್ಲಿನ ಹೆಜ್ಜೆಗಳು ಮನೆಯವರಿಗಷ್ಟೇ ಕಂಡರೆ ಸಮಾಜದಲ್ಲಿನ ಹೆಜ್ಜೆಗಳು ಶಾಶ್ವತವಾಗಿ ಉಳಿಯಲಿವೆ. ತಮಗಾಗಿ ಬದುಕುವವರು ಇದ್ದಾಗಲೇ ಸತ್ತಂತೆ. ಇತರರಿಗೊಸ್ಕರ ಬಾಳುವವರೇ ಸಾರ್ಥಕರಾಗುತ್ತಾರೆ ಎಂದರು.

ತಮ್ಮ ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟ ಡಾ.ಎಂ.ನಾಗಪ್ಪ ಅವರು ಧೀಮಂತ ಹೋರಾಟಗಾರಗಿದ್ದಾರೆ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿ ಇಂದಿಗೂ ಜನ ಅಜ್ಞಾನದಿಂದ ಮೌಢ್ಯದಲ್ಲಿ ಸಿಲುಕಿದ್ದಾರೆ. ಎಲ್ಲರೂ ಕೂಡಿ ದುಡಿದು ಹಂಚಿ ತಿನ್ನುವುದೇ ಬಸವತತ್ವವಾಗಿದೆ. ಉಳ್ಳವರು ಹಂಚಿ ತಿನ್ನಬೇಕು ಎಂದರು.

ಶಿರೂರಿನ ಶ್ರೀ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಗ್ರೀನ್ ರಾಯಚೂರು ಸಂಸ್ಥೆ ಕಾರ್ಯದರ್ಶಿ ರಾಜೇಂದ್ರ ಎಸ್.ಶಿವಾಳೆ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿರೂರು ಮಠದ ಡಾ.ಶ್ರೀ ಬಸವಲಿಂಗ ಸ್ವಾಮಿಗಳು , ವಿಜಯಮಹಾಂತ ಶಾಖಾಮಠ ಲಿಂಗಸೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಬಸಪ್ಪ ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು, ಸಮಾಜದ ಮುಖಂಡರು ಇದ್ದರು.