ಸದ್ಭಾವನೆ, ಸತ್ಕಾರ್ಯಗಳಿಂದ ಸಾರ್ಥಕ ಜೀವನ ಸಾಧ್ಯ: ಹಿರೇಮಗಳೂರು ಕಣ್ಣನ್

| Published : May 20 2025, 01:46 AM IST

ಸದ್ಭಾವನೆ, ಸತ್ಕಾರ್ಯಗಳಿಂದ ಸಾರ್ಥಕ ಜೀವನ ಸಾಧ್ಯ: ಹಿರೇಮಗಳೂರು ಕಣ್ಣನ್
Share this Article
  • FB
  • TW
  • Linkdin
  • Email

ಸಾರಾಂಶ

ಸಂತನ ಗುಣ, ವಿಜ್ಞಾನಿಯ ಬುದ್ಧಿ ಬೆಳೆಸಿಕೊಂಡು ಸಮಷ್ಟಿ ಹಿತ ಬಯಸುವ ವ್ಯಕ್ತಿಯೇ ಶ್ರೇಷ್ಠ ಮಾನವನಾಗುತ್ತಾನೆ. ಬೇಡುವ ಕೈಗಳಿಗಿಂತ ನೀಡುವ ಕೈಗಳೆ ದಿವ್ಯ ಎನ್ನುವ ಶ್ರೀಶಿವರಾತ್ರಿ ರಾಜೇಂದ್ರ ಶ್ರೀಗಳ ಬದುಕು ನಮಗೆಲ್ಲ ಆದರ್ಶವಾಗಬೇಕು. ತನಗಾಗಿ ಬದುಕದೆ ಸಮಾಜದ ಹಿತಕ್ಕಾಗಿ ಬದುಕುವ ವ್ಯಕ್ತಿಗಳನ್ನು ಲೋಕ ನಿರಂತರವಾಗಿ ಸ್ಮರಣೆಗೈಯುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸದ್ಭಾವನೆ, ಸತ್ಕಾರ್ಯಗಳಿಂದ ಸಾರ್ಥಕ ಜೀವನ ಸಾಧ್ಯ ಎಂದು ಚಿಂತಕರಾದ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ತಿಳಿಸಿದರು.

ಊಟಿಯ ತೀಟಕಲ್‌ನ ಜೆಎಸ್ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ನಡೆದ ಜೀವನೋತ್ಸಾಹ ಶಿಬಿರದಲ್ಲಿ ಮಾತನಾಡಿದ ಅವರು, ಬದುಕು ಆದರ್ಶ ಹಾಗೂ ತ್ಯಾಗದಿಂದ ಕೂಡಿರಬೇಕು. ಮನುಷ್ಯ ಉತ್ತಮ ಜೀವನ ಹೊಂದಲು ಸಮದರ್ಶಿತ್ವ, ಸಚ್ಛಾರಿತ್ರ್ಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಸಂತನ ಗುಣ, ವಿಜ್ಞಾನಿಯ ಬುದ್ಧಿ ಬೆಳೆಸಿಕೊಂಡು ಸಮಷ್ಟಿ ಹಿತ ಬಯಸುವ ವ್ಯಕ್ತಿಯೇ ಶ್ರೇಷ್ಠ ಮಾನವನಾಗುತ್ತಾನೆ. ಬೇಡುವ ಕೈಗಳಿಗಿಂತ ನೀಡುವ ಕೈಗಳೆ ದಿವ್ಯ ಎನ್ನುವ ಶ್ರೀಶಿವರಾತ್ರಿ ರಾಜೇಂದ್ರ ಶ್ರೀಗಳ ಬದುಕು ನಮಗೆಲ್ಲ ಆದರ್ಶವಾಗಬೇಕು. ತನಗಾಗಿ ಬದುಕದೆ ಸಮಾಜದ ಹಿತಕ್ಕಾಗಿ ಬದುಕುವ ವ್ಯಕ್ತಿಗಳನ್ನು ಲೋಕ ನಿರಂತರವಾಗಿ ಸ್ಮರಣೆಗೈಯುತ್ತದೆ. ನಾವು ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಅಧ್ಯಾಪಕಿ ನಾಗಶ್ರೀ ತ್ಯಾಗರಾಜ ಅವರು ಉಪಸ್ಥಿತರಿದ್ದು, ಮುದ್ದುರಾಮನ ಚೌಪದಿಗಳನ್ನು ಹಾಡಿದರು.

ಹಿರಿಯರ ಆರೈಕೆ ಅಗತ್ಯ:

ಸಂಸ್ಕೃತಿ ಚಿಂತಕರಾದ ಡಾ.ವಿ.ಬಿ.ಆರತಿ ಮಾತನಾಡಿ, ಹಿರಿಯ ಜೀವಗಳ ಸ್ಮರಣೆ ಮತ್ತು ಆರೈಕೆ ಅತೀ ಅಗತ್ಯ. ನಮ್ಮ ಪೂರ್ವಿಕರ ಸ್ಮರಣೆಯೊಂದಿಗೆ ಮನೆಯಲ್ಲಿರುವ ಹಿರಿಯರಿಗೆ ಸ್ವಲ್ಪವಾದರೂ ಸಮಯ ಕೊಡಬೇಕು. ಹಿರಿಯ ಜೀವಗಳಿಗೆ ಮುಖ್ಯವಾಗಿ ಬೇಕಿರುವುದು ಮನೆಯವರ ಪ್ರೀತಿ ಮತ್ತು ಕಾಳಜಿ. ಹಿರಿಯರ ಭಾವನೆಯನ್ನು ಅರಿತು ಅವರಲ್ಲಿ ಜೀವನೋತ್ಸಾಹ ತುಂಬಲು ಪ್ರಯತ್ನಿಸಬೇಕು ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಋಣಕ್ಕೆ ಹೆಚ್ಚಿನ ಮಹತ್ವವಿದೆ. ನಮಗೆ ವಿವೇಕ ಸೋಪಾನ ನೀಡಿರುವ ನಮ್ಮ ಹಿರಿಯರ ಋಣ ತೀರಿಸಬೇಕಾದ ಹೊಣೆಗಾರಿಕೆ ನಮ್ಮದಾಗಿದೆ ಎಂದರು.

ಕುಲಪತಿ ಡಾ.ನಿರಂಜನ ವಾನಳ್ಳಿ ಮಾತನಾಡಿ, ಬದುಕಿನಲ್ಲಿ ಸುಖ ದುಃಖಗಳು ಬಂದಾಗ ಮನಸ್ಸಿನಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಸ್ಥಿತಪ್ರಜ್ಞತೆಯ ಲಕ್ಷಣವಾಗಿದೆ. ಮನುಷ್ಯನಿಗೆ ಸ್ಥಿತ ಪ್ರಜ್ಞತೆಯಷ್ಟೇ ಸ್ಥಿತಿ ಪ್ರಜ್ಞತೆಯೂ ಮುಖ್ಯ. ನಿಶ್ಚಿತ ಬುದ್ಧಿ ಮತ್ತು ಶಾಂತ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿ ಘನ ವ್ಯಕ್ತಿತ್ವವನ್ನು ಪಡೆದುಕೊಳ್ಳುತ್ತಾನೆ. ನಾವು ಪೂರ್ವಗ್ರಹ ಪೀಡಿತರಾಗದೆ ಜಗತ್ತಿನ ಎಲ್ಲಾ ವ್ಯಕ್ತಿಗಳ ಬಗ್ಗೆ ಪ್ರೀತಿ, ಕರುಣೆ, ವಾತ್ಸಲ್ಯವನ್ನು ಹೊಂದಿರಬೇಕು. ಸ್ಥಿತಪ್ರಜ್ಞತೆ ಎನ್ನುವುದೊಂದು ಆಂತರಿಕ ಶಕ್ತಿ. ನಮ್ಮೊಳಗಿನ ನಿಲುವಿಗೆ ಬದ್ಧರಾಗಿ ಬದುಕುವ ಮೂಲಕ ನೆಮ್ಮದಿಯನ್ನು ಕಾಣಬೇಕು ಎಂದರು.