ವಿದೇಶಿ ಉದ್ಯೋಗ ಆಮಿಷ : 300 ಮಂದಿಗೆ ಬಹುಕೋಟಿ ವಂಚನೆ

| N/A | Published : May 20 2025, 01:45 AM IST / Updated: May 20 2025, 05:20 AM IST

ವಿದೇಶಿ ಉದ್ಯೋಗ ಆಮಿಷ : 300 ಮಂದಿಗೆ ಬಹುಕೋಟಿ ವಂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೊಟೆಕ್ಟರ್‌ ಆಫ್‌ ಎಮಿಗ್ರೇಟ್ಸ್‌ (ಪಿಒಇ) ಕಚೇರಿಯ ನೋಂದಣಿ ಇಲ್ಲದೆ ಮಂಗಳೂರಿನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಏಜೆನ್ಸಿಯೊಂದು ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 300ಕ್ಕೂ ಅಧಿಕ ಮಂದಿಗೆ ವಂಚನೆ ಮಾಡಿದ್ದು, ಈ ಕುರಿತು ಪೊಲೀಸ್‌ ಪ್ರಕರಣ ದಾಖಲಾಗಿದೆ. 

 ಮಂಗಳೂರು : ಪ್ರೊಟೆಕ್ಟರ್‌ ಆಫ್‌ ಎಮಿಗ್ರೇಟ್ಸ್‌ (ಪಿಒಇ) ಕಚೇರಿಯ ನೋಂದಣಿ ಇಲ್ಲದೆ ಮಂಗಳೂರಿನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಏಜೆನ್ಸಿಯೊಂದು ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 300ಕ್ಕೂ ಅಧಿಕ ಮಂದಿಗೆ ವಂಚನೆ ಮಾಡಿದ್ದು, ಈ ಕುರಿತು ಪೊಲೀಸ್‌ ಪ್ರಕರಣ ದಾಖಲಾಗಿದೆ. ಮಾತ್ರವಲ್ಲದೆ ಏಜೆನ್ಸಿಯ ಮಾಲೀಕ, ಮುಂಬೈ ನಿವಾಸಿ ಮಸೈಯುಲ್ಲಾ ಅತಿಯುಲ್ಲಾ ಖಾನ್‌ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏಜೆನ್ಸಿಯಿಂದ ವಂಚನೆಗೆ ಒಳಗಾಗಿರುವ 50ಕ್ಕೂ ಅಧಿಕ ಸಂತ್ರಸ್ತರ ಜತೆ ದ.ಕ. ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್‌ ಡಿಸೋಜ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಎಲ್ಲ ಸಂತ್ರಸ್ತರಿಗೆ ವಂಚನೆ ಮಾಡಿರುವ ವ್ಯಕ್ತಿಗಳಿಂದ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಏನಾಗಿತ್ತು?:

ನಗರದ ಬೆಂದೂರ್‌ವೆಲ್‌ನಲ್ಲಿ ಒಂದು ವರ್ಷದಿಂದ ಕಾರ್ಯಾಚರಿಸುತ್ತಿದ್ದ ಹೈಯರ್‌ ಗ್ಲೋ ಎಲಿಗೆಂಟ್‌ ಓವರ್‌ಸೀಸ್‌ ಇಂಟರ್‌ನ್ಯಾಷನಲ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆಯು ವೆಬ್‌ಸೈಟ್‌, ವಾರ್ತಾ ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳ ಮೂಲಕ ನ್ಯೂಜಿಲೆಂಡ್‌ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿತ್ತು. ಇದನ್ನು ನಂಬಿದ ದ.ಕ. ಜಿಲ್ಲೆಯ 185ಕ್ಕೂ ಅಧಿಕ ಮಂದಿಯಿಂದ ತಲಾ ಸುಮಾರು 1.65 ಲಕ್ಷ ರು.ನಿಂದ 1.85 ಲಕ್ಷ ರು.ವರೆಗೆ ಹಾಗೂ ಇತರ ಏಜೆಂಟ್‌ಗಳ ಮೂಲಕ ಸುಮಾರು 60 ಮಂದಿಯಿಂದ ತಲಾ 2.5 ಲಕ್ಷ ರು.ನಿಂದ 3 ಲಕ್ಷ ರು.ವರೆಗೆ ವಸೂಲಿ ಮಾಡಿತ್ತು. ದ.ಕ. ಮಾತ್ರವಲ್ಲದೆ, ಕೇರಳ, ತಮಿಳುನಾಡು, ಗೋವಾ, ಆಂಧ್ರ ಪ್ರದೇಶ ಸೇರಿದಂತೆ ಒಟ್ಟು 300ರಷ್ಟು ಮಂದಿ ಕೆಲಸ ಸಿಗದೆ ಮೋಸ ಹೋಗಿದ್ದಾರೆ. ಸುಮಾರು 9 ಕೋಟಿ ರು.ಗೂ ಅಧಿಕ ವಂಚನೆ ನಡೆಸಲಾಗಿದೆ ಎಂದು ತಿಳಿಸಿದರು.

ಕಳೆದ ವರ್ಷ ನವೆಂಬರ್‌ ತಿಂಗಳಿನಿಂದ ಉದ್ಯೋಗ ಆಕಾಂಕ್ಷಿಗಳಿಂದ ಏಜೆನ್ಸಿಯು ಹಂತ ಹಂತವಾಗಿ ಹಣ ವಸೂಲಿ ಮಾಡಿದೆ. ಜನವರಿ ಮೊದಲ ವಾರದಲ್ಲಿ ಕೆಲಸಕ್ಕೆ ಸೇರಲು ಕಾಂಟ್ರಾಕ್ಟ್‌ಗೆ ಸಹಿ ಹಾಕಲು ಕಚೇರಿಗೆ ಬರುವಂತೆ ತಿಳಿಸಿದ್ದರೆ, ಜನವರಿ ಕೊನೆಯ ವಾರದಲ್ಲಿ ವೀಸಾ ಪ್ರಕ್ರಿಯೆ ಆರಂಭಿಸಿರುವುದಾಗಿ ನಂಬಿಸಿದ್ದರು. ಮಾರ್ಚ್‌ ತಿಂಗಳ ಕೊನೆಯ ವಾರದಲ್ಲಿ ಎಲ್ಲ ಪ್ರಕ್ರಿಯೆಗಳ ಬಾಕಿ ಮೊತ್ತ ಪಾವತಿಸಲು ಸೂಚಿಸಿದ ಪ್ರಕಾರ ಬಹುತೇಕ ಸಂತ್ರಸ್ತರು ಸಾಲ ಮಾಡಿ ಹಣ ಭರಿಸಿದ್ದಾರೆ.

ಆದರೆ ಏಪ್ರಿಲ್‌ ಕೊನೆ ವಾರದಲ್ಲಿ ಕೊರಿಯರ್‌ ಮೂಲಕ ಉದ್ಯೋಗಾಂಕ್ಷಿಗಳ ವಿಳಾಸಕ್ಕೆ ಅವರ ಪಾಸ್‌ಪೋರ್ಟ್‌ ವಾಪಸ್‌ ಬರುವಾಗ ತಾವು ಮೋಸ ಹೋಗಿರುವುದು ಅರಿವಾಗಿದೆ. ಬಳಿಕ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಳಿಕ ಸಿಸಿಬಿಗೆ ವರ್ಗಾಯಿಸಿ, ಹೈಯರ್‌ ಗ್ಲೋ ಸಂಸ್ಥೆಯ ಮಾಲೀಕ ಮುಂಬೈ ನಿವಾಸಿ ಮಸೈಯುಲ್ಲಾ ಅತಿಯುಲ್ಲಾ ಖಾನ್‌, ಮಂಗಳೂರು ಮೂಲದ ಕಚೇರಿ ಸಿಬ್ಬಂದಿ ಗ್ರೆಟೆಲ್‌ ಕ್ವಾರ್ಡಸ್‌, ಅಶ್ವಿನಿ ಆಚಾರ್ಯ ಹಾಗೂ ಚೈತ್ರಾ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣ ತನಿಖೆಯ ಹಂತದಲ್ಲಿದ್ದು, ಮಾಲೀಕ ಅತಿಯುಲ್ಲಾ ಖಾನ್‌ನನ್ನು ಬಂಧಿಸಲಾಗಿದೆ ಎಂದು ಲಾರೆನ್ಸ್‌ ಡಿಸೋಜ ಹೇಳಿದರು.

ಪಿಒಇ ಅಡಿಯಲ್ಲಿ ನೋಂದಣಿ ಮಾಡದಿರುವ ಏಜೆನ್ಸಿಗಳ ಕುರಿತು ವಿದೇಶಾಂಗ ಇಲಾಖೆಯು ಪೊಲೀಸ್‌ ಇಲಾಖೆಗೆ ಮೊದಲೇ ಮಾಹಿತಿ ನೀಡಿತ್ತು. ಆದರೆ ಸಕಾಲಕ್ಕೆ ಸೂಕ್ತ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಇಷ್ಟು ದೊಡ್ಡ ವಂಚನೆ ಪ್ರಕರಣ ನಡೆದಿದೆ ಎಂದರು.

ಪ್ರಮುಖರಾದ ಜಯರಾಜ್‌ ಕೋಟ್ಯಾನ್‌, ಸಂತ್ರಸ್ತರಾದ ಪ್ರದೀಪ್‌ ಪ್ರೇಮ್‌ ಡಿಸೋಜ, ವಿಲ್ಟನ್‌, ಶೇಖ್‌ ಮುಹಮ್ಮದ್‌, ಲಿಖಿತ್‌ ಅಂಚನ್‌ ಮತ್ತಿತರರು ಇದ್ದರು.

 ನೋಂದಾಯಿತ ಏಜೆನ್ಸಿ ಜತೆ ಮಾತ್ರ ವ್ಯವಹರಿಸಿ..

ವಿದೇಶಾಂಗ ಇಲಾಖೆಯ ಪ್ರೊಟೆಕ್ಟರ್‌ ಆಫ್‌ ಎಮಿಗ್ರೇಟ್ಸ್‌ (ಪಿಒಇ)ನಡಿ ನೋಂದಣಿ ಮಾಡದೆ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಅನೇಕ ಏಜೆನ್ಸಿಗಳಿವೆ. ವಿದೇಶಗಳಲ್ಲಿ ಉದ್ಯೋಗ ಅರಸುವ ಯುವಕರು ಮೋಸ ಹೋಗುವುದನ್ನು ತಪ್ಪಿಸಲು ತಾವು ಸಂಪರ್ಕಿಸುವ ಏಜೆನ್ಸಿಗಳು ಪಿಒಇ ಅಡಿ ನೋಂದಣಿ ಮಾಡಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಎಂದು ಲಾರೆನ್ಸ್‌ ಡಿಸೋಜಾ ಸಲಹೆ ನೀಡಿದರು.

 ತನಿಖೆಯಲ್ಲಿ ಗಂಭೀರ ಲೋಪ: ಇನ್ಸ್‌ಪೆಕ್ಟರ್‌, ಎಸ್‌ಐ ಅಮಾನತು

ವಿದೇಶದಲ್ಲಿ ಉದ್ಯೋಗ ವಂಚನೆ ಪ್ರಕರಣ ನಿರ್ವಹಿಸುವಲ್ಲಿ ಗಂಭೀರ ಲೋಪ ಎಸಗಿದ ಇಬ್ಬರು ಅಧಿಕಾರಿಗಳನ್ನು ಮಂಗಳೂರು ನಗರ ಪೊಲೀಸ್‌ ಆಯುಕ್ತರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.

ಹಿಂದಿನ ದೂರುಗಳು ಮತ್ತು ನಿರ್ದೇಶನಗಳನ್ನು ನೀಡಿದ್ದರೂ ಕೂಡ ಹೈರ್‌ಗ್ಲೋ ಎಲಿಗಂಟ್ ಓವರ್‌ಸೀಸ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿಫಲರಾದ ಕಾರಣ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೋಮಶೇಖರ್ ಜಿ.ಸಿ. ಅವರನ್ನು ಅಮಾನತುಗೊಳಿಸಲಾಗಿದೆ. ಬಹು ತನಿಖಾ ಲೋಪಗಳಿಗಾಗಿ ಈ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿದ್ದ (ಬಳಿಕ ಬರ್ಕೆ ಪೊಲೀಸ್ ಠಾಣೆಗೆ ನಿಯೋಜಿತರಾಗಿದ್ದರು) ಪಿಎಸ್‌ಐ ಉಮೇಶ್ ಕುಮಾರ್ ಎಂ.ಎನ್. ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್‌ ಆಯುಕ್ತರು ಆದೇಶಿಸಿದ್ದಾರೆ. ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖಾ ಶಿಸ್ತು ಕ್ರಮಗಳನ್ನು ಆರಂಭಿಸಲಾಗಿದೆ.

Read more Articles on