ಕಳಪೆ ಬೀಜ ಮಾರಾಟ ಪ್ರಕರಣ: 21ರಂದು ಧರಣಿಗೆ ನಿರ್ಧಾರ

| Published : May 18 2025, 01:23 AM IST

ಕಳಪೆ ಬೀಜ ಮಾರಾಟ ಪ್ರಕರಣ: 21ರಂದು ಧರಣಿಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಳಪೆ ಬೀಜ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಪರಿಹಾರ ಕೊಡಿಸುವ ಭರವಸೆ ನೀಡಿ ಮಾತಿಗೆ ತಪ್ಪಿದ ಹಾವೇರಿ ಜಿಲ್ಲಾಧಿಕಾರಿ ಮತ್ತು ಬೀಜ ಮಾರಾಟ ಮಾಡಿದ ಹೈದರಾಬಾದ್ ಧನ್‌ಕ್ರಾಫ್ ಮತ್ತು ಸನ್ಸ್‌ ಪ್ರೈ.ಲಿ. ವಿರುದ್ಧ ಮೇ 21ರಿಂದ ಬ್ಯಾಡಗಿ ತಾಪಂ ಆವರಣದಲ್ಲಿರುವ ಶಾಸಕರ ಕಚೇರಿ ಎದುರು ನಿರಂತರ ಧರಣಿ ನಡೆಸುವುದಾಗಿ ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.

ಬ್ಯಾಡಗಿ: ಕಳಪೆ ಬೀಜ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಪರಿಹಾರ ಕೊಡಿಸುವ ಭರವಸೆ ನೀಡಿ ಮಾತಿಗೆ ತಪ್ಪಿದ ಹಾವೇರಿ ಜಿಲ್ಲಾಧಿಕಾರಿ ಮತ್ತು ಬೀಜ ಮಾರಾಟ ಮಾಡಿದ ಹೈದರಾಬಾದ್ ಧನ್‌ಕ್ರಾಫ್ ಮತ್ತು ಸನ್ಸ್‌ ಪ್ರೈ.ಲಿ.ನಿಂದ ಸಂತ್ರಸ್ತ ರೈತರಿಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಮೇ 21ರಂದು ಸಂತ್ರಸ್ತ ರೈತರೊಂದಿಗೆ ತಾಪಂ ಆವರಣದಲ್ಲಿರುವ ಶಾಸಕರ ಕಚೇರಿ ಎದುರು ನಿರಂತರ ಧರಣಿ ನಡೆಸುವುದಾಗಿ ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.

ಈ ಕುರಿತು ಶನಿವಾರ ತಹಸೀಲ್ದಾರ್‌ ಫಿರೋಜ್‌ ಶಾ ಸೋಮನಕಟ್ಟಿ ಅವರಿಗೆ ಲಿಖಿತ ಮನವಿಯೊಂದನ್ನು ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಬಡಮಲ್ಲಿ, ಹಿರೇಹಳ್ಳಿ, ಭಗತ್‌ಸಿಂಗ್ ನಗರ, ಚಿಕ್ಕಳ್ಳಿ ಗ್ರಾಮಗಳಲ್ಲಿ ಬೇಸಿಗೆ ಹಂಗಾಮಿನಲ್ಲಿ ಮೆಣಸಿನಕಾಯಿ ಬೀಜ ಬಿತ್ತನೆ ಮಾಡಿದ್ದರು. ಆದರೆ ಗಿಡಗಳು ದೊಡ್ಡದಾಗಿ ಬೆಳೆದಿದ್ದರೂ ಅದರಲ್ಲಿ ಕಾಯಿಗಳು ಮಾತ್ರ ಬಿಟ್ಟಿರಲಿಲ್ಲ. ಹೀಗಾಗಿ ರೈತರು ತೀವ್ರ ನಷ್ಟ ಅನುಭವಿಸಿದ್ದರು. ಅವರಿಗೆ ಸೂಕ್ತ ಪರಿಹಾರ ನೀಡುವ ವರೆಗೂ ಧರಣಿ ಕೈಬಿಡುವುದಿಲ್ಲ ಎಂದರು.

ವರದಿ ನಿರ್ಲಕ್ಷ್ಯ: ಮೂರು ಹಂತದಲ್ಲಿಯೂ ವಿಜ್ಞಾನಿಗಳ ಪರೀಕ್ಷೆ ನಡೆಸಿದ್ದು, ಅವರೆಲ್ಲರ ವರದಿ ಕೂಡ ಬಂದಿದೆ. ಮಾರಾಟ ಮಾಡಿರುವ ಬೀಜಗಳು ಕಳಪೆಯಾಗಿದ್ದು, ಕಾಯಿ ಬಿಡುವುದಿಲ್ಲ ಎಂಬುದಾಗಿ ವರದಿಯಲ್ಲಿ ಹೇಳಲಾಗಿದೆ. ಹಾಗಿದ್ದಾಗ್ಯೂ ಬೀಜ ಕಂಪನಿಯವರು ಕ್ಯಾರೇ ಎನ್ನುತ್ತಿಲ್ಲ. ಹಾಗಿದ್ದರೆ ಜಿಲ್ಲೆಯ ರೈತರು ಯಾವ ನಂಬಿಕೆ ಮೇಲೆ ಕೃಷಿ ನಡೆಸಬೇಕು ಎಂದು ಪ್ರಶ್ನಿಸಿದರು.

ಕಾಯುವವರೇ ಕೊಂದರು: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಕಾರ್ಯಕ್ರಮವೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾನಗಲ್ಲ ಪಟ್ಟಣಕ್ಕೆ ಆಗಮಿಸುವ ವೇಳೆಯಲ್ಲಿ ರೈತರಿಗೆ ನ್ಯಾಯ ಕೊಡಿಸುವಂತೆ ಘೇರಾವ್‌ ಹಾಕುವುದಾಗಿ ಎಚ್ಚರಿಸಿದ್ದೆವು. ಈ ವೇಳೆ ಜಿಲ್ಲಾಧಿಕಾರಿ ಸಂತ್ರಸ್ತ ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಏನನ್ನೂ ಮಾಡಿದಿರುವ ಅವರ ವರ್ತನೆ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಆದ್ದರಿಂದ ಕ್ಷೇತ್ರದ ಶಾಸಕರು ನಮ್ಮ ರೈತರಿಗೆ ನ್ಯಾಯ ಒದಗಿಸುವ ವರೆಗೂ ರೈತ ಸಂಘ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಎಚ್ಚರಿಸಿದರು.

ರೈತ ಸಂಘದ ಮೌನೇಶ ಕಮ್ಮಾರ, ಶಿವಬಸಪ್ಪ ಭೋವಿ, ಶಿವಯೋಗಿ ಹೊಸಗೌಡ್ರ, ಸುರೇಶ ಛಲವಾದಿ, ಜಾನ್ ಪುನೀತ್, ಚಂದ್ರಶೇಖರ ತೋಟದ, ವಿ.ಆರ್. ಅಂಗಡಿ, ನಾಗರಾಜ ಬನ್ನಿಹಳ್ಳಿ, ಕಾಂತೇಶ ಅಗಸಿಬಾಗಿಲ, ಮಾಲತೇಶ ಲಕ್ಕಮ್ಮನವರ, ಬಸವರಾಜ ಹಿರೇಮಠ, ಮಂಜುನಾಥ ದಿಡಗೂರು, ಮಂಜುನಾಥ ಗೌರಾಪುರ, ವೀರೇಶ ದೇಸೂರು ಇದ್ದರು.ಎಕರೆಗೆ ₹4 ಲಕ್ಷ ಪರಿಹಾರ ಕೊಡಿ: ಪ್ರತಿ ಎಕರೆಗೆ ಮೆಣಸಿನಕಾಯಿ ಸಸಿ ನೆಟ್ಟು ಬೆಳೆಸಲು ₹1.5 ಲಕ್ಷ ಖರ್ಚು ಮಾಡಿದ್ದೇವೆ. ಇದೀಗ ಹಸಿ ಮೆಣಸಿನಕಾಯಿ ದರ ಕ್ವಿಂಟಲ್‌ಗೆ ₹8 ಸಾವಿರವಿದೆ. ರೈತರಿಗೆ ಪ್ರತಿ ಎಕರೆಗೆ ₹4 ಲಕ್ಷ ಪರಿಹಾರ ನೀಡಬೇಕು ರೈತ ಮುಖಂಡ ಪ್ರಕಾಶ ಸಿದ್ಧಪ್ಪನವರ ಖುರ್ದಕೋಡಿಹಳ್ಳಿ ಹೇಳಿದರು.