ಸಾರಾಂಶ
ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ನೇರವಾಗಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುವದರಿಂದ ಭ್ರಷ್ಟಾಚಾರ ನಿರ್ಬಂಧ ಕಾಯ್ದೆ ಪ್ರಕಾರ ಪ್ರಕಣರ ದಾಖಲಾಗಬೇಕಿದೆ.
ಶಿರಸಿ: ಇಲ್ಲಿನ ನಗರಸಭೆಯಲ್ಲಿ ನಡೆದ ಕಬ್ಬಿಣ-ಬೀಡು ಪೈಪ್ ಮಾರಾಟ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ, ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ನಾಗರಾಜ ಮಡಿವಾಳ ಕಾರವಾರದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ.
ಅಪರಾಧದಲ್ಲಿ ಶಿರಸಿ ನಗರಸಭೆಯ ಉನ್ನತ ಅಧಿಕಾರಿಗಳು ಹಾಗೂ ಚುನಾಯಿತ ಸದಸ್ಯರು ಭಾಗಿಯಾಗಿರುವದು ಸ್ಪಷ್ಟವಾಗಿದ್ದು, ಸರ್ಕಾರದ ಸ್ವತ್ತನ್ನು ಕಾನೂನುಬದ್ಧವಾಗಿ ರಕ್ಷಿಸಬೇಕಾದ ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟ ಹಾಗೂ ಕಾನೂನಿಗೆ ವಿರುದ್ಧವಾಗಿ ತಮ್ಮ ಲಾಭ ಪಡೆಯಲು ಸರ್ಕಾರದ ಬೊಕ್ಕಸಕ್ಕೆ ಹಾನಿಯನ್ನು ಉಂಟುಮಾಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ನೇರವಾಗಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುವದರಿಂದ ಭ್ರಷ್ಟಾಚಾರ ನಿರ್ಬಂಧ ಕಾಯ್ದೆ ಪ್ರಕಾರ ಪ್ರಕಣರ ದಾಖಲಾಗಬೇಕಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಸರ್ಕಾರಿ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮಾತ್ರ ಅಧಿಕಾರ ಹೊಂದಿದ್ದಾರೆ. ಸದ್ಯ ಪ್ರಕರಣ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತ ಇರುವುದು ಸೂಕ್ತವಾಗಿ ಕಂಡುಬರುತ್ತಿಲ್ಲ. ಹಾಗಾಗಿ ಪ್ರಕರಣ ತೀವ್ರತೆ ಹಾಗೂ ತಮ್ಮ ಸುಪರ್ಧಿಯಲ್ಲಿ ಪ್ರಕರಣ ತನಿಖೆ ಆಗಬೇಕಿರುವುದು ಕಾನೂನಿನ ಅವಶ್ಯಕತೆ ಇದೆ. ಪ್ರಕರಣರವನ್ನು ವರ್ಗಾವಣೆ ಪಡೆದು ಸೂಕ್ತವಾದ ಮುಂದಿನ ತನಿಖೆ ನಿರ್ವಹಿಸಿ ಆರೋಪಿತರ ಮೇಲೆ ಕ್ರಮ ತೆಗೆದುಕೊಳ್ಳಲು ಎಂದು ಒತ್ತಾಯಿಸಿದ್ದಾರೆ.