ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಸಾಲಿಗ್ರಾಮ ತಾಲೂಕಿನ ನರಚನಹಳ್ಳಿ ಅಂಬಲಿ ಮಠಕ್ಕೆ ಸ್ವಾಮೀಜಿಗಳನ್ನು ನೇಮಕ ಮಾಡುವ ವಿಚಾರ ಮತ್ತು ಜಮೀನು ವ್ಯಾಜ್ಯದ ಸಂಬಂಧ ಉಂಟಾಗಿದ್ದ ಸಮಸ್ಯೆಗೆ ಬೆಟ್ಟದಪುರ ಸಲಿಲಾಖ್ಯ ಮಠದ ಚನ್ನಬಸವದೇಶಿ ಕೇಂದ್ರ ಶ್ರೀಗಳು ಮತ್ತು ಇತರ ಮಠಾಧೀಶರ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳಲಾಯಿತು.ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್ ಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ ಮತ್ತು ಗ್ರಾಮದ ಪ್ರಮುಖರ ನೇತೃತ್ವ ಹಾಗೂ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ನಡೆದ ಸುದೀರ್ಘ ಸಂಧಾನ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.ಮಠದ ಸ್ವಾಮೀಜಿಗಳ ನೇಮಕ ಮತ್ತು ಆಸ್ತಿಗೆ ಸಂಬಂಧಿಸಿದ ಪ್ರಕರಣ ಕೆ.ಆರ್. ನಗರದ ಜೆಎಂಎಫ್‌ಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರಿಂದ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ್ಯಾಯಾಲಯವು ಆದೇಶ ನೀಡಿದ ಹಿನ್ನೆಲೆ ಸಮಸ್ಯೆಯನ್ನು ದೊಡ್ಡದು ಮಾಡಿಕೊಳ್ಳದೆ ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ದೂರುದಾರರು ಮುಂದಾದ ಹಿನ್ನೆಲೆ ವಿವಾದ ಸುಖಾಂತ್ಯಗೊಂಡಿತು.ಚರ್ಚೆ ನಡೆಸಿದ ಸ್ವಾಮೀಜಿ, ಮುಖಂಡರು ಮತ್ತು ಗ್ರಾಮಸ್ಥರು ಮಠಕ್ಕೆ ನೂತನ ಶ್ರೀಗಳನ್ನು ನೇಮಕ ಮಾಡುವ ಪರಮಾಧಿಕಾರವನ್ನು ಕುಂದೂರು ಮಠದ ಸ್ವಾಮೀಜಿಗಳಿಗೆ ವಹಿಸಲು ನಿರ್ಧರಿಸಿ, ಅಲ್ಲಿಯವರೆಗೆ ಕಾರ್ಯಕ್ರಮ ನಡೆಸಿ ಉಸ್ತುವಾರಿ ವಹಿಸಲು ಸಿ.ಪಿ. ರಮೇಶ್ ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದರು.ಇದರ ಜತೆಗೆ ಅಂಬಲಿ ಮಠದ ವಿಚಾರದಲ್ಲಿ ಸಭೆ ನಡೆಸಿ ತೆಗೆದುಕೊಂಡ ನಿರ್ಣಯ ಹಾಗೂ ತೀರ್ಮಾನಗಳನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಅವಹಗಾನೆಗೆ ತಂದು ಅವರ ಮಾರ್ಗದರ್ಶನ ಪಡೆಯಲು ಒಮ್ಮತದಿಂದ ನಿರ್ಧಾರಿಸಲಾಯಿತು.ಶ್ರೀ ಚನ್ನಬಸವದೇಶೀಕೇದ್ರ ಸ್ವಾಮೀಜಿ ಮಾತನಾಡಿ, ಮಠಗಳು ವಿವಾದದ ಕೇಂದ್ರ ಬಿಂದುಗಳಾಗದೆ ಸರ್ವರ ಉದ್ದಾರ ಮತ್ತು ಸಾಮರಸ್ಯದ ತಾಣಗಳಾಗಬೇಕು, ಹಾಗಾಗಿ ಮುಂದಿನ ದಿನಗಳಲ್ಲಿ ಎಲ್ಲರೂ ಸೌಹಾರ್ದತೆಯಿಂದ ಬದುಕಿ ಸಮಾಜಕ್ಕೆ ಮಾದರಿಯಾಗಬೇಕೆಂದು ಸಲಹೆ ನೀಡಿದರು.ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್ ಕುಮಾರ್ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ಮಠದ ಸ್ವಾಮೀಜಿಗಳ ನೇಮಕ ಮತ್ತು ಜಮೀನಿನ ವಿಚಾರದಲ್ಲಿ ಉಂಟಾಗಿದ್ದ ಗೊಂದಲ ಪರಿಹಾರವಾಗಿದ್ದು, ಇದು ಅತ್ಯಂತ ಸಂತಸದ ವಿಚಾರ ಎಂದರಲ್ಲದೆ, ಭವಿಷ್ಯದಲ್ಲಿ ನಾನು ಮಠದ ಆಭಿವೃದ್ದಿಗೆ ಎಲ್ಲ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.ಅರಕೆರೆ ವಿರಕ್ತ ಮಠದ ಸಿದ್ದೇಶ್ವರ ಸ್ವಾಮೀಜಿ, ಲಾಲನಹಳ್ಳಿ ಅಂಬಲಿ ಮಠದ ಜಯದೇವಿತಾಯಿ, ದಿಂಡಗಾಡು ಮಠದ ಅಪ್ಪಾಜಿ ಸ್ವಾಮೀಜಿ, ಕರ್ಪೂರವಳ್ಳಿ ಜಂಗಮ ಮಠದ ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಾಡ್ಯ ಈಶಾನ್ನೇಶ್ವರ ಮಠದ ಬಸವರಾಜ ಸ್ವಾಮೀಜಿ, ಕಲ್ಯಾಣಪುರ ಮಠದ ಚಿನ್ಮಯಿತಾಯಿ, ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು, ಯುವ ಘಟಕದ ಮಾಜಿ ಅಧ್ಯಕ್ಷ ಎಲ್.ಪಿ. ರವಿಕುಮಾರ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಣ್ಣಪ್ಪ, ನರಚನಹಳ್ಳಿ ಗ್ರಾಮದ ಮುಖಂಡರಾದ ಪ. ಚಂದ್ರಶೇಖರ್, ವೀರಪ್ಪ, ಮಲ್ಲಿಕಾರ್ಜುನ, ವಿಜಯಕುಮಾರ್, ನವೀನ್‌ಕುಮಾರ್, ಅಪ್ಪಾಜಿ ಇದ್ದರು.