ಹಳಿಯಾಳದಲ್ಲಿ ಡಿಸಿ ಲಕ್ಷ್ಮೀಪ್ರಿಯಾ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ಬೆಳೆಗಾರರು ಕಾರ್ಖಾನೆಯವರ ಸಭೆ ವಿಫಲ

| Published : Nov 10 2024, 01:37 AM IST

ಹಳಿಯಾಳದಲ್ಲಿ ಡಿಸಿ ಲಕ್ಷ್ಮೀಪ್ರಿಯಾ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ಬೆಳೆಗಾರರು ಕಾರ್ಖಾನೆಯವರ ಸಭೆ ವಿಫಲ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಕಪಕ್ಕದ ಕಾರ್ಖಾನೆಯವರು ನೀಡುವ ದರಕ್ಕಿಂತ ಹಳಿಯಾಳದ ಕಾರ್ಖಾನೆಯವರು ಅತ್ಯಂತ ಕಡಿಮೆ ದರವನ್ನು ನೀಡುತ್ತಿದ್ದು, ಕಬ್ಬು ಕಟಾವು ಮತ್ತು ಸಾಗಾಟ ದರ ಆಕರಣೆಯಲ್ಲೂ ಶೋಷಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ಹಳಿಯಾಳ: ಪ್ರಸಕ್ತ ಸಾಲಿಗೆ ಕಬ್ಬಿಗೆ ದರವನ್ನು ನಿಗದಿಪಡಿಸಲು ಶನಿವಾರ ನಡೆದ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯವರ ಸಭೆಯು ಯಾವುದೇ ತೀರ್ಮಾನಕ್ಕೆ ಬರದೇ ವಿಫಲವಾಗಿದೆ.

ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹಾಗೂ ಜಿಲ್ಲಾ ಎಸ್ಪಿ ಎಂ. ನಾರಾಯಣ ಅವರು ರೈತರ ಪರವಾಗಿ ತೀರ್ಮಾನವನ್ನು ಕೈಗೊಳ್ಳುವಂತೆ ಕಾರ್ಖಾನೆ ಆಡಳಿತ ಮಂಡಳಿಯವರಿಗೆ ಮನವರಿಕೆ ಮಾಡಲು ಕೈಗೊಂಡ ಪ್ರಯತ್ನಗಳು ವಿಫಲಗೊಂಡವು.ಸುಮಾರು ನಾಲ್ಕೂವರೆ ಗಂಟೆಯವರೆಗೆ ನಡೆದ ಸುದೀರ್ಘ ಸಭೆಯಲ್ಲಿ ಕಬ್ಬು ಬೆಳೆಗಾರರು ಮಂಡಿಸಿದ ತರ್ಕಬದ್ಧ ವಾದಕ್ಕೆ ಉತ್ತರಿಸಲು ಮುಜುಗರಕ್ಕೊಳಗಾದ ಕಾರ್ಖಾನೆಯ ಆಡಳಿತ ಮಂಡಳಿಯವರು, ಬಾರಿ ಚೌಕಾಶಿ ಮಾಡಿ ಅಳೆದು ತೂಗಿ ಪ್ರತಿ ಟನ್ ಕಬ್ಬಿಗೆ ₹2975 ದರ ನೀಡಲು ಮುಂದಾದಾಗ, ಕಬ್ಬು ಬೆಳೆಗಾರರು ಕಾರ್ಖಾನೆ ಘೋಷಿಸಿದ ದರಕ್ಕೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿ ಸಭೆಯಿಂದ ತೀವ್ರ ಬೇಸರದಿಂದ ಹೊರನಡೆದರು.ಲಾಭ ನಷ್ಟ ಲೆಕ್ಕ ಬೇಡ: ಕಬ್ಬು ಬೆಳೆಗಾರರ ಪರವಾಗಿ ಹಳಿಯಾಳ ಕಬ್ಬು ಬೆಳೆಗಾರರ ಸಂಘದ ಪ್ರಮುಖರಾದ ಕುಮಾರ ಬೊಬಾಟೆ, ಎನ್.ಎಸ್. ಜಿವೋಜಿ, ಅಶೋಕ ಮೇಟಿ, ಶಂಕರ ಕಾಜಗಾರ, ಸುರೇಶ ಶಿವಣ್ಣನವರ, ಧಾರವಾಡ ಕಬ್ಬು ಬೆಳೆಗಾರರ ಪ್ರಮುಖರಾದ ಮಹೇಶ ಬೆಳಗಾಂವಕರ, ನಿಜಗುಣಿ ಕೆಲಗೇರಿ ಅವರು ಅತಿವೃಷ್ಟಿಯಿಂದ ರೈತರು ಸಂಕಷ್ಟಕೊಳ್ಳಗಾಗಿದ್ದಾರೆ. ಇಂತಹ ಸಂಕಟದ ಸ್ಥಿತಿಯಲ್ಲಿ ಕಾರ್ಖಾನೆಯವರು ರೈತರ ಪರವಾಗಿ ನಿರ್ಣಯವನ್ನು ಕೈಗೊಳ್ಳಬೇಕೆಂದರು.

ಅಕ್ಕಪಕ್ಕದ ಕಾರ್ಖಾನೆಯವರು ನೀಡುವ ದರಕ್ಕಿಂತ ಹಳಿಯಾಳದ ಕಾರ್ಖಾನೆಯವರು ಅತ್ಯಂತ ಕಡಿಮೆ ದರವನ್ನು ನೀಡುತ್ತಿದ್ದು, ಕಬ್ಬು ಕಟಾವು ಮತ್ತು ಸಾಗಾಟ ದರ ಆಕರಣೆಯಲ್ಲೂ ಶೋಷಿಸುತ್ತಿದ್ದಾರೆ ಎಂದರು.ಅಹವಾಲು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು, ಕಬ್ಬು ಕಟಾವು ಮತ್ತು ಸಾಗಾಟ ದರವನ್ನು ಆಯಾ ಪ್ರದೇಶವಾರು ನಿಗದಿಪಡಿಸಲು ಸಮಿತಿಯನ್ನು ರಚಿಸಿ ಸಮೀಕ್ಷೆ ಮಾಡಲಾಗುವುದು. ಅಲ್ಲದೇ ಕಬ್ಬ ಬೆಳೆಗಾರರ ಮಂಡಿಸಿದ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ ನ್ಯಾಯವನ್ನು ನೀಡಲಾಗುವುದು ಎಂದರು.ಅಳೆದು ತೂಗಿ ದರ: ಕಾರ್ಖಾನೆಯ ಪರವಾಗಿ ಮಾತನಾಡಿದ ಕಬ್ಬು ವಿಭಾಗದ ಮುಖ್ಯಸ್ಥ ರಮೇಶ ರೆಡ್ಡಿ ಅವರು, ಸರ್ಕಾರ ನಿಗದಿಪಡಿಸದಂತೆ ಎಫ್ಆರ್‌ಪಿ ದರ ಪ್ರತಿ ಟನ್‌ಗೆ ₹3685ಗಳಿದ್ದು, ಈ ಬಾರಿ ಕಬ್ಬು ಕಟಾವು ಮತ್ತು ಸಾಗಾಟದ ದರವು ಹೆಚ್ಚಾಗಿದೆ. ಮಹಾರಾಷ್ಟ್ರದ ದರವನ್ನು ಹೆಚ್ಚಿಸಲಾಗಿದೆ. ಆದರೆ ನಮ್ಮ ಕಾರ್ಖಾನೆಯವರು ಕಬ್ಬು ಕಟಾವು ಮತ್ತು ಸಾಗಾಟದ ಹೆಚ್ಚಿನ ಹೊರೆಯನ್ನು ರೈತರ ಮೇಲೆ ಹೊರಿಸದೇ ಕಬ್ಬು ಕಟಾವು ಮತ್ತು ಸಾಗಾಟದ ದರ ಪ್ರತಿ ಟನ್ ಕಬ್ಬಿಗೆ ₹750 ನಿಗದಿಪಡಿಸಿ, ಈ ಪ್ರತಿ ಟನ ಕಬ್ಬಿಗೆ ₹2950 ನೀಡಲು ತೀರ್ಮಾನಿಸಿದ್ದೇವೆ ಎಂದರು.ದರ ತಿರಸ್ಕಾರ: ಕಬ್ಬಿನ ದರ ಕೇಳಿ ತೀವ್ರ ಆಕ್ರೋಶಿತಗೊಂಡ ಕಬ್ಬು ಬೆಳೆಗಾರರು ನೆರೆಯ ಖಾನಾಪುರದಲ್ಲಿ ಕಳೆದ ವರ್ಷ ಪ್ರತಿ ಟನ್ ಕಬ್ಬಿಗೆ ₹3050 ನೀಡಲಾಗಿದೆ. ಇಐಡಿ ಕಾರ್ಖಾನೆಯ ದರ ಯೋಗ್ಯವಾಗಿಲ್ಲ ಎಂದು ಆಕ್ಷೇಪಿಸಿ ಇನ್ನೂ ಹೆಚ್ಚಿನ ದರ ನೀಡುವಂತೆ ಪಟ್ಟು ಹಿಡಿದರು. ಈ ಹಿನ್ನೆಲೆ ಕಾರ್ಖಾನೆಯ ಆಡಳಿತ ಮಂಡಳಿಯ ವ್ಯವಸ್ಥಾಪಕ ಮುಖ್ಯಸ್ಥ ಬಾಲಾಜಿಯವರು ತಮ್ಮ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಅರ್ಧ ಗಂಟೆಯ ನಂತರ ಬಂದು ತಮ್ಮ ತೀರ್ಮಾನವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿಗಳು ಪ್ರತಿ ಟನ್ ಕಬ್ಬಿಗೆ ಕಾಖಾನೆಯವರು ₹2975 ನೀಡಲು ಮುಂದಾಗಿದ್ದಾರೆಂದು ಘೋಷಿಸಿದರು. ಈ ತೀರ್ಮಾನಕ್ಕೆ ಕಬ್ಬು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿ, ದರವನ್ನು ತಿರಸ್ಕರಿಸುವುದಾಗಿ ಹೇಳಿದರು. ಸಭೆಯಲ್ಲಿ ಅಪರ್ ಜಿಲ್ಲಾಧಿಕಾರಿ ಸಾಜೀದ ಮುಲ್ಲಾ, ಹೆಚ್ಚುವರಿ ಎಸಿ ಜಗದೀಶ್, ಕಾರವಾರ ಎಸಿ ಕನಿಷ್ಕ, ಧಾರವಾಡ ಎಸಿ ಶಾಲಮಾ ಹುಸೇನ್, ಧಾರವಾಡ ಮತ್ತು ಉತ್ತರಕನ್ನಡ ಪ್ರಮುಖ ಅಧಿಕಾರಿಗಳು ಇದ್ದರು.