ಶೀಘ್ರ ಬೆಂಬಲಿಗರ ಸಭೆ ಕರೆದು ರಾಜಕೀಯ ನಡೆ ತೀರ್ಮಾನ

| Published : Mar 26 2024, 01:16 AM IST

ಸಾರಾಂಶ

ಲೋಕಸಭೆ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಿ ಎಂಬ ತಮ್ಮ ಕೂಗಿಗೆ ಮನ್ನಣೆ ಸಿಕ್ಕಿಲ್ಲ. ನಿರಂತರ ಹೋರಾಟ ಮಾಡಿದರೂ ಹೊರಗಿನವರಿಗೆ ಟಿಕೆಟ್ ನೀಡಿರುವುದು ತಮಗೆ ಅತೀವ ನೋವು ತಂದಿದೆ. ಹಾಗಾಗಿ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಶೀಘ್ರ ಬೆಂಬಲಿಗರ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ಕಾಂಗ್ರೆಸ್ ಟಿಕೆಟ್ ವಂಚಿತ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಹೇಳಿದರು.

ಕಾಂಗ್ರೆಸ್ ಟಿಕೆಟ್ ವಂಚಿತ ಜೆ.ಜೆ ಹಟ್ಟಿ ತಿಪ್ಪೇಸ್ವಾಮಿ । ಸ್ಥಳೀಯರಿಗೆ ಟಿಕೆಟ್ ನೀಡಿದರೆ ಬೆಂಬಲಿಸುವೆಕನ್ನಡಪ್ರಭವಾರ್ತೆ ಚಿತ್ರದುರ್ಗ

ಲೋಕಸಭೆ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಿ ಎಂಬ ತಮ್ಮ ಕೂಗಿಗೆ ಮನ್ನಣೆ ಸಿಕ್ಕಿಲ್ಲ. ನಿರಂತರ ಹೋರಾಟ ಮಾಡಿದರೂ ಹೊರಗಿನವರಿಗೆ ಟಿಕೆಟ್ ನೀಡಿರುವುದು ತಮಗೆ ಅತೀವ ನೋವು ತಂದಿದೆ. ಹಾಗಾಗಿ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಶೀಘ್ರ ಬೆಂಬಲಿಗರ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ಕಾಂಗ್ರೆಸ್ ಟಿಕೆಟ್ ವಂಚಿತ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಟಿಕೆಟ್ ನೀಡುವಂತೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಸಕರೂ ಪತ್ರ ನೀಡಿದ್ದರು. ಅವರಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತ್ರ ನೀಡಿರಲಿಲ್ಲ. ಶಾಸಕರು ಸಹಿ ಮಾಡಿದ ಪತ್ರ ನಕಲಿ, ಫೋರ್ಜರಿ ಎಂಬ ಆರೋಪ ಮಾಡಿ ಕಾಂಗ್ರೆಸ್ ಹೈಕಮಾಂಡ್‌ನ ದಿಕ್ಕು ತಪ್ಪಿಸಲಾಗಿದೆ. ಶಾಸಕರು ನೀಡಿರುವ ಲೆಟರ್ ಫೋರ್ಜರಿ ಎಂದಾದಲ್ಲಿ ಫೊರೆನ್ಸಿಕ್ ಲ್ಯಾಬ್‌ಗೆ ಕಳಿಸಿ ಅಸಲಿತನ ಪರೀಕ್ಷೆ ಮಾಡಿಸಲಿ ಎಂದು ತಿಪ್ಪೇಸ್ವಾಮಿ ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಸ್ಥಳೀಯರಿಗೆ ಅನ್ಯಾಯವಾಗುತ್ತಾ ಬಂದಿದೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಎನ್ಎಸ್‌ಯುಐ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಪರಿಗಣಿಸುತ್ತಾರೆ, ಆದರೆ ಲೋಕಸಭೆಗೆ ಏಕೆ ನಿರ್ಲಕ್ಷ್ಯ ಮಾಡಲಾಗುತ್ತದೆ ಎಂಬ ಬಗ್ಗೆ ಅರ್ಥವಾಗುತ್ತಿಲ್ಲ. ಡಾ.ಹೆಚ್.ಸಿ ಮಹಾದೇವಪ್ಪ ಅವರು ವೀಕ್ಷಕರಾಗಿ ಜಿಲ್ಲೆಗೆ ಬಂದಾಗ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದ ಜನರು ನನಗೆ ಟಿಕೆಟ್ ನೀಡುವಂತೆ ಹೇಳಿದ್ದರು. ಬಿ.ಜಿ ಗೋವಿಂದಪ್ಪ, ಡಿ. ಸುಧಾಕರ್, ಎನ್.ವೈ ಗೋಪಾಲಕೃಷ್ಣ, ಕೆ ಸಿ ವೀರೇಂದ್ರ ಪಪ್ಪಿ ಅವರು ಸಹ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಶಿಫಾರಸು ಮಾಡಿದ್ದರು ಎಂದರು.

ಕಾಂಗ್ರೆಸ್ ಹೈಕಮಾಂಡ್‌ಗೆ ಈಗಲೂ ಅವಕಾಶವಿದೆ. ಹೊರಗಿನವರಿಗೆ ನೀಡಿದ ಟಿಕೆಟ್‌ನ ಮರು ಪರಿಶೀಲನೆಗೆ ಒಳಪಡಿಸಬೇಕು. ಘೋಷಿಸಲಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಚಂದ್ರಪ್ಪ ಅವರ ಹೆಸರೇ ಇರಲಿ, ಆದರೆ ಬಿ.ಫಾರಂ ಮಾತ್ರ ತಮಗೆ ಕೊಡಬೇಕು. ನನಗೆ ಟಿಕೆಟ್ ನೀಡಲಿಲ್ಲ ಅಂದರೆ ನಮ್ಮ ಕಾರ್ಯಕರ್ತರು, ಬೆಂಬಲಿಗರು ಹಾಗೂ ಸಮುದಾಯದವರ ಸಭೆ ಕರೆದು ಮುಂದಿನ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯನ್ನು ಇನ್ನೆಷ್ಟು ವರ್ಷ ಹೊರಗಿವರು ಬಂದು ಆಳಬೇಕು. ಜಿಲ್ಲೆಯ ಯಾವುದೇ ಸಮುದಾಯಕ್ಕೆ ಮಾದಿಗ, ಲಂಬಾಣಿ, ಭೋವಿ, ಕೊರಮ, ಯಾರಿಗೆ ಬೇಕಾದರೂ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಸ್ಥಳೀಯರಿಗೆ ಟಿಕೆಟ್ ಕೊಟ್ಟರೆ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ .ಹೈಕಮಾಂಡ್ ತನ್ನ ನಿಲುವು ಬದಲಾಯಿಸಿ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಮುಖಂಡ ಪ್ರಕಾಶ ಚೌಳೂರು, ಮಂಜುನಾಥ್, ಗ್ರಾಪಂ ಸದಸ್ಯ ಆನಂದ್, ನಗರಸಭೆ ಮಾಜಿ ಆಧ್ಯಕ್ಷ ಹೆಚ್.ಮಂಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು.