ಕನ್ನಡಪ್ರಭ ವಾರ್ತೆ ಬೆಳಗಾವಿಕಬ್ಬಿಗೆ ಸೂಕ್ತ ದರ ನಿಗದಿಪಡಿಸಿ, ಕೂಡಲೇ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬೇಕು. ಕಾರ್ಖಾನೆ ಮಾಲೀಕರು ಪ್ರತಿ ಟನ್‌ಗೆ ₹4,500 ಹಾಗೂ ರಾಜ್ಯ ಸರ್ಕಾರ ₹1,000 ಪ್ರೋತ್ಸಾಹಧನ ನೀಡಬೇಕು ಎಂದು ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮುಂದೆ ಒಕ್ಕೊರಲಿನಿಂದ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಬ್ಬಿಗೆ ಸೂಕ್ತ ದರ ನಿಗದಿಪಡಿಸಿ, ಕೂಡಲೇ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬೇಕು. ಕಾರ್ಖಾನೆ ಮಾಲೀಕರು ಪ್ರತಿ ಟನ್‌ಗೆ ₹4,500 ಹಾಗೂ ರಾಜ್ಯ ಸರ್ಕಾರ ₹1,000 ಪ್ರೋತ್ಸಾಹಧನ ನೀಡಬೇಕು ಎಂದು ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮುಂದೆ ಒಕ್ಕೊರಲಿನಿಂದ ಆಗ್ರಹಿಸಿದರು. ಆದರೆ, ರೈತರ ಈ ಆಗ್ರಹ ಫಲ ನೀಡಿದಂತೆ ಕಾಣಲಿಲ್ಲ. ಒಂದು ರೀತಿಯಲ್ಲಿ ಈ ಸಭೆ ನಿಚ್ಚಳವಾಗಿ ಫಲ ನೀಡಿದಂತೆ ಕಾಣಿಸಲಿಲ್ಲ. ಹೀಗಾಗಿ ರೈತರು ತಮ್ಮ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆಯ ಹಾದಿಯನ್ನೇ ಹಿಡಿಯುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ ಶಿಂಧೆ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ಸುಮಾರು 300 ರೈತರು, ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಈ ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು, ಎಸ್‌ಎಪಿ, ಎಂಆರ್‌ಪಿ, ಎಂಎಸ್‌ಪಿ ಸೇರಿದಂತೆ ಕಬ್ಬಿನ ಬೆಲೆ ನಿಗದಿಯ ವಿವಿಧ ಆಯಾಮಗಳನ್ನು ಪ್ರಸ್ತಾಪಿಸಿದರು. ಸಕ್ಕರೆ ಮಾರಾಟದಿಂದ ಮಾತ್ರವಲ್ಲದೆ ಮೊಲಾಸಿಸ್, ಎಥೆನಾಲ್, ಬಗಾಸ್ ಸೇರಿದಂತೆ ಉಪ ಉತ್ಪನ್ನಗಳಿಂದಲೂ ಕಾರ್ಖಾನೆಗಳಿಗೆ ಆದಾಯ ಬರುತ್ತಿದೆ. ಆದರೆ, ಅದರ ಲಾಭದಲ್ಲಿ ರೈತರಿಗೆ ನ್ಯಾಯಯುತ ಪಾಲು ಸಿಗುತ್ತಿಲ್ಲ. ಕಬ್ಬಿನ ಇಳುವರಿ ಕುಸಿಯುತ್ತಿದೆ. ವಿದ್ಯುತ್ ತಂತಿಗಳಿಂದ ಬೆಳೆ ಹಾನಿಯಾಗುತ್ತಿದೆ. ನೀರಿನ ಸಮಸ್ಯೆಯೂ ಕಾಡುತ್ತಿದೆ. ಹೀಗಿರುವಾಗ ರೈತರನ್ನು ಉಳಿಸುವ ಜವಾಬ್ದಾರಿ ಸರ್ಕಾರ ಮತ್ತು ಕಾರ್ಖಾನೆಗಳ ಮೇಲಿದೆ ಎಂದು ಒತ್ತಾಯಿಸಿದರು.
ಭಾಷಣ ಬೇಡ, ದರ ಘೋಷಿಸಿ:ರೈತ ಮುಖಂಡ ಗಣೇಶ ಇಳಿಗೇರ ಮಾತನಾಡಿ, ರೈತರ ಸಂಕಷ್ಟ ರಾಜ್ಯಕ್ಕಷ್ಟೇ ಅಲ್ಲ, ದೇಶಕ್ಕೂ ಗೊತ್ತಿದೆ. ಹಲವು ಬಾರಿ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದೇವೆ. ಮತ್ತೆ ಮತ್ತೆ ಭಾಷಣ ಮಾಡುವುದರಿಂದ ಪ್ರಯೋಜನವಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಯಾವ ರೀತಿಯ ಒತ್ತಡ ಹಾಕಿದ್ದಿರಿ ಎಂಬುದನ್ನು ತಿಳಿಸಬೇಕು. ಕಾರ್ಖಾನೆಗಳು ₹4500 ಹಾಗೂ ಸರ್ಕಾರ ₹1000 ಪ್ರೋತ್ಸಾಹಧನ ನೀಡುವ ಮೂಲಕ ಒಟ್ಟು ₹5500 ದರ ಘೋಷಿಸಬೇಕು. ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ವಿದ್ಯುತ್ ತಂತಿಗಳಿಂದ ಬೆಂಕಿ ತಗುಲಿ ಕಬ್ಬು ಬೆಳೆ ಹಾನಿಯಾಗಿದೆ. ರೈತರಿಗೆ ಸಿಹಿ ಸುದ್ದಿ ನೀಡಿ, ಕಾರ್ಖಾನೆಗಳನ್ನು ಆರಂಭಿಸಿ ಎಂದು ಆಗ್ರಹಿಸಿದರು. ತಾತ್ಕಾಲಿಕವಾಗಿ ಪ್ರತಿ ಟನ್‌ಗೆ ₹4,000 ನೀಡಿ ಕಾರ್ಖಾನೆಗಳನ್ನು ಆರಂಭಿಸಬೇಕು. ಬಳಿಕ ಉಳಿದ ₹1,500 ನೀಡಲು ಕ್ರಮ ಕೈಗೊಳ್ಳಬೇಕು ಎಂಬ ಸಲಹೆಯೂ ಸಭೆಯಲ್ಲಿ ವ್ಯಕ್ತವಾಯಿತು.
ಕಬ್ಬು ಒಣಗುತ್ತಿದೆ, ಕಾರ್ಖಾನೆ ಶುರು ಮಾಡಿ:ರೈತ ಮುಖಂಡ ಪ್ರವೀಣ ಮಾತನಾಡಿ, ನನ್ನಲ್ಲಿ ಸುಮಾರು ಒಂದು ಸಾವಿರ ಟನ್ ಕಬ್ಬು ಕಟಾವಿಗೆ ಸಿದ್ಧವಿದೆ. ಎರಡು ತಿಂಗಳಿಂದ ಕಟಾವಾಗದೆ ಉಳಿದಿರುವುದರಿಂದ ಇಳುವರಿ ಹಾಗೂ ತೂಕದಲ್ಲಿ ನಷ್ಟವಾಗುತ್ತಿದೆ. ಸಭೆಯನ್ನು ಆದಷ್ಟು ಬೇಗ ಮುಗಿಸಿ, ದರ ನಿಗದಿಪಡಿಸಿ ಕಾರ್ಖಾನೆ ಆರಂಭಿಸಿ ಎಂದು ಮನವಿ ಮಾಡಿದರು. ಹೆಚ್ಚು-ಕಡಿಮೆ ಮಾಡಿ ಒಮ್ಮತದ ನಿರ್ಧಾರಕ್ಕೆ ಬಂದು ಕಾರ್ಖಾನೆ ಆರಂಭಿಸಬೇಕು. ಕಬ್ಬು ಒಣಗಿಹೋಗುತ್ತಿದೆ. ರೈತರ ಬದುಕಿನ ಪ್ರಶ್ನೆಯಾಗಿರುವ ಈ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಕ್ಕರೆ ಮಾತ್ರವಲ್ಲದೆ ಎಥನಾಲ್, ಮೊಲಾಸಿಸ್ ಹಾಗೂ ಬಗಾಸ್‌ನಿಂದ ಕಾರ್ಖಾನೆಗಳಿಗೆ ಬರುವ ಆದಾಯದ ಬಗ್ಗೆಯೂ ರೈತರಿಗೆ ಮಾಹಿತಿ ನೀಡಬೇಕು. ಉಪ ಉತ್ಪನ್ನಗಳ ಲಾಭದಲ್ಲಿ ರೈತರಿಗೆ ನ್ಯಾಯಯುತ ಪಾಲು ಸಿಗಬೇಕು. ರೈತರು ಸಾಕಷ್ಟು ಹೋರಾಟ ನಡೆಸಿದರೂ ಸರ್ಕಾರಗಳು ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜನಾಂದೋಲನವಾಗಿದೆ ಹೋರಾಟ:
ರೈತ ಮುಖಂಡ ಚುನ್ನಪ್ಪ ಪೂಜೇರಿ ಮಾತನಾಡಿ, ಹುಬ್ಬಳ್ಳಿ ಹೋರಾಟದ ನಂತರ ಎಂಎಸ್‌ಪಿ ವಿಚಾರವಾಗಿ ಹೋರಾಟ ಮಾಡುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು ಎಂಬ ಬಗ್ಗೆ ಕೆಲವರಲ್ಲಿ ಗೊಂದಲವಿದೆ. ಎಂಎಸ್‌ಪಿ ನಮಗೆ ಕಾರ್ಖಾನೆಗಳಿಗಿಂತಲೂ ಮುಖ್ಯವಾಗಿದೆ. ಹಣ ಪಡೆದು ಯಾರೂ ಹೋರಾಟ ಮಾಡಿಸುತ್ತಿಲ್ಲ. ಇಂತಹ ಆರೋಪಗಳು ಸರಿಯಲ್ಲ ಎಂದರು.ಕಾರ್ಖಾನೆ ಮಾಲೀಕರು ಪ್ರತಿ ಟನ್‌ಗೆ ₹4,500 ನೀಡಬೇಕು. ಸರ್ಕಾರ ₹1,000 ಪ್ರೋತ್ಸಾಹಧನ ಘೋಷಿಸಬೇಕು. ಕಾರ್ಖಾನೆಗಳಿಗೂ ನಷ್ಟವಾಗಬಾರದು, ರೈತರಿಗೂ ಅನ್ಯಾಯವಾಗಬಾರದು. ಪಂಚ ಗ್ಯಾರಂಟಿ ಯೋಜನೆಗಳ ಮಾದರಿಯಲ್ಲಿ ರೈತರಿಗೂ ಪ್ರೋತ್ಸಾಹಧನ ನೀಡಬೇಕು. ಹಗಲು-ರಾತ್ರಿ ಎನ್ನದೆ 12 ತಿಂಗಳು ರಕ್ತ-ಬೆವರು ಸುರಿಸಿ ಕಬ್ಬು ಬೆಳೆಯುವ ರೈತರ ಬದುಕಿಗೆ ಸರ್ಕಾರ ಆಸರೆಯಾಗಬೇಕು. ಎಲ್ಲ ಕಾರ್ಖಾನೆಗಳ ಮಾಲೀಕರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ದರ ಘೋಷಿಸಬೇಕು. ರೈತರ ಹೋರಾಟ ಈಗ ಜನಾಂದೋಲನವಾಗಿ ರೂಪುಗೊಂಡಿದೆ. ನವೆಂಬರ್ 26ರೊಳಗೆ ಎಂಎಸ್‌ಪಿ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜಕಾರಣ ಮಾಡಬೇಡಿ:ರೈತ ಮುಖಂಡ ಶಶಿಕಾಂತ ಗುರೂಜಿ ಮಾತನಾಡಿ, ರೈತರ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ಎಂಎಸ್‌ಪಿ ವಿಚಾರದಲ್ಲಿ 38 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ನಡೆಸಿದ್ದೇವೆ. ರಾಜ್ಯ ಸರ್ಕಾರದ ಬಳಿ ₹1000 ಪ್ರೋತ್ಸಾಹಧನ ಕೇಳಿದಾಗ ನಿಷೇಧಾಜ್ಞೆ ಜಾರಿಗೊಳಿಸುವ ಅಗತ್ಯವೇನಿತ್ತು? ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಸರಿಯಲ್ಲ. ಮುಖ್ಯಮಂತ್ರಿಗಳು ಬೆಳಗಾವಿಗೆ ಬಂದಾಗಲೂ ದರ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ, ಒಂದು ಪೈಸೆಯನ್ನೂ ಘೋಷಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಖಾನೆಗಳನ್ನು ಕೂಡಲೇ ಆರಂಭಿಸಬೇಕು. ಬುಧವಾರ ಸಭೆ ನಡೆಸಿ ದರ ನಿಗದಿಪಡಿಸಬೇಕು. ರೈತರ ಬೇಡಿಕೆ ಈಡೇರದಿದ್ದರೆ ಜೈಲ್ ಭರೋ ಚಳವಳಿ ನಡೆಸಲಾಗುವುದು. ರೈತರ ಹೋರಾಟಕ್ಕೆ ಲಕ್ಷಾಂತರ ಜನರು ಬೆಂಬಲ ನೀಡಲು ಸಿದ್ಧರಿದ್ದಾರೆ ಎಂದು ಎಚ್ಚರಿಸಿದರು.ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ನಗರ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇದ್ದರು.ಸಭೆ ವಿಫಲವಾಗಲು ಕಾರಣವೇನು?
ರೈತರು ಪ್ರತಿ ಟನ್ ಕಬ್ಬಿಗೆ ₹5,500 ನೀಡಬೇಕೆಂಬ ಪಟ್ಟು ಸಡಿಲಿಸಿಲ್ಲ. ಟನ್ ಕಬ್ಬಿಗೆ ಕಾರ್ಖಾನೆಗಳು ಮಾಲೀಕರು ₹4500 ನೀಡಬೇಕು. ಬಾಕಿ ಉಳಿದ ₹1000 ಹಣವನ್ನು ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡಬೇಕು ಎಂಬ ಪಟ್ಟನ್ನೇ ರೈತರು ಮುಂದುವರಿಸಿದ್ದಾರೆ. ಆದರೆ, ಕಾರ್ಖಾನೆಗಳ ಮಾಲೀಕರು ಟನ್ ಕಬ್ಬಿಗೆ ₹4,500 ನೀಡಲು ಮುಂದಾಗುತ್ತಿಲ್ಲ. ಮಾತ್ರವಲ್ಲ, ರಾಜ್ಯ ಸರ್ಕಾರ ಕೂಡ ಪ್ರಸ್ತುತ ಸನ್ನಿವೇಶದಲ್ಲಿ ₹1000 ಪ್ರೋತ್ಸಾಹಧನ ನೀಡುವುದು ಕೂಡ ಅನುಮಾನ. ಇವೆಲ್ಲದರ ನಡುವೆ ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೇ ಖುದ್ದ ರೈತರ ಹೋರಾಟಕ್ಕೆ ಬಂದಾಗ ₹1000 ಪ್ರೋತ್ಸಾಹಧನ ನೀಡಲು ಅಸಾಧ್ಯ ಎಂಬುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಮಂಗಳವಾರ ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿಯೊಂದಿಗೆ ನಡೆದ ಕಬ್ಬು ಹೋರಾಟಗಾರೊಂದಿಗಿನ ಸಭೆ ಫಲ ನೀಡದೇ ಇರುವುದು ಸ್ಪಷ್ಟವಾಗಿದೆ. ಹೀಗಾಗಿ ರೈತರು ಬಹುತೇಕ ಜೈಲ್ ಭರೋ ಚಳವಳಿಯತ್ತ ಹೆಜ್ಜೆ ಹಾಕುವುದು ಸ್ಪಷ್ಟವಾಗಿ ಗೋಚರಿಸಿದೆ.