ಹಂದಿ ಕಳ್ಳರ ಗ್ಯಾಂಗ್‌ ಹಿಡಿಯಲು ಹೋದ ಪುರಸಭೆ ಸದಸ್ಯ ಸಾವು

| Published : Aug 14 2024, 01:02 AM IST

ಹಂದಿ ಕಳ್ಳರ ಗ್ಯಾಂಗ್‌ ಹಿಡಿಯಲು ಹೋದ ಪುರಸಭೆ ಸದಸ್ಯ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಹಂದಿ ಕಳ್ಳರ ಗ್ಯಾಂಗ್‌ನ ಬೆನ್ನತ್ತಿ ಹಿಡಿಯಲು ಹೋದ ಇಲ್ಲಿನ ಪುರಸಭೆ ಸದಸ್ಯರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಸೋಮವಾರ ಮಧ್ಯರಾತ್ರಿ ಪಟ್ಟಣದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕಾರಟಗಿ

ಹಂದಿ ಕಳ್ಳರ ಗ್ಯಾಂಗ್‌ನ ಬೆನ್ನತ್ತಿ ಹಿಡಿಯಲು ಹೋದ ಇಲ್ಲಿನ ಪುರಸಭೆ ಸದಸ್ಯರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಸೋಮವಾರ ಮಧ್ಯರಾತ್ರಿ ಪಟ್ಟಣದಲ್ಲಿ ನಡೆದಿದೆ.

ಹಂದಿಗಳನ್ನು ವಾಹನದಲ್ಲಿ ಹೇರಿಕೊಂಡು ಹೋಗುತ್ತಿದ್ದ ಕಳ್ಳರ ಗ್ಯಾಂಗ್‌ನ್ನು ಬೆನ್ನತ್ತಿ ಹಿಡಿಯಲು ಹೋದ ಇಲ್ಲಿನ ಪುರಸಭೆ ವಾರ್ಡ್ ೨೧ರ ಕಾಂಗ್ರೆಸ್ ಸದಸ್ಯ ರಾಮಣ್ಣ ಕೊರವರ ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ ಅವರ ಅಂತ್ಯಕ್ರಿಯೆ ನಡೆಯಿತು. ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:

ಪುರಸಭೆ ಹಿಂದುಗಡೆ ಇರುವ ರಸ್ತೆಯಲ್ಲಿ ಕೊರವರ ಸಮುದಾಯದವರು ವಾಸಿಸುತ್ತಾರೆ. ಇವರೆಲ್ಲ ಹಂದಿ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಮಧ್ಯೆ ಸೋಮವಾರ ರಾತ್ರಿ ಹಂದಿಗಳನ್ನು ಕದ್ದುಕೊಂಡು ಹೋಗಲು ಗ್ಯಾಂಗ್‌ವೊಂದು ಬುಲೆರೋ ವಾಹನದಲ್ಲಿ ಬಂದಿಳಿದಿದೆ. ರಾತ್ರಿ ಕಳ್ಳರು ವಾಹನದಲ್ಲಿ ೪೫ ಹಂದಿಗಳನ್ನು ಹೇರಿಕೊಂಡು ಸಾಗುವ ವೇಳೆ ಹಂದಿಗಳ ಚೀರಿದ ಶಬ್ದದಿಂದ ಎಚ್ಚೆತ್ತ ರಾಮಣ್ಣ ಹೊರಗಡೆ ಬಂದಿದ್ದು, ಹಂದಿಗಳನ್ನು ಹೊತ್ತುಕೊಂಡು ಹೋಗುವುದನ್ನು ಕಂಡಿದ್ದಾರೆ. ಕೂಡಲೇ ಅವರನ್ನು ಹಿಡಿಯಲು ಬೆನ್ನು ಹತ್ತಿದ್ದಾರೆ. ಇವರೊಂದಿಗೆ ಇವರ ಮಗ ಮತ್ತು ಇವರ ನೆರೆಯ ಮೂವರೂ ಓಡಿ ಹೋಗಿದ್ದಾರೆ. ಆದರೆ, ಕಳ್ಳರು ರಾಮಣ್ಣ ಕೊರವರಿಗೆ ಹಲ್ಲೆ ಮಾಡಿ ತಮ್ಮ ವಾಹನದಿಂದ ಡಿಕ್ಕಿ ಹೊಡೆದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ರಸ್ತೆ ಮಧ್ಯ ಬಿದ್ದಿದ್ದ ರಾಮಣ್ಣರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ನಂತರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಕರೆದ್ಯೋಯಲಾಯಿತು. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಮೃತ ರಾಮಣ್ಣರ ಪತ್ನಿ ಗಾಳೆಮ್ಮ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿ ಈ ಘಟನೆ ನಡೆದಿದ್ದು, ಮಧ್ಯರಾತ್ರಿ ಸುಮಾರು ೪೫ ಹಂದಿಗಳನ್ನು ಕಳ್ಳರ ಗ್ಯಾಂಗ್ ಕಳ್ಳತನ ಮಾಡಿಕೊಂಡು ವಾಹನದಲ್ಲಿ ಹೋಗಿದ್ದರೂ ಪೊಲೀಸರ ಗಮನಕ್ಕೆ ಬಾರದಿರುವುದು ಅನುಮಾನಕ್ಕೆ ಎಡೆಮಾಡಿದೆ.

ಈ ನಡುವೆ ಕಳೆದ ಎರಡು ತಿಂಗಳ ಹಿಂದೆ ಇದೇ ರೀತಿ ಕಳ್ಳರ ಗ್ಯಾಂಗ್ ಬಂದು ಹಂದಿ ಕಳ್ಳತನಕ್ಕೆ ಪ್ರಯತ್ನ ಪಟ್ಟಿತ್ತು. ಆಗ ಪೊಲೀಸರಿಗೆ ವಿಷಯ ತಿಳಿಸಿ ದೂರು ನೀಡಿದ್ದರೂ ಏನೂ ಕ್ರಮಕೈಗೊಳ್ಳಲಿಲ್ಲ. ಘಟನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ವತಃ ಮೃತ ರಾಮಣ್ಣ ಕೊರವರ ವಿಷಯ ತಿಳಿಸಿದ ಹಿನ್ನೆಲೆ ಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದ್ದರೂ ಸ್ಥಳೀಯ ಪೊಲೀಸರು ನಿರ್ಲಕ್ಷ್ಯ ಮಾಡಿದರು ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.