ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದೆ. ಇವುಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಈ ಯೋಜನೆ ಅನುಷ್ಠಾನಗೊಂಡ ನಂತರ ರಾಜ್ಯದಲ್ಲಿ ಈವರೆಗೆ 500 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿ ದಾಖಲೆ ನಿರ್ಮಿಸಿ, ಯೋಜನೆ ಯಶಸ್ವಿಗೊಳಿಸಿದ್ದಾರೆ. ಈವರೆಗಿನ ಒಟ್ಟು ಟಿಕೆಟ್ ಮೌಲ್ಯ ₹12 ಸಾವಿರ ಕೋಟಿ ದಾಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ರಾಜ್ಯ ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆ 500 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಬೆಳೆಸಿದ ನಿಮಿತ್ತ ಸೋಮವಾರ ಮುಧೋಳ ಬಸ್ ನಿಲ್ದಾಣದಲ್ಲಿದ್ದ ಬಸ್ ಏರಿ ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ವಿತರಿಸಿ ಅವರು ಮಾತನಾಡಿದರು.ಬಾಗಲಕೋಟೆ ಜಿಲ್ಲೆಯಲ್ಲಿ ಶಕ್ತಿ ಯೋಜನೆ ಅನುಷ್ಠಾನ ಅತ್ಯಂತ ಪರಿಣಾಮಕಾರಿಯಾಗಿದೆ. ಈ ಯೋಜನೆಯ ಪ್ರಾರಂಭದ ದಿನದಂದು (2023ರ ಜೂನ್ 11ರಂದು) ಮುಧೋಳ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್ ಟಿಕೆಟ್ ನೀಡಿ ಗುಲಾಬಿ ಹೂ ಮತ್ತು ಸಿಹಿ ಹಂಚುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಜಾರಿಗೆ ಬಂದ ಈ ಮಹತ್ವಾಕಾಂಕ್ಷಿ ಯೋಜನೆ ಬಡ ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ ದೊಡ್ಡಮಟ್ಟದ ನೆರವು ನೀಡಿದೆ ಎಂದು ಸಚಿವರು ಬಣ್ಣಿಸಿದರು.
ಬಾಗಲಕೋಟೆ ವಿಭಾಗದಲ್ಲಿ 14.26 ಕೋಟಿ ಜನ ಪ್ರಯಾಣ:ಈ ಯೋಜನೆ ಜಾರಿಯಾದ ನಂತರ ಬಾಗಲಕೋಟೆ ವಿಭಾಗದ ಬಸ್‌ಗಳಲ್ಲಿ ಪ್ರತಿದಿನ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಶಕ್ತಿ ಯೋಜನೆ ಜಾರಿಗೆ ಬರುವ ಮೊದಲು ದೈನಂದಿನ ಪ್ರಯಾಣಿಕರ ಸಂಖ್ಯೆ 2.71 ಲಕ್ಷ ಇದ್ದರೆ, ಪ್ರಸ್ತುತ ಅದು 3.04 ಲಕ್ಷಕ್ಕೆ ಏರಿಕೆಯಾಗಿದೆ. ಇದು ಬಾಗಲಕೋಟೆ ವಿಭಾಗದ ಹೆಮ್ಮೆಯ ಸಾಧನೆ ಎಂದು ಹೇಳಿದರು.
2023ರ ಜೂನ್ 11ರಿಂದ 2025ರ ಜುಲೈ 13ರವರೆಗೆ ಒಟ್ಟು 764 ದಿನಗಳಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗದಲ್ಲಿ 14 ಕೋಟಿ 26 ಲಕ್ಷ 44 ಸಾವಿರ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಸೌಲಭ್ಯ ಪಡೆದುಕೊಂಡಿದ್ದಾರೆ. ಇದರಿಂದ ಬಾಗಲಕೋಟೆ ವಿಭಾಗಕ್ಕೆ ₹462 ಕೋಟಿ 47 ಲಕ್ಷ 77 ಸಾವಿರ ಸಾರಿಗೆ ಆದಾಯ ಸಂಗ್ರಹವಾಗಿದೆ. ಪ್ರಸ್ತುತ ಬಾಗಲಕೋಟೆ ವಿಭಾಗ 729 ವಾಹನಗಳೊಂದಿಗೆ 693 ವೇಳಾಪಟ್ಟಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ 107 ಹೊಸ ವಾಹನಗಳು ಸೇರ್ಪಡೆಯಾಗಿವೆ. ವಿಭಾಗಗಳಲ್ಲಿ ಬಾಗಲಕೋಟೆ ವಿಭಾಗ ಅತ್ಯಧಿಕ ಸಾರಿಗೆ ಆದಾಯ ಸಂಗ್ರಹಿಸಿ ಸಂಸ್ಥೆಯಲ್ಲೇ ಮುಂಚೂಣಿಯಲ್ಲಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದರು.ಸಂಸ್ಥೆಯ ಆದಾಯಕ್ಕೆ ಶಕ್ತಿ ಯೋಜನೆ ಕೊಡುಗೆ:
ಬಾಗಲಕೋಟೆ ವಿಭಾಗದಲ್ಲಿ ಪ್ರತಿದಿನ ಸರಾಸರಿ 3.03 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, ಇವರಲ್ಲಿ 1.87 ಲಕ್ಷ ಮಹಿಳಾ ಪ್ರಯಾಣಿಕರಿದ್ದಾರೆ. ಇದು ಒಟ್ಟು ಪ್ರಯಾಣಿಕರ ಸಂಖ್ಯೆಯ ಶೇ.61ರಷ್ಟಿದೆ. ವಿಭಾಗ ಪ್ರತಿದಿನ ಸರಾಸರಿ ₹1 ಕೋಟಿ 10 ಲಕ್ಷ 92 ಸಾವಿರ ಆದಾಯ ಗಳಿಸುತ್ತಿದ್ದು, ಇದರಲ್ಲಿ ಶಕ್ತಿ ಯೋಜನೆಯ ಪಾಲು ಶೇ.55ರಷ್ಟಿದೆ, ಶಕ್ತಿ ಯೋಜನೆ ಪ್ರಾರಂಭವಾದ ನಂತರ ಸಾರಿಗೆ ಆದಾಯದಲ್ಲಿ ಪ್ರತಿದಿನ ಸರಾಸರಿ ₹30 ಲಕ್ಷಗೆ ಹೆಚ್ಚಳವಾಗಿದೆ ಎಂದು ಸಚಿವರು ವಿವರಿಸಿದರು.ಬಸ್ ನಿಲ್ದಾಣದಲ್ಲಿದ್ದ ಮಹಿಳಾ ಪ್ರಯಾಣಿಕರನ್ನು ಸಚಿವ ತಿಮ್ಮಾಪೂರ ಅವರು ಖುದ್ದಾಗಿ ಭೇಟಿ ಮಾಡಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನೆ ಕುರಿತು ಅಭಿಪ್ರಾಯ ಸಂಗ್ರಹಿಸಿದರು. ನಂತರ ಬಸ್ ನಿಲ್ದಾಣ ಸುತ್ತ ಸಂಚರಿಸಿ, ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ಯಾರೆಂಟಿ ಯೋಜನೆಯ ತಾಲೂಕು ಅಧ್ಯಕ್ಷ ಮಹಾಂತೇಶ ಮಾಚಕನೂರ ಮಾತನಾಡಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಯುವನಿಧಿ ಯೋಜನೆಗಳ ಪ್ರಯೋಜನೆ ಕುರಿತು ಮಾತನಾಡಿದರು.ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಶೋಕ ಕಿವಡಿ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಉಪಾಧ್ಯಕ್ಷ ಎಂ.ಎಂ.ಬಾಗವಾನ, ಕಾಂಗ್ರೆಸ್ ಮುಖಂಡರಾದ ಮಾಜಿ ಜಿ.ಪಂ. ಅಧ್ಯಕ್ಷ ಎಸ್.ಎಸ್.ಮಲಘಾಣ, ಉದಯ ಕುಮಾರ ಸಾರವಾಡ, ರಾಜು ಬಾಗವಾನ, ನಾರಾಯಣ ಹವಾಲ್ದಾರ, ಸದುಗೌಡ ಪಾಟೀಲ, ಮಾರುತಿ ಮಾನೆ, ಕೆ.ಎಸ್.ಆರ್.ಟಿ.ಸಿ ಬಾಗಲಕೋಟೆ ವಿಭಾಗದ ನಿಯಂತ್ರಣಾಧಿಕಾರಿ ನೀತಿನ ಹೆಗಡೆ, ಮುಧೋಳ ಘಟಕಾಧಿಕಾರಿ ವಿದ್ಯಾ ನಾಯ್ಕ ಸೇರಿದಂತೆ ಪ್ರಯಾಣಿಕರು ಉಪಸ್ಥಿತರಿದ್ದರು.