ಸಾರಾಂಶ
ಚಾಮರಾಜನಗರ ಸಮೀಪದ ಮರಿಯಾಲದ ಶ್ರೀ ಮುರುಘರಾಜೇಂದ್ರ ಸ್ವಾಮಿ ಸಿಬಿಎಸ್‌ಸಿ ಶಾಲೆಯ ೭ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಸಾಹಿತಿ ಡಾ.ಲತಾ ರಾಜಶೇಖರ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮರಿಯಾಲದಲ್ಲಿರುವ ಶ್ರೀ ಮುರುಘರಾಜೇಂದ್ರಸ್ವಾಮಿ ಸಿಬಿಎಸ್‌ಸಿ ಪಬ್ಲಿಕ್ ಶಾಲೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಿದೆ ಎಂದು ಸಾಹಿತಿ ಹಾಗೂ ಕವಿಯಿತ್ರಿ ಡಾ.ಲತಾ ರಾಜಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು. ನಗರ ಸಮೀಪದ ಮರಿಯಾಲದ ಶ್ರೀ ಮುರುಘರಾಜೇಂದ್ರ ಸ್ವಾಮಿ ಸಿಬಿಎಸ್‌ಸಿ ಶಾಲೆಯ ಏಳನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀಗಳು ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಆಂಗ್ಲ ಮಾದ್ಯಮ ಶಾಲೆಯ ಅವಶ್ಯಕತೆ ಅರಿತು ಬಹಳ ಅಚ್ಚುಕಟ್ಟಾಗಿ ಶಾಲೆ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಹಿರಿಯ ರಾಜಕೀಯ ಮುತ್ಸದ್ದಿ ರಾಜ್ಯಸಭಾ ಸದಸ್ಯರಾಗಿದ್ದ ದಿ.ಎಂ.ರಾಜಶೇಖರಮೂರ್ತಿ ಅವರು ಹಾಗೂ ಪೂಜ್ಯ ಹಿರಿಯ ಶ್ರೀಗಳ ಪರಿಶ್ರಮಕ್ಕೆ ತಕ್ಕಂತೆ ಉತ್ತಮ ವಾತಾವರಣದಲ್ಲಿ ಶಾಲೆ ನಿರ್ಮಾಣವಾಗಿದೆ. ಇಂಥ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ನೀವು ಪುಣ್ಯವಂತರು ಎಂದರು. ಶಿಕ್ಷಣ ಜೊತೆಗೆ ಸಂಸ್ಕಾರ, ಶಿಸ್ತು ಹಾಗೂ ಗುರು ಹಿರಿಯರನ್ನು ಗೌರವಿಸುವ, ಒಳ್ಳೆಯ ನಡವಳಿಕೆ ಇದ್ದರೆ ಬದುಕಿನಲ್ಲಿ ಉತ್ತುಂಗಕ್ಕೆ ಏರಲು ಸಾಧ್ಯ. ಬೆಳೆಯುವ ಪೈರು ಮೊಳಕೆಯಲ್ಲಿಯೇ ನೋಡು ಎಂಬಂತೆ ಮರಿಯಾಲ ಸಿಬಿಎಸ್‌ಸಿ ಶಾಲೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಕಲಿಕೆ, ಬರವಣಿಗೆ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸಿ ಬೆಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ಅಧ್ಯಕ್ಷ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ವಿದ್ಯಾಭ್ಯಾಸದ ಮಹತ್ವ ಮತ್ತು ನಮ್ಮ ಸಂಸ್ಕೃತಿ ಪರಂಪರೆ ಕಲಿಸುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿ ರೂಪಿಸಲಾಗುತ್ತಿದೆ. ಮಕ್ಕಳಲ್ಲಿ ಕಲಿಕೆಯ ಜೊತೆಗೆ ವ್ಯವಹಾರಿಕ ಜ್ಞಾನ ಮತ್ತು ಅವರು ಆಸಕ್ತಿ ಹೊಂದಿರುವ ಇತರೇ ಕಲೆಗಳ ಬಗ್ಗೆ ಹೆಚ್ಚಿನ ಗಮನ ನೀಡುವ ಮೂಲಕ ನುರಿತ ಭೋದನಾ ತಂಡವನ್ನು ಶಾಲೆ ಹೊಂದಿದೆ ಎಂದರು. ಸಂಸ್ಥೆಯ ಶೈಕ್ಷಣಿಕ ಅಧಿಕಾರಿ ದೇವರಾಜು ಪಿ.ಚಿಕ್ಕಳ್ಳಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಕೌಶಲ್ಯಧಾರಿತ ಮತ್ತು ಮೌಲ್ಯಧಾರಿತ ಶಿಕ್ಷಣವನ್ನು ನೀಡುವಲ್ಲಿ ಸಂಸ್ಥೆ ವಹಿಸುತ್ತಿರುವ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾಡ್ರಳ್ಳಿ ಪಟ್ಟದ ಮಠಾಧ್ಯಕ್ಷ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಗುತ್ತಿಗೆದಾರ ಕೆ.ನಾಗರಾಜು, ಉದ್ಯಮಿ ಎ.ಸಿ. ಜಗದೀಶ್ ತ್ರಿಶೂಲ್, ಸಂಸ್ಥೆಯ ಆಡಳಿತಧಿಕಾರಿ ಮಲ್ಲಿಕಾರ್ಜುನಪ್ಪ, ಉಪಾಧ್ಯಕ್ಷ ಶ್ರೀ ಕುಮಾರ ಸ್ವಾಮಿ, ಸಂಸ್ಥೆಯ ಕಾರ್ಯದರ್ಶಿ ಬಸವಣ್ಣ, ಪ್ರಾಂಶುಪಾಲ ಎಚ್.ಎಂ.ಗಿರೀಶ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.