ಸಾರಾಂಶ
ಕಾಂಗ್ರೆಸ್ ಪಕ್ಷದ ಬೇಗುದಿ ಬೀದಿಗೆ ಬಿದ್ದಿದೆ. ಒಳಜಗಳ, ಭ್ರಷ್ಟಾಚಾರ ಹಾಗೂ ಅನೇಕ ರೀತಿಯ ಹಗರಣದಿಂದ ಸರ್ಕಾರದ ಕಂಟ್ರೋಲ್ ತಪ್ಪಿದೆ. ಕೆಎಸ್ಸಾರ್ಟಿಸಿ ಎಲ್ಲ ಅಂಗ ಸಂಸ್ಥೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ.
ಹುಬ್ಬಳ್ಳಿ:
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ. ಎಲ್ಲರೂ ಪ್ರತಿಸ್ಪರ್ಧಿಗಳು. ನಾನು ಹಾಗೂ ನಮ್ಮ ಪಕ್ಷ ಯಾರನ್ನೂ ಶತ್ರುಗಳಂತೆ ಭಾವಿಸಿಲ್ಲ. ಡಿ.ಕೆ. ಶಿವಕುಮಾರ ಅವರು ಶತ್ರು ಸಂಹಾರ ಪೂಜೆ ಮಾಡಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗಾದರೆ ಅವರ ಶತ್ರುಗಳ್ಯಾರು? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಾಗಾದರೆ ಅವರ ಶತ್ರುಗಳು ಯಾರೆಂಬುದನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸ್ಪಷ್ಟಪಡಿಸಬೇಕು, ಸಿದ್ದರಾಮಯ್ಯ ಅವರಾ? ಅಥವಾ ಪರಮೇಶ್ವರ ಅವರಾ? ಎಂಬುದನ್ನು ಹೇಳಬೇಕು ಎಂದರು.
ಕಾಂಗ್ರೆಸ್ ಪಕ್ಷದ ಬೇಗುದಿ ಬೀದಿಗೆ ಬಿದ್ದಿದೆ. ಒಳಜಗಳ, ಭ್ರಷ್ಟಾಚಾರ ಹಾಗೂ ಅನೇಕ ರೀತಿಯ ಹಗರಣದಿಂದ ಸರ್ಕಾರದ ಕಂಟ್ರೋಲ್ ತಪ್ಪಿದೆ. ಕೆಎಸ್ಸಾರ್ಟಿಸಿ ಎಲ್ಲ ಅಂಗ ಸಂಸ್ಥೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ ಎಂದರು.ದ್ವೇಷದ ರಾಜಕಾರಣ:
ಸಿ.ಟಿ. ರವಿ ವಿಚಾರದಲ್ಲಿ ಸರ್ಕಾರ ವೈರತ್ವ ಮತ್ತು ದ್ವೇಷದ ರಾಜಕಾರಣ ಮಾಡುತ್ತಿದೆ. ಸಿ.ಟಿ. ರವಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ. ಇದೀಗ ಅವರಿಗೆ ಅವರ ಪುತ್ರನಿಗೆ ಬೆದರಿಕೆ ಹಾಕಲಾಗಿದೆ. ಆದರೂ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಜೋಶಿ ಟೀಕಿಸಿದರು.ರವಿಗೆ ಬೆದರಿಕೆ ಹಾಕಿದ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಇಂತಹ ಗೂಂಡಾ ವರ್ತನೆ ಮುಂದುವರಿಯುತ್ತಲೇ ಇರುತ್ತದೆ ಎಂದರು.