ಹಂಪಿ ವಿವಿಗೆ ಅನುದಾನ ನೀಡಲು ಆಗ್ರಹ

| Published : Jan 12 2025, 01:19 AM IST

ಸಾರಾಂಶ

ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಉತ್ತರ ಕನ್ನಡ ಘಟಕ ಜಿಲ್ಲಾ ಆಡಳಿತದ ಮೂಲಕ ಕಾರವಾರದಲ್ಲಿ ಸರ್ಕಾರವನ್ನು ಆಗ್ರಹಿಸಿದೆ.

ಕಾರವಾರ: ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಘಟಕ ಜಿಲ್ಲಾ ಆಡಳಿತದ ಮೂಲಕ ಸರ್ಕಾರವನ್ನು ಆಗ್ರಹಿಸಿದೆ.

ಭಾಷೆಗಾಗಿ ಇರುವ ಏಕೈಕ ವಿಶ್ವವಿದ್ಯಾಲಯ ಹಂಪಿ ಕನ್ನಡ ವಿಶ್ವವಿದ್ಯಾಲಯ. ಕಳೆದ 5 ವರ್ಷಗಳಿಂದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರೂ ಸರ್ಕಾರ ಅನುದಾನ ಬಿಡುಗಡೆ ಮಾಡದೆ ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿರುವ ಕ್ರಮವನ್ನು ಕರ್ನಾಟಕ ನವನಿರ್ಮಾಣ ಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅನುದಾನ ಕೊರತೆಯಿಂದ ಮುಚ್ಚುವ ಹಂತಕ್ಕೆ ಬಂದು ನಿಂತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅನುದಾನ ಇಲ್ಲದೆ ವಿವಿಯಲ್ಲಿ ಸಂಶೋಧನ ಚುಟುವಟಿಕೆ, ಯಾವುದೇ ಪಠ್ಯ ಚಟುವಟಿಕೆ ನಡೆಯುತ್ತಿಲ್ಲ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಸಂಬಳ ಇಲ್ಲ. ವಿವಿ ಬಳಸಿರುವ ವಿದ್ಯುತ್ ಬಿಲ್ ಕಟ್ಟಲಾಗದ ಸ್ಥಿತಿ ಇದೆ. ಸಣ್ಣ ಸಣ್ಣ ಅಗತ್ಯತೆಗಳನ್ನು ಪೂರೈಸಿಕೊಳ್ಳಲೂ ವಿವಿಗೆ ಹಣಕಾಸಿನ ಕೊರತೆ ಎದುರಾಗಿದೆ. ಸರ್ಕಾರ ಈ ಕೂಡಲೇ ಕನ್ನಡಿಗರ ಸ್ವಾಭಿಮಾನ ಮತ್ತು ಅಭಿಮಾನದ ಪ್ರತೀಕವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯಿಸಿದೆ.

ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕಮ್ಮಾರ್, ಬಸವರಾಜ್ ಪಾಟೀಲ್, ಲಕ್ಷ್ಮಣ ಗಾಡಿ, ತುಕಾರಾಮ, ಗಣಪತಿ ನಾಯಕ, ವಿಷ್ಣು, ಸಂಜು, ಯಲ್ಲಪ್ಪ ಶಿಂದೆ, ಮಂಜುನಾಥ ಇದ್ದರು.