ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ
ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಶಾಲೆಯ ಆವರಣ ಮದ್ಯವ್ಯಸನಿಗಳ ತಾಣವಾದಂತಾಗಿದೆ. ಇಲ್ಲಿಯೇ ಮದ್ಯ ಸೇವಿಸುವ ಕುಡುಕರು ಶಾಲೆಯ ಕೋಣೆಗಳಲ್ಲಿಯೇ ಮದ್ಯದ ಬಾಟಲಿಗಳನ್ನು ಎಸೆದು ಗಲೀಜು ಮಾಡುತ್ತಿದ್ದಾರೆ. ಸೋಮವಾರ ರಾತ್ರಿ ಕೂಡ ಶಾಲಾ ಕೋಣೆಯಲ್ಲಿ ಸಾರಾಯಿ ಬಾಟಲಿ ಎಸೆದು ಹೋಗಿರುವ ಘಟನೆ ನಡೆದಿದೆ.ಪಟ್ಟಣದ ವೀರೇಶ್ವರ ವೃತ್ತದಲ್ಲಿರುವ ಶಾಸಕರ ಮಾದರಿ ಶಾಲೆಯಲ್ಲಿ ಇತ್ತೀಚೆಗೆ ಕುಡುಕರ ಹಾವಳಿ ಹೆಚ್ಚಾಗಿದೆ ಎಂದು ಶಾಲೆಯ ಎಸ್‌ಡಿಎಂಸಿ ಆಡಳಿತ ಮಂಡಳಿ ಆರೋಪಿಸಿದೆ. ಇಲ್ಲಿ ದಿನ ಬೆಳಗ್ಗೆ ನೋಡಿದರೆ ಮದ್ಯದ ಬಾಟಲಿಗಳು ಶಾಲಾವರಣದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಆದರೆ, ಮಂಗಳವಾರ ಬೆಳಗ್ಗೆ ಶಾಲಾ ಕೋಣೆ ಪ್ರಾರಂಭ ಮಾಡಿದರೆ ಅಲ್ಲಿ ಕೂಡ ಬಾಟಲಿ ಬಿಸಾಕಿ ಹೋಗಿದ್ದಾರೆ. ಪ್ರಮುಖ ರಸ್ತೆ ಪಕ್ಕ ಇರುವ ಕಾರಣ ರಾತ್ರಿ ಸಮಯದಲ್ಲಿ ಯಾರು ಬರುತ್ತಾರೆ ಎಂದು ತಿಳಿಯುವುದಿಲ್ಲ. ಈ ಹಿಂದೆ ಕೂಡ ಇಂತಹ ಘಟನೆಗಳು ನಡೆದಿವೆ. ಆದರೆ, ಈ ಬಾರಿ ಮಾತ್ರ ಶಾಲಾ ಕೋಣೆಯಲ್ಲಿ ಬಿಸಾಡಿದ್ದಾರೆ. ಮಕ್ಕಳಿಗೆ ಗಾಜು ಚುಚ್ಚಿ ಗಾಯಗಳಾದರೆ ಇದಕ್ಕೆ ಯಾರು ಜವಾಬ್ದಾರರು? ಮಕ್ಕಳಿಗೆ ಏನಾದರು ಅನಾಹುತವಾದರೆ ನಾವು ಪಾಲಕರಿಗೆ ಏನು ಉತ್ತರ ನೀಡಬೇಕು? ಶಾಲಾವರಣದಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ನೀಡಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ವೀರೇಶ ಅವೂಜಿ ಹಾಗೂ ಸದಸ್ಯರು ಆಗ್ರಹಿಸಿದ್ದಾರೆ.
ಕಾಂಪೌಂಡ್ ನಿರ್ಮಾಣಕ್ಕೆ ಆಗ್ರಹ:ಜನದಟ್ಟಣೆ ಪ್ರದೇಶದ ವೀರೇಶ್ವರ ಮುಖ್ಯ ವೃತ್ತದಲ್ಲಿ ಶಾಲೆಯಿರುವ ಕಾರಣ ವೃತ್ತ ಸುತ್ತಮುತ್ತ ಹಲವಾರು ಅಂಗಡಿಗಳಿವೆ. ನಿತ್ಯ ಜನಗಳಿಂದ ವೃತ್ತ ಕೂಡಿರುತ್ತದೆ. ಶಾಲೆಗೆ ಕಾಂಪೌಂಡ್ ವ್ಯವಸ್ಥೆ ಇಲ್ಲದ ಕಾರಣ ಜನರು ಶಾಲೆಯ ಒಳಗೆ ಬಂದು ಮೂತ್ರ ವಿಸರ್ಜನೆ ಮಾಡುತ್ತಾರೆ. ಶಾಲೆಯಲ್ಲಿ ಮಕ್ಕಳು ಕಲಿಯುತ್ತಾರೆಂಬ ಪರಿಜ್ಞಾನ ಕೂಡ ಅವರಲ್ಲಿ ಇಲ್ಲ. ಕೋಣೆಯ ಸುತ್ತಮುತ್ತ ದುರ್ವಾಸನೆ ಬರುತ್ತದೆ. ಜತೆಗೆ ಅಡುಗೆ ಕೋಣೆಯ ಹಿಂದೆ ಕೂಡ ಮೂತ್ರವಿಸರ್ಜನೆ ಮಾಡುವ ಕಾರಣ ಅಡುಗೆ ಸಿಬ್ಬಂದಿ ಮೂಗು ಮುಚ್ಚಿಕೊಂಡು ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಶಾಲೆಗೆ ಕಾಂಪೌಂಡ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
-----ಕೋಟ್...
ಶಾಲೆ ಆವರಣದಲ್ಲಿ ದಿನನಿತ್ಯ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಸೋಮವಾರ ರಾತ್ರಿ ಪುಂಡರು ಶಾಲೆಯ ಕೋಣೆಯ ಬಾಗಿಲು ಮುರಿದು ಕೊಠಡಿಯಲ್ಲಿ ಕುಳಿತು ಕುಡಿದು ನಂತರ ಬಾಟಲಿಗಳನ್ನು ನೆಲಕ್ಕೆ ಒಡೆದು ಉಳಿದ ಬಾಟಲಿಗಳನ್ನು ಟೇಬಲ್ ಮೇಲೆ ಇಟ್ಟು ಹೋಗಿದ್ದಾರೆ. ಶಾಲೆ ಈಗ ಕುಡುಕರ ತಾಣವಾಗಿದೆ. ರಾತ್ರಿ ಸಮಯದಲ್ಲಿ ಕುಡಕರ ಹಾವಳಿ ಹೆಚ್ಚಾಗಿದೆ. ಇದರಿಂದ ಶಾಲೆಯ ಉತ್ತಮ ವಾತಾವರಣ ಹಾಳಾಗುತ್ತಿದೆ.-ಬಿ.ಎಂ.ರಕ್ಕಸಗಿ, ಮುಖ್ಯಗುರುಗಳು.---------