ಸಾರಾಂಶ
ಶಿಗ್ಗಾಂವಿ: ಕಳೆದ ೨೦ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಮಾತೋಶ್ರೀ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಸಲ್ಲಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಶಿಗ್ಗಾಂವಿ-ಸವಣೂರ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಗಂಗಮ್ಮ ಬೊಮ್ಮಾಯಿ ಅವರ ೯೦ನೇ ಜನ್ಮದಿನದ ಅಂಗವಾಗಿ ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಅವರು, ಬದುಕಿನಲ್ಲಿ ಹಲವಾರು ಸಂಬಂಧಗಳಿವೆ. ಆದರೆ ಈ ಎಲ್ಲ ಸಂಬಂಧಗಳಲ್ಲಿ ಶ್ರೇಷ್ಠವಾದುದು ತಾಯಿ ಸಂಬಂಧ. ಅಲ್ಲದೇ ಭೂಮಿಗೆ ಸಮರ್ಪಣೆ ಮಾಡಿದ ಕೀರ್ತಿ ತಾಯಿಗೆ ದೊರೆಯುತ್ತದೆ. ಪ್ರೀತಿ, ಮಮತೆ, ಆಶೀರ್ವಾದ ಯಾರಿಗೆ ಇರುತ್ತದೆಯೋ ಅವರು ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ. ಹೃದಯ ಅಂತರಾಳದಲ್ಲಿ ಇಟ್ಟುಕೊಳ್ಳುತ್ತಾರೆ. ಮನಸ್ಸು ಶುದ್ಧತೆಯಿಂದ ಇದ್ದಾಗ ಏನು ಮಾಡಿದರೂ ನಿಮಗೆ ಫಲ ಸಿಗುತ್ತದೆ ಎಂದು ಹೇಳಿದರು.೨೧ನೇ ಶತಮಾನ ಜ್ಞಾನದ ಶತಮಾನ. ನಿಮ್ಮ ಬುದ್ಧಿಶಕ್ತಿ, ಕೌಶಲ್ಯದಿಂದ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದರು.ತಾಯಿ-ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೋಸ್ಕರ ಕಾರ್ಯಕ್ರಮ ಮಾಡು ಎಂದು ತಾಯಿ ಹೇಳಿದ್ದರು. ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದೇವೆ. ದೇಶದ ಭವಿಷ್ಯ ಮಹಿಳೆಯರ ಕೈಯಲ್ಲಿದೆ ಎಂದರು.ವಿವಿಧ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ, ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ೨೭೫ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಹೋಗಿ ಆದರ್ಶಮಯ ಜೀವನ ನಿರ್ವಹಣೆ ಮಾಡಿಕೊಂಡು ಉನ್ನತ ಮಟ್ಟಕ್ಕೇರಿ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು. ಶರಣಯ್ಯ ಶಂಭಯ್ಯನವರಮಠ ಉಪನ್ಯಾಸ ನೀಡಿದರು.ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಶಂಕರಗೌಡ್ರ ಪೊಲೀಸ್‌ಪಾಟೀಲ, ದೇವಣ್ಣಾ ಚಾಕಲಬ್ಬಿ, ಗಂಗಾಧರ ಸಾತಣ್ಣವರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಕರೆಪ್ಪ ಕಟ್ಟಿಮನಿ ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿದ್ದರು.
ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.