ಪುಟ್ಟ ಹಳ್ಳಿ ಕುರವಿನಕೊಪ್ಪ ನವಗ್ರಾಮದಲ್ಲಿ ಬೆಟ್ಟದಷ್ಟು ಸಮಸ್ಯೆ

| Published : Mar 10 2025, 01:32 AM IST

ಸಾರಾಂಶ

ರೋಣ ತಾಲೂಕಿನ ನರಗುಂದ ಮತಕ್ಷೇತ್ರ ವ್ಯಾಪ್ತಿಯ ಪುಟ್ಟ ಹಳ್ಳಿ ಕುರವಿನಕೊಪ್ಪ ನವಗ್ರಾಮದಲ್ಲಿನ ನಿವಾಸಿಗಳು ರಸ್ತೆ, ಚರಂಡಿ, ಶೌಚಾಲಯ‌ ಸೇರಿದಂತೆ ಬೆಟ್ಟದಷ್ಟು ಸಮಸ್ಯೆಗಳ ಮಧ್ಯ ಪ್ರಯಾಸದ ಜೀವನ ಸಾಗಿಸುತ್ತಿದ್ದಾರೆ.

ಪಿ.ಎಸ್. ಪಾಟೀಲ

ಕನ್ನಡಪ್ರಭ ವಾರ್ತೆ ರೋಣರೋಣ ತಾಲೂಕಿನ ನರಗುಂದ ಮತಕ್ಷೇತ್ರ ವ್ಯಾಪ್ತಿಯ ಪುಟ್ಟ ಹಳ್ಳಿ ಕುರವಿನಕೊಪ್ಪ ನವಗ್ರಾಮದಲ್ಲಿನ ನಿವಾಸಿಗಳು ರಸ್ತೆ, ಚರಂಡಿ, ಶೌಚಾಲಯ‌ ಸೇರಿದಂತೆ ಬೆಟ್ಟದಷ್ಟು ಸಮಸ್ಯೆಗಳ ಮಧ್ಯ ಪ್ರಯಾಸದ ಜೀವನ ಸಾಗಿಸುತ್ತಿದ್ದಾರೆ.

2007 ಮತ್ತು 2009ರ ಕುಂಭದ್ರೋಣ ಮಹಾ ಮಳೆ ಮತ್ತು ಮಲಪ್ರಭ ನದಿ ಪ್ರವಾಹ 75 ಮನೆಗಳನ್ನು ಹೊಂದಿರುವ ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಹೊಳೆಆಲೂರ, ನೀರಲಗಿ‌ ಮುಖ್ಯ ರಸ್ತೆಗಳು ಸ್ಥಗಿತಗೊಂಡು ಗ್ರಾಮದ ತುಂಬೆಲ್ಲ ನೀರು ಆವರಿಸಿ ಕುರವಿನಕೊಪ್ಪ‌ ನಡುಗಡ್ಡೆಯಂತಾಯಿತು. ಹೊಲಕ್ಕೆ ತೆರಳಿದವರು ಮನೆಗೆ ಬಾರದಂತಾದರು. ನದಿ, ಹಳ್ಳ ದಾಟುವ ವೇಳೆ ರೈತರ ಜಾನುವಾರಗಳು ನೀರು ಪಾಲಾದವು. ಗ್ರಾಮಕ್ಕೆ ನುಗ್ಗಿದ ನೀರಿಗೆ ಹೆದರಿ ಜನರು ಮನೆ, ಗುಡಿ ಮೇಲೆ ಹೋಗಿ ಕುಳಿತುಕೊಂಡರು. ಜಿಲ್ಲಾಡಳಿತ, ತಾಲೂಕು ಆಡಳಿತ, ಪ್ರಕೃತಿ ವಿಕೋಪ ರಕ್ಷಣಾ ಸೇನಾ ಪಡೆ ನೆರವಿನಿಂದ ಬೋಟ್ ಮೂಲಕ ಮತ್ತು ಹೆಲಿಕ್ಯಾಪ್ಟರ್ ಮೂಲಕ ನೂರಾರು ಜನರನ್ನು ರಕ್ಷಿಸಲಾಯಿತು.

ನಿರಾಶ್ರಿತರಿಗೆ ಹೊಳೆಆಲೂರ ಕಲ್ಲೇಶ್ವರ ಶಾಲೆ ಆವರಣದಲ್ಲಿ ಗಂಜಿ ಕೇಂದ್ರ ತೆರೆದು ತಿಂಗಳುಗಟ್ಟಲೆ ಅನ್ನ, ನೀರು, ಬಟ್ಟೆ ಕಲ್ಪಿಸಲಾಯಿತು. ನೆರೆ ಹಾವಳಿಗೆ ತುತ್ತಾದ ತಾಲೂಕಿನ ಗ್ರಾಮಗಳ ಪೈಕಿ ರಾಜ್ಯದ ಅತಿ ಹೆಚ್ಚು ಗಮನ ಸೆಳೆದ ಗ್ರಾಮವಿದು. ಆಗ ಎಚ್ಚೆತ್ತುಕೊಂಡ ಸರ್ಕಾರ ಗ್ರಾಮ ಸ್ಥಳಾಂತರಕ್ಕೆ ಮುಂದಾಯಿತು.

ಆರಂಭದಲ್ಲಿ ಸ್ಥಳಾಂತರಕ್ಕೆ ತೊಡಕು: ಕುರವಿನಕೊಪ್ಪ ಮೂಲ ಗ್ರಾಮವು ಮಲಪ್ರಭಾ ನದಿ ಉತ್ತರ ಭಾಗ (ಬಾದಾಮಿ ಹದ್ದಿಗೆ ಹೊಂದಿಕೊಂಡು)ಕ್ಕಿದೆ. ರೋಣ ತಾಲೂಕಿನ ಉಳಿದೆಲ್ಲ ಗ್ರಾಮಗಳು ಮಲಪ್ರಭಾ ನದಿ ಈಚೆಗೆ ದಕ್ಷಿಣ ಭಾಗಕ್ಕಿವೆ. ಆದ್ದರಿಂದ ಕುರವಿನಕೊಪ್ಪ ಗ್ರಾಮಸ್ಥರು, ಈ ಗ್ರಾಮವನ್ನು ಬಾದಾಮಿ ತಾಲೂಕಿನ ತಮಿನಾಳ ಅಥವಾ ನೀರಲಗಿ ಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು. ಆಡಳಿತಾತ್ಮಕ ತೊಂದರೆ, ರಾಜಕೀಯ ಪ್ರಭಾವದಿಂದ ಗ್ರಾಮಸ್ಥರ ಬೇಡಿಕೆ ಈಡೇರಲಿಲ್ಲ. ಕನಿಷ್ಠ ಹೊಳೆಆಲೂರ ನೀರಾವರಿ ಕಾಲನಿ ಪಕ್ಕದಲ್ಲಾದರೂ ಸ್ಥಳಾಂತರಿಸುವಂತೆ ಬೇಡಿಕೊಂಡರು. ಆಗ ಇಲ್ಲಿನ ರೈತರು ಜಮೀನು ನೀಡಲು ನಿರಾಕರಿಸಿದರು. ಇದರಿಂದ ಸ್ಥಳಾಂತರಕ್ಕೆ ತೊಡಕು ಉಂಟಾಯಿತು. ಬಳಿಕ ಅನಿವಾರ್ಯವಾಗಿ ಜಿಲ್ಲಾಡಳಿತ ಮೂಲ ಗ್ರಾಮದಿಂದ 8 ಕಿಮೀ ದೂರ ಹಾಗೂ ಹೊಳೆಆಲೂರಿನಿಂದ 4 ಕಿಮೀ ದೂರದಲ್ಲಿ ರೋಣ ರಸ್ತೆಯಲ್ಲಿ ಕುರವಿನಕೊಪ್ಪ ಗ್ರಾಮ ಸ್ಥಳಾಂತರಿಸಲಾಯಿತು.

121 ಮನೆ ನಿರ್ಮಾಣ: ಪ್ರತಿ ಎಕರೆಗೆ ₹ 2.5. ಲಕ್ಷದಂತೆ ಒಟ್ಟು18 ಎಕರೆ ಪ್ರದೇಶವನ್ನು ಸರ್ಕಾರ ಭೂಸ್ವಾಧೀನ ಮಾಡಿಕೊಂಡಿತು. 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಗ್ರಾಮ ಸ್ಥಳಾಂತರ ಮತ್ತು ಆಸರೆ ಮನೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಗದಗ ನಿರ್ಮಿತಿ ಕೇಂದ್ರ 121 ಮನೆಗಳನ್ನು ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರಿಸಿತು. 2011ರಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹಕ್ಕುಪತ್ರ ಹಾಗೂ ಮನೆಗಳ ಕೀ ಹಸ್ತಾಂತರಿಸಿದರು.

ಹಕ್ಕುಪತ್ರ ನೊಂದಣಿಯಾಗಿಲ್ಲ: ಇಲ್ಲಿ ನಿರ್ಮಾಣಗೊಂಡ 121 ಮನೆಗಳ ಪೈಕಿ ಈಗಾಗಲೇ 75 ಫಲಾನುಭವಿಗಳನ್ನು ಆಯ್ಕೆ‌ ಮಾಡಲಾಗಿದ್ದು, ಇದರಲ್ಲಿ 60 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದು, ಇನ್ನು 15 ಕುಟುಂಬಕ್ಕೆ ಹಕ್ಕುಪತ್ರ ವಿತರಣೆ ಬಾಕಿಯಿದೆ. ಮನೆಗಳ ಹಕ್ಕುಪತ್ರದನ್ವಯ ಸಂತ್ರಸ್ತರ ಮನೆಗಳನ್ನು ಗುರುತಿಸಲಾಗಿದೆ. ಆದರೆ, ಈ ವರೆಗೂ ಹಕ್ಕುಪತ್ರ ಗ್ರಾಪಂನಲ್ಲಿ ನೋಂದಣಿಯಾಗಿಲ್ಲ. ಇದು ನನೆಗುದಿಗೆ ಬಿದ್ದಿರುವುದು ಗ್ರಾಮಸ್ಥರಲ್ಲಿ ಗೊಂದಲ, ಆತಂಕ ಸೃಷ್ಟಿಸಿದೆ.

ಗ್ರಾಮ ಸ್ಥಳಾಂತರಗೊಂಡ 13 ವರ್ಷ ಗತಿಸುತ್ತಾ ಬಂದರೂ ಈ ವರೆಗೂ ನವಗ್ರಾಮದಲ್ಲಿ ಹಂಚಿಕೆಯಾದ 75 ಕುಟುಂಬಗಳ ಪೈಕಿ ಕೇವಲ 5 ಕುಟುಂಬಗಳ ಮಾತ್ರ ವಾಸವಾಗಿವೆ ಎಂದು ಗ್ರಾಪಂ ಮತ್ತು ತಾಲೂಕು ಆಡಳಿತ ದಾಖಲೆಯಲ್ಲಿದೆ. ವಾಸ್ತವವಾಗಿ ನೋಡಿದರೆ ಇಲ್ಲಿ‌ 60ಕ್ಕೂ ಹೆಚ್ಚು ಮನೆಗಳಲ್ಲಿ ಜನ ವಾಸವಾಗಿದ್ದಾರೆ. ಇವರಲ್ಲಿ ಕೇವಲ 5 ಕುಟುಂಬಗಳು ಹಕ್ಕುಪತ್ರ ನೋಂದಣಿ‌ ಮಾಡಿಸಿದೆ. ಹೀಗಾಗಿ ಇಲಾಖೆ ದಾಖಲೆಯಲ್ಲಿ 5 ಮನೆಯಲ್ಲಿ ಮಾತ್ರ ವಾಸ ಎಂದು ತೋರಿಸುತ್ತಿದೆ. ನವಗ್ರಾಮದಲ್ಲಿ ಶೇ. 60ರಷ್ಟು ಕುಟುಂಬಗಳು ವಾಸವಾಗಿದ್ದ ಮಾಹಿತಿ ಗ್ರಾಪಂಗೆ ಇಲ್ಲವೆ? ಜನವಸತಿವಿರಳ ಮುಂದಿಟ್ಟುಕೊಂಡೇ ಮೂಲಭೂತ ಸೌಲಭ್ಯ ಕಲ್ಪಿಸಲು ಗ್ರಾಪಂ ಮುಂದಾಗುತ್ತಿಲ್ಲವೆ? ಎಂಬ ಪ್ರಶ್ನೆ ನವಗ್ರಾಮ ನಿವಾಸಿಗಳನ್ನು ಕಾಡುತ್ತಿದೆ.

ಸಮಸ್ಯೆ ಆಗರ: 18 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ನವಗ್ರಾಮದಲ್ಲಿ ಅರ್ಧ ಗ್ರಾಮಕ್ಕೆ ಮಾತ್ರ ಚರಂಡಿ ನಿರ್ಮಿಸಲಾಗಿದೆ. 13 ವರ್ಷಗಳ ಹಿಂದೆ ನಿರ್ಮಿಸಿದ ಚರಂಡಿಗಳು ಈಗ ಕಿತ್ತು ಹೋಗಿವೆ. ವರ್ಷದ ಹಿಂದೆ ನಿರ್ಮಿಸಿದ ಸಿ.ಸಿ. ರಸ್ತೆ ಬಿರುಕು ಬಿಟ್ಟು ಸಂಚಾರಕ್ಕೆ ಬಾರದಂತಾಗಿವೆ. ಆಸ್ಪತ್ರೆಗಳಿಲ್ಲ, ದೇವಸ್ಥಾನಗಳಿಲ್ಲ. ಆಟದ ಮೈದಾನವಿಲ್ಲ. ಜಲಜೀವನ ಮಷಿನ್‌ ನಳ ಇನ್ನೂ ಶುರುವಾಗಿಲ್ಲ. ಗ್ರಾಪಂನಿಂದ 2 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಚರಂಡಿ ಇಲ್ಲದ್ದರಿಂದ ಮಳೆಗಾಲದಲ್ಲಿ ಮಳೆ ಮತ್ತು ಗಲೀಜು ನೀರು ನೀರು ಮನೆಯೊಳಗೆ ನುಗ್ಗುತ್ತದೆ. ಹಾವು, ಚೇಳು ಕಾಟ ವಿಪರೀತವಾಗಿದೆ. ಮನೆಗೊಂದು ಶೌಚಾಲಯವಿದೆ, ಆದರೆ ಉಪಯೋಗಕ್ಕೆ ಬರುತ್ತಿಲ್ಲ. ಸುತ್ತಲೂ ಹೊಲಗಳಿರುವುದರಿಂದ ಬಯಲು ಬಹಿರ್ದೆಸೆಗೆ ಎಲ್ಲಿ ಹೋಗಬೇಕು ಎಂಬ ಚಿಂತೆ ಮಹಿಳೆಯರನ್ನು ಕಾಡುತ್ತಿದೆ. ಮಹಿಳಾ‌ ಸಾರ್ವಜನಿಕ ಶೌಚಾಲಯ ನಿರ್ಮಿಸುವಲ್ಲಿ ಗ್ರಾಪಂ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಗ್ರಾಪಂ, ತಾಪಂ, ತಾಲೂಕು ಆಡಳಿತ ಗಮನ ಹರಿಸಿ ಮೂಲ ಸೌಲಭ್ಯ ಕಲ್ಪಿಸಿ, ಜನರು ನೆಮ್ಮದಿಯಿಂದ ಬದುಕಲು ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಬೇಕು ಎಂದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ‌.ಗಟಾರ ಇಲ್ಲದ್ದರಿಂದ ಗಲೀಜು ನೀರು ಹರಿದು ಹೋಗದೆ ಎಲ್ಲೆಂದರಲ್ಲಿ ನಿಂತು ಗಬ್ಬವಾಸನೆ, ಸೊಳ್ಳೆ ಕಾಟವಿದೆ. ಬೀದಿದೀಪಗಳು ಸರಿಯಾಗಿ ಹತ್ತುವುದಿಲ್ಲ. ಅಲ್ಲಲ್ಲಿ ಜಾಲಿಕಂಟಿ ಬೆಳೆದಿದೆ ಕುರವಿನಕೊಪ್ಪ ನವಗ್ರಾಮ ನಿವಾಸಿ ಮಾಬೂಬಿ ನದಾಫ ಹೇಳುತ್ತಾರೆ.

ಈಗಾಗಲೇ ಕೆಲವು ರಸ್ತೆಗಳಿಗೆ ಸಿಮೆಂಟ್‌ ಕಾಂಕ್ರೀಟ್‌ ಹಾಕಲಾಗಿದೆ. ಉಳಿದ ರಸ್ತೆಗಳನ್ನು ಶೀಘ್ರದಲ್ಲಿ ಅಭಿವೃದ್ಧಿಪಡಿಸಲಾಗುವುದು. ಚರಂಡಿ ನಿರ್ಮಿಸಲಾಗುವುದು. ಜಾಲಿಕಂಟಿ ತೆರವು ಮಾಡಲಾಗುವುದು. ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಅಮರಗೋಳ ನಿವಾಸಿ ಶಿವಕುಮಾರ ಡೊಳ್ಳಿನ ಹೇಳಿದರು.