ಸಾರಾಂಶ
ಗೋಕುಲ್ ರಸ್ತೆಯಿಂದ ಧಾರವಾಡ ಕಡೆಗೆ ಹೊರಟಿದ್ದ ಸಂದರ್ಭದಲ್ಲಿ ಕಾರಿನ ಹಿಂಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತು ಮಹೇಶ ಕಾರಿನಿಂದ ಇಳಿದಿದ್ದಾರೆ. ಯಾವುದೇ ರೀತಿಯ ಪ್ರಾಣ ಹಾನಿ ಉಂಟಾಗಿಲ್ಲ.
ಹುಬ್ಬಳ್ಳಿ: ಇಲ್ಲಿಯ ತಾರಿಹಾಳ ಬ್ರಿಡ್ಜ್ ಬಳಿಯ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ತಾಂತ್ರಿಕ ದೋಷದಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕಲಬುರಗಿಯ ಅಫ್ಜಲಪುರದ ಮಹೇಶ ಗೋಳೆ ಎಂಬವರಿಗೆ ಸೇರಿದ ಕಾರು ಇದಾಗಿದೆ. ಗೋಕುಲ್ ರಸ್ತೆಯಿಂದ ಧಾರವಾಡ ಕಡೆಗೆ ಹೊರಟಿದ್ದ ಸಂದರ್ಭದಲ್ಲಿ ಕಾರಿನ ಹಿಂಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತು ಮಹೇಶ ಕಾರಿನಿಂದ ಇಳಿದಿದ್ದಾರೆ. ಯಾವುದೇ ರೀತಿಯ ಪ್ರಾಣ ಹಾನಿ ಉಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಕಾರಿನಿಂದ ಇಳಿದು ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಬೆಂಕಿ ಕಾರನ್ನು ಆವರಿಸಿ ಇಡೀ ಕಾರು ಸುಟ್ಟು ಕರಕಲಾಗಿದೆ. ಮಳೆ ಸುರಿಯತ್ತಿರುವಾಗಲೇ ಕಾರು ಸುಡುತ್ತಿರುವ ವಿಡಿಯೋವನ್ನು ಸ್ಥಳೀಯರು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಕಿ ಪ್ರಮಾಣ ಏಕಾಏಕಿ ಹೆಚ್ಚುತ್ತಾ ಹಂತ ಹಂತವಾಗಿ ಇಡೀ ಕಾರನ್ನು ಆವರಿಸಿ ಕಾರಿನ ನಾಲ್ಕು ಟೈರ್, ಏರ್ ಬ್ಯಾಗ್ ಸಿಡಿಯುತ್ತಿರುವ ಮತ್ತು ಕಾರಿನ ಎಲ್ಲ ಭಾಗಗಳು ಸುಟ್ಟು ಹೋಗುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿ ಸೆರೆಯಾಗಿವೆ.ನಂತರ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಸ್ಥಳಕ್ಕೆ ಗೋಕುಲ್ ರೋಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.