ಕನ್ನಡದಲ್ಲೇ ವ್ಯವಹಾರ ನಡೆಸಿ ಆಡಳಿತದಲ್ಲಿ ಕನ್ನಡ ಪ್ರಜ್ಞೆ ಮೆರೆದ ಅ.ನಿ.ದೇವರಾಜು

| Published : Nov 22 2025, 02:15 AM IST

ಕನ್ನಡದಲ್ಲೇ ವ್ಯವಹಾರ ನಡೆಸಿ ಆಡಳಿತದಲ್ಲಿ ಕನ್ನಡ ಪ್ರಜ್ಞೆ ಮೆರೆದ ಅ.ನಿ.ದೇವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಎಲೆಮರೆ ಕಾಯಿಯಂತೆ ಆಡಳಿತದಲ್ಲಿ ಕನ್ನಡ ಕಟ್ಟುತ್ತಿರುವ ಅ.ನಿ.ದೇವರಾಜು ಅಪ್ಪಟ್ಟ ಗ್ರಾಮೀಣ ಪ್ರತಿಭೆ. ಓದಿರುವುದು ಕೇವಲ ಪಿಯುಸಿ. ತಾಲೂಕಿನ ಅಂಚೆ ಮುದ್ದನಹಳ್ಳಿಯ ಸಾಮಾನ್ಯ ರೈತನ ಮಗನಾದ ಅ.ನಿ.ದೇವರಾಜು ಕಳೆದ 35 ವರ್ಷಗಳ ಹಿಂದೆ ಹೊಟ್ಟೆಪಾಡಿಗೆ ಜಾನುವಾರು ಪರೀಕ್ಷಕನಾಗಿ ಪಶುಪಾಲನಾ ಇಲಾಖೆ ಕರ್ತವ್ಯಕ್ಕೆ ಸೇರಿದರು.

ಎಂ.ಕೆ.ಹರಿಚರಣ್ ತಿಲಕ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜ್ಯ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿದ್ದರೂ ನೌಕರ ವರ್ಗದ ನಿರ್ಲಕ್ಷ್ಯದಿಂದ ಕನ್ನಡ ಆಡಳಿತ ಭಾಷೆಯಾಗಿ ಇದುವರೆಗೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಆದರೆ, ತಾಲೂಕಿನ ಶೀಳನೆರೆ ಗ್ರಾಮದ ಪಶು ಸಂಗೋಪನಾ ಇಲಾಖೆ ಜಾನುವಾರು ಅಧಿಕಾರಿ ಅ.ನಿ.ದೇವರಾಜು ಅವರು ಕನ್ನಡದಲ್ಲಿಯೇ ಇಲಾಖೆ ವ್ಯವಹಾರ ನಡೆಸುತ್ತಾ ‘ಕನ್ನಡಪ್ರಜ್ಞೆ’ ಮೆರೆದು ಆಡಳಿತಕ್ಕೆ ಮಾದರಿಯಾಗಿದ್ದಾರೆ.

ಜಾನುವಾರ ಅಧಿಕಾರಿ ದೇವರಾಜು ಅವರು ತಮ್ಮ ಅಡಿಯಿಂದ ಮುಡಿಯವರೆಗೂ ಕನ್ನಡವನ್ನು ಉಸಿರಾಗಿಸಿಕೊಂಡಿದ್ದಾರೆ. ಶೀಳನೆರೆ ಗ್ರಾಮದ ಪಶುಪಾಲನಾ ಇಲಾಖೆ ಕಚೇರಿಯಲ್ಲಿನ ಎಲ್ಲ ಕಡತಗಳನ್ನು ಕನ್ನಡಮಯವಾಗಿಸಿಕೊಂಡಿದ್ದಾರೆ.

ಯಾವುದೇ ಒಂದು ಕಡತಗಳಲ್ಲಿಯೂ ನಮಗೆ ಇಂಗ್ಲಿಷ್ ಸೇರಿದಂತೆ ಅನ್ಯ ಭಾಷೆ ಕಡತಗಳು ದೊರಕುವುದಿಲ್ಲ. ಆದರೆ ಇವರು ಬ್ಯಾಂಕಿಂಗ್ ವ್ಯವಹಾರದ ಚೆಕ್ ಬುಕ್, ಕ್ಯಾಷ್ ಬುಕ್, ಬಿಲ್ ಬುಕ್ ಸೇರಿದಂತೆ ರಾಸುಗಳ ಅಂಕಿ- ಸಂಖ್ಯೆ ದಾಖಲೆಗಳು ಎಲ್ಲವನ್ನು ಕನ್ನಡದಲ್ಲಿಯೇ ಮಾಡುತ್ತಿದ್ದಾರೆ.

ಕಡತಗಳ ದಾಖಲೆಯ ಅಂಕಿ- ಸಂಖ್ಯೆಯಲ್ಲೂ ದೇವರಾಜು ಕನ್ನಡತನವನ್ನು ದಾಖಲಿಸಿದ್ದಾರೆ. ಒಂದು, ಎರಡು, ಮೂರು ಮುಂತಾದ ಎಲ್ಲಾ ಅಂಕಿ- ಸಂಖ್ಯೆಗಳನ್ನೂ ಕನ್ನಡ ಅಂಕಿ ಮೂಲಕ ಬರೆದು ಮೇಲಾಧಿಕಾರಿಗಳಿಗೆ ವರದಿ ಮಂಡಿಸುತ್ತಿದ್ದಾರೆ. ಬ್ಯಾಂಕ್ ಚೆಕ್ ಪುಸ್ತಕದಲ್ಲಿಯೂ ಕನ್ನಡ ಭಾಷೆ ಜೊತೆಗೆ ಕನ್ನಡ- ಅಂಕಿಗಳನ್ನು ಬರೆಯುತ್ತಿದ್ದಾರೆ.

ಕನ್ನಡ ಅಂಕಿ ಬಳಕೆ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಅಪಸ್ವರ ಎತ್ತಿದ್ದೂ ಉಂಟು. ಆದರೆ, ಇದಕ್ಕೆ ಜಗ್ಗದ ಅ.ನಿ.ದೇವರಾಜು ಬ್ಯಾಂಕ್ ಅಧಿಕಾರಿಗಳಿಗೂ ಬೆವರಿಳಿಸಿ ಕನ್ನಡದಲ್ಲಿಯೇ ಬ್ಯಾಂಕಿಂಗ್ ವ್ಯವಹಾರ ಮಾಡಿ ಕನ್ನಡ ಆಡಳಿತಕ್ಕೆ ಮಾದರಿಯಾಗಿದ್ದಾರೆ.

ಎಲೆಮರೆ ಕಾಯಿಯಂತೆ ಆಡಳಿತದಲ್ಲಿ ಕನ್ನಡ ಕಟ್ಟುತ್ತಿರುವ ಅ.ನಿ.ದೇವರಾಜು ಅಪ್ಪಟ್ಟ ಗ್ರಾಮೀಣ ಪ್ರತಿಭೆ. ಓದಿರುವುದು ಕೇವಲ ಪಿಯುಸಿ. ತಾಲೂಕಿನ ಅಂಚೆ ಮುದ್ದನಹಳ್ಳಿಯ ಸಾಮಾನ್ಯ ರೈತನ ಮಗನಾದ ಅ.ನಿ.ದೇವರಾಜು ಕಳೆದ 35 ವರ್ಷಗಳ ಹಿಂದೆ ಹೊಟ್ಟೆಪಾಡಿಗೆ ಜಾನುವಾರು ಪರೀಕ್ಷಕನಾಗಿ ಪಶುಪಾಲನಾ ಇಲಾಖೆ ಕರ್ತವ್ಯಕ್ಕೆ ಸೇರಿದರು.

ಇದಕ್ಕೂ ಮೊದಲು ಪಾಂಡವಪುರ ತಾಲೂಕಿನ ಚಿನಕುರುಳಿಯಿಂದ ವೃತ್ತಿ ಜೀವನ ಆರಂಭಿಸಿದ ದೇವರಾಜು ಆನಂತರ ಕೆ.ಆರ್.ಪೇಟೆ, ಹರಳಹಳ್ಳಿ ಮುಂತಾದ ಪಶುಪಾಲನಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕಳೆದ 14 ವರ್ಷಗಳಿಂದ ಶೀಳನೆರೆ ಪಶುಪಾಲನಾ ಕೇಂದ್ರದಲ್ಲಿ ಜಾನುವಾರು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಕನ್ನಡ ಕೈಂಕರ್ಯ ಕಾರ್ಯವನ್ನು ಗುರುತಿಸಿ 2011ರಲ್ಲಿ ನಡೆದ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸಿದೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಅಪ್ಪಟ ಕನ್ನಡ ಆಡಳಿತಗಾರ ಸಿಬ್ಬಂದಿಯನ್ನು ಇದುವರೆಗೂ ಗುರುತಿಸಿಲ್ಲ ಎಂಬುದು ಬೇಸರದ ಸಂಗತಿ.

ರಾಜ್ಯ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿ ಹಲವು ವರ್ಷಗಳೇ ಕಳೆದಿದ್ದರೂ ಅಧಿಕಾರಿಗಳು, ನೌಕರರ ವರ್ಗ ಮಾತ್ರ ಇದನ್ನು ಪಾಲಿಸುತ್ತಿಲ್ಲ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ರಾಜ್ಯದ ಎಲ್ಲಾ ಅಧಿಕಾರಿಗಳು ಮತ್ತು ನೌಕರರಿಗೆ ಮಾದರಿ ಎನ್ನುವಂತೆ ಅ.ನಿ.ದೇವರಾಜು ಅವರು ಕನ್ನಡದಲ್ಲಿಯೇ ಇಲಾಖೆ ವ್ಯವಹಾರ ನಡೆಸುತ್ತಾ ಕನ್ನಡಾಭಿಮಾನವನ್ನು ಮೆರೆದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.