ಕನ್ನಡ ಸಾಹಿತ್ಯಕ್ಕೆ ಅನಕೃ ಕೊಡುಗೆ ಅಪಾರವಾದುದು: ಆರ್.ಕೆ.ಪದ್ಮನಾಭ ಅಭಿಮಾನಿ ಬಳಗದ ಪ್ರವೀಣ್

| Published : Jul 18 2024, 01:30 AM IST

ಕನ್ನಡ ಸಾಹಿತ್ಯಕ್ಕೆ ಅನಕೃ ಕೊಡುಗೆ ಅಪಾರವಾದುದು: ಆರ್.ಕೆ.ಪದ್ಮನಾಭ ಅಭಿಮಾನಿ ಬಳಗದ ಪ್ರವೀಣ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡದ ಸಾಹಿತ್ಯ ಸಾರ್ವಭೌಮ ಡಾ. ಅನಕೃ ಒಂದು ನೆನಪು ಅನಕೃ ಪ್ರಶಸ್ತಿ ಪ್ರದಾನದ ದಶಮಾನೋತ್ಸವ ಸಮಾರಂಭವನ್ನು ಜು. 21ರಂದು ಬೆಳಿಗ್ಗೆ 11ಕ್ಕೆ ಶಿಕ್ಷಕರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಆರ್. ಕೆ. ಪದ್ಮನಾಭ ಅಭಿಮಾನಿ ಬಳಗದ ಪ್ರವೀಣ್ ತಿಳಿಸಿದರು. ಅರಕಲಗೂಡು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

21ಕ್ಕೆ ಅನಕೃ ಪ್ರಶಸ್ತಿ ಪ್ರದಾನದ ದಶಮಾನೋತ್ಸವ

ಕನ್ನಡಪ್ರಭ ವಾರ್ತೆ ಅರಕಲಗೂಡು

ಗಾನಕಲಾಭೂಷಣ ವಿದ್ವಾನ್ ಡಾ. ಆರ್. ಕೆ. ಪದ್ಮನಾಭ ಅಭಿಮಾನಿ ಬಳಗ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಕನ್ನಡದ ಸಾಹಿತ್ಯ ಸಾರ್ವಭೌಮ ಡಾ. ಅನಕೃ ಒಂದು ನೆನಪು ಅನಕೃ ಪ್ರಶಸ್ತಿ ಪ್ರದಾನದ ದಶಮಾನೋತ್ಸವ ಸಮಾರಂಭವನ್ನು ಜು. 21ರಂದು ಬೆಳಿಗ್ಗೆ 11ಕ್ಕೆ ಶಿಕ್ಷಕರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಆರ್. ಕೆ. ಪದ್ಮನಾಭ ಅಭಿಮಾನಿ ಬಳಗದ ಪ್ರವೀಣ್ ತಿಳಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅರಕಲಗೂಡು ನರಸಿಂಗರಾವ್ ಕೃಷ್ಣರಾಯರೆಂಬ ಅ.ನ.ಕೃ ರವರ ವ್ಯಕ್ತಿತ್ವ ಸಾಧನೆಗಳಿಗೆ ಅನೇಕ ಮುಖಗಳಿರುವಂತೆ ನನ್ನಂತವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ ಎಂದು ಕನ್ನಡ ನಾಡಿನ ಸರ್ವಾಂಗೀಣ ಅಭಿವೃದ್ದಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದರು.

ಕನ್ನಡದ ಜಾಗೃತಿ ಮೂಡಿಸುತ್ತಾ ನಾಡಿನಾದ್ಯಂತ ಕನ್ನಡ ಸಂಸ್ಕೃತಿಯನ್ನು ಕಟ್ಟುವಲ್ಲಿಯೂ ಬಹುಮುಖಿಗಳಾಗಿ ಶ್ರಮಿಸಿದ್ದಾರೆ. ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪ, ರಂಗಭೂಮಿ, ಸಿನಿಮಾ, ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಚಳುವಳಿಯ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸಂಘಟಕರಾಗಿ, ಪ್ರಗತಿಶೀಲ ಸಾಹಿತ್ಯ ಲೋಕದ ಮಿನುಗುತಾರೆಯಾಗಿ ಸರ್ವ ಶ್ರೇಷ್ಠವಾಗಿರುವ 308 ಕೃತಿಗಳನ್ನು ನೀಡಿರುವ ಅ.ನ.ಕೃ ಸಂಸ್ಮರಣೆಗಾಗಿ ಅವರ ಜನ್ಮಸ್ಥಳವಾದ ಅರಕಲಗೂಡಿನಲ್ಲಿ ಅನಕೃ ಒಂದು ನೆನಪು ಸಮಾರಂಭದಲ್ಲಿ ಅನಕೃ ಪ್ರಶಸ್ತಿಯನ್ನು ಆದರಣಿಯ ಶಾ. ಮಂ. ಕೃಷ್ಣರಾಯರಿಗೆ ನೀಡಲಾಗುವುದು ಎಂದು ಹೇಳಿದರು.

ಜು. 21ರಂದು ಬೆಳಿಗ್ಗೆ 10.30ಕ್ಕೆ ಅನಕೃ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಶಾ. ಮಂ. ಕೃಷ್ಣರಾಯರನ್ನು ಕೋಟೆ ಗಣಪತಿ ಕೊತ್ತಲು ಅವರಣದಿಂದ ಅನಕೃ ವೃತ್ತ ಹಾಗೂ ಸಮಾರಂಭ ನಡೆಯುವ ಶಿಕ್ಷಕರ ಭವನದವರೆಗೆ ಮೆರವಣಿಗೆ ಮೂಲಕ ಕರೆತರಲಾಗುವುದು ಎಂದರು.

ಕಾರ್ಯಕ್ರಮವನ್ನು ಶಾಸಕ ಎ. ಮಂಜು ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ, ಪ್ರಶಸ್ತಿ ಪುರಸ್ಕೃತ ಶಾ. ಮಂ. ಕೃಷ್ಣರಾಯರು ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷ ಡಾ. ಆರ್. ಕೆ. ಪದ್ಮನಾಭ ವಹಿಸಲಿದ್ದು, ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್ ಗೌಡ, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಅನಕೃ ಸುಪುತ್ರ ಅ. ಕೃ. ಗೌತಮ್, ಪ್ರಾಂಶುಪಾಲ ಎಂ. ನವೀನ್ ಉಲಿವಾಲ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅನಿಲ್ ಗೌಡ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಟಿ. ಲೋಕೇಶ್, ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಜಿನ್ನಪ್ಪ ಆಗಮಿಸಲಿದ್ದಾರೆ ಎಂದು ಹೇಳಿದರು.

ಅಭಿಮಾನಿ ಬಳಗದ ಗುರುಪ್ರಸನ್ನ, ಬಾಲರಾಜ್, ಮಹೇಶ್, ವಾಟಾಳ್ ರಮೇಶ್ ಇದ್ದರು.