5ಕೆ ಫನ್ ರನ್ ಕಾರ್ಯಕ್ರಮ ಸಂಪನ್ನ
ಕನ್ನಡಪ್ರಭ ವಾರ್ತೆ ದಾಂಡೇಲಿನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಹಾಗೂ ರೋಟರಿ ಕ್ಲಬ್ ಆಶ್ರಯದಡಿ ಸದೃಢ ಆರೋಗ್ಯ ಮತ್ತು ಸ್ವಚ್ಛ ಪರಿಸರದ ನಿರ್ಮಾಣದ ಆಯಶದಡಿ ಹಮ್ಮಿಕೊಂಡಿದ್ದ 5ಕೆ ಫನ್ ರನ್ ಕಾರ್ಯಕ್ರಮ ಭಾನುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಇಲ್ಲಿನ ಡಿಲಕ್ಸ್ ಮೈದಾನದಲ್ಲಿ ಆರಂಭಗೊಂಡ 5ಕೆ ಫನ್ ರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಆರ್.ವಿ. ದೇಶಪಾಂಡೆ, ನಾವು ಜೀವನದಲ್ಲಿ ಯಾವುದಾದರೂ ಸಾಧನೆ ಮಾಡಬೇಕಾದರೆ ಸಮೃದ್ಧ ಮತ್ತು ಸದೃಢ ಆರೋಗ್ಯ ಅತ್ಯಗತ್ಯ. ಸದೃಢ ಆರೋಗ್ಯವಂತ ಸಮಾಜದಿಂದ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ರನ್ನಿಂಗ್, ವಾಕಿಂಗ್ ಹಾಗೂ ದೈಹಿಕ ವ್ಯಾಯಾಮಗಳನ್ನು ಪ್ರತಿನಿತ್ಯ ಮಾಡುವಂತಹ ಅಭ್ಯಾಸ ಮೈಗೂಡಿಸಿಕೊಂಡಾಗ ಉತ್ತಮ ಆರೋಗ್ಯದ ಜೊತೆಗೆ ಮಾನಸಿಕವಾಗಿಯೂ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ನಾನು ಇಷ್ಟು ವಯಸ್ಸಾದರು ಆರೋಗ್ಯವಂತನಾಗಿದ್ದೇನೆ ಎಂದರೆ ಅದಕ್ಕೆ ಕಾರಣ ಪ್ರತಿದಿನ ನಾನು ಮಾಡುವ ವಾಕಿಂಗ್ ಮತ್ತು ವ್ಯಾಯಾಮ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರತಿದಿನ ವ್ಯಾಯಾಮ, ಯೋಗಾಭ್ಯಾಸ ಮಾಡುವುದನ್ನು ಕಡ್ಡಾಯವಾಗಿ ರೂಢಿ ಮಾಡಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಮಾತನಾಡಿದರು. 5 ಕೆ ಫನ್ ರನ್ (ಮ್ಯಾರಾಥಾನ್) ಕಾರ್ಯಕ್ರಮವು ಡಿಲಕ್ಸ್ ಮೈದಾನದಿಂದ ಆರಂಭಗೊಂಡು ಚೌಧರಿ ಗೆಟ್, ಕಿತ್ತೂರುರಾಣಿ ಚನ್ನಮ್ಮ ವೃತ್ತ, ಬೈಲಪಾರ, ಹಳೆದಾಂಡೇಲಿ, ಪಟೇಲ್ ವೃತ್ತ, ಜೆ.ಎನ್. ರಸ್ತೆ, ಲಿಂಕ್ ರಸ್ತೆಯಿಂದ ಚೌಧರಿ ಗೆಟ್ ದಾಟಿ ರಂಗನಾಥ ಸಭಾಭವನದ ಆವರಣದಲ್ಲಿ ಸಂಪನ್ನಗೊಂಡಿತು.
ಪುರುಷರ ವಿಭಾಗ:ಗಣಪತಿ ಮಲ್ಲಿಕ ಪ್ರಥಮ ₹25 ಸಾವಿರ, ತೇಜಸ್ ಗವಾಸ ದ್ವಿತೀಯ ₹15 ಸಾವಿರ, ಎ.ಆರ್. ಮನಿಕಂಠ ತೃತೀಯ ₹10 ಸಾವಿರ ನಗದು ಮತ್ತು ಶಾಶ್ವತ ಫಲಕ ಪಡೆದರು.
ಮಹಿಳಾ ವಿಭಾಗದಲ್ಲಿ ಸುವರ್ಣ ₹5 ಸಾವಿರ, ಸಮೃದ್ದಿ ರೇವಣಕರ ದ್ವಿತೀಯ ₹3 ಸಾವಿರ, ಸೃಷ್ಟಿ ನಕುಲ ಕಾಮತ ತೃತೀಯ ₹2 ಸಾವಿರ ಬಹುಮಾನ ಪಡೆದರು. ಜ್ಯೂನಿಯರ್ ವಿಭಾಗದಲ್ಲಿ ₹3 ಸಾವಿರ ನಗದು ಫಲಕದೊಂದಿಗೆ ಪ್ರಥಮ ಸ್ಥಾನವನ್ನು ಎ.ಆರ್. ನೇಹಾಲ್, ದ್ವಿತೀಯ ಸ್ಥಾನವನ್ನು ಜೈವಿ ಪಾಟೀಲ್ ₹2 ಸಾವಿರ ಮತ್ತು ಫಲಕ, ತೃತೀಯ ಸ್ಥಾನವನ್ನು ಭೂವನ ಅನಂತಪುರ ₹1 ಸಾವಿರ ಪಡೆದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂರ್ತಿ ಮುಗಿಸಿದಿ ಕಣ್ಣು ಕಾಣದ ಕುಶಾಲ್ ಕುಲ್ಕರ್ಣಿ ಮತ್ತು 67ರ ವಯಸ್ಸಿನ ಅನಂತ ಕುಲಕರ್ಣಿಯವರಿಗೆ ವಿಶೇಷ ಬಹುಮಾನ ನೀಡಲಾಯಿತು. ಭಾಗವಹಿಸಿದ ಸರ್ವರಿಗೂ ಸರ್ಟಿಫಿಕೇಟ್ ನೀಡಲಾಯಿತು. ಈ ಸಂದರ್ಭ ತಹಶೀಲ್ದಾರ ಶೈಲೇಶ ಪರಮಾನಂದ, ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ, ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಸಿಪಿಐ ಶಿವಾನಂದ ಅಂಬಿಗೇರ, ರೋಟರಿ ಕ್ಲಬ್ ಅಧ್ಯಕ್ಷ ಆಶಿತೋಷಕುಮಾರ ರಾಯ, ಕಾರ್ಯದರ್ಶಿ ಮಿಥುನ ನಾಯ್ಕ, ಖಜಾಂಚಿ ಲಿಯೋ ಪಿಂಟೋ, ಪಿಎಸ್‌ಐಗಳಾದ ಅಮೀನ ಅತ್ತಾರ, ಕಿರಣ ಪಾಟೀಲ್, ಶಿವಾನಂದ ನಾವದಗಿ, ಜಗದೀಶ ನಾಯ್ಕ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ತಾಂತ್ರಿಕ ವಿಭಾಗದ ಅಧ್ಯಕ್ಷ ಅನುಜ ದಯಾಳ, ಹಣಕಾಸು ವಿಭಾಗದ ಹಿರಿಯ ಉಪಾಧ್ಯಕ್ಷ ಅಶೋಕ ಶರ್ಮಾ, ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ವೇನು ವೇಲ್, ವಿಜಯ ಮಹಾಂತೇಶ, ಸಾರ್ವಜನಿಕ ಸಂಪರ್ಕಾವಿಭಾಗದ ಉಪಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರ ಜೆ.ಆರ್., ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಹಾಗೂ ಕಾಗದ ಕಾರ್ಖಾನೆಯ ಅಧಿಕಾರಿಗಳು, ಸಿಬ್ಬಂದಿ, ರೋಟರಿ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು, ನಗರದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ನಗರಸಭೆಯ ನಿಕಟಪೂರ್ವ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.