ಕುಕನೂರು ತಾಲೂಕಿನ ದ್ಯಾಂಪುರು ಸಿದ್ದಯ್ಯ ಪುರಾಣಿಕರು ಹುಟ್ಟಿದ ಊರು. ಸಿದ್ದಯ್ಯ ಪುರಾಣಿಕರು ಸೆ. 5, 1994ರಲ್ಲಿ ನಿಧನರಾಗಿದ್ದು, 32 ವರ್ಷಗಳು ಗತಿಸಿದರೂ ಅವರ ಹುಟ್ಟೂರಲ್ಲಿ ಯಾವುದೇ ರೀತಿಯಲ್ಲಿ ಅವರ ನೆನಪಿಸುವ ಸ್ಮಾರಕ ಹಾಗೂ ಕಾರ್ಯಗಳಾಗಿಲ್ಲ.

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು: ಮೊದಲು ಮಾನವನಾಗು ಸಂದೇಶ ಸಾರಿದ ಕಾವ್ಯಾನಂದ ಪ್ರಖ್ಯಾತಿಯ ಕವಿ ಸಿದ್ದಯ್ಯ ಪುರಾಣಿಕರ ನೆನಪಿನ ಚಿಗುರು ಅವರ ತವರೂರು ದ್ಯಾಂಪೂರು ಗ್ರಾಮದಲ್ಲಿ ಮೂಡಿದೆ.

ಅವರ ನಿಧನದ ನಂತರ ದ್ಯಾಂಪೂರು ಗ್ರಾಮದಲ್ಲಿ ಅವರ ಕುರುಹು ಸಾರುವ ಯಾವುದೇ ಕಾರ್ಯ ಆಗಿಲ್ಲ ಎಂಬ ಕೊರಗು ಸಾಹಿತ್ಯ ವಲಯದಲ್ಲಿ ವ್ಯಾಪಕವಾಗಿತ್ತು. ದ್ಯಾಂಪೂರು ಗ್ರಾಮದಲ್ಲಿ ಅವರ ಮನೆ ಒಂದನ್ನು ಬಿಟ್ಟು ಮತ್ಯಾವುದೂ ಅವರನ್ನು ನೆನಪಿಸುವ ಕಾರ್ಯಗಳಾಗಿರಲಿಲ್ಲ. ಸದ್ಯ ತವರೂರಲ್ಲಿ ಸಿದ್ದಯ್ಯ ಪುರಾಣಿಕರನ್ನು ನೆನಪಿಸುವ ಆಶಾಭಾವನೆ ಚಿಗುರೊಡೆದಿದೆ. ಈ ಹಿನ್ನೆಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿದ್ದಯ್ಯ ಪುರಾಣಿಕ ಟ್ರಸ್ಟ್ ದ್ಯಾಂಪೂರು ಗ್ರಾಮದ ಸಿದ್ದಯ್ಯ ಪುರಾಣಿಕರ ಮನೆಗೆ ಭೇಟಿ ನೀಡಿ ಕಾರ್ಯ ಪ್ರವೃತ್ತವಾಗುತ್ತಿದೆ.

ಸಿದ್ದಯ್ಯ ಪುರಾಣಿಕರು ಕನ್ನಡದ ಪ್ರಸಿದ್ಧ ನವೋದಯ ಕವಿ, ಬರಹಗಾರ ಮತ್ತು ದಕ್ಷ ಐ.ಎ.ಎಸ್. ಅಧಿಕಾರಿಯಾಗಿದ್ದರು. ಕಾವ್ಯಾನಂದ ಕಾವ್ಯನಾಮ ಅವರದ್ದಾಗಿತ್ತು. ಸಿದ್ಧಯ್ಯ ಪುರಾಣಿಕರು ವೃತ್ತಿಯಲ್ಲಿ ಅಧಿಕಾರಿಗಳಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳು.

ಕುಕನೂರು ತಾಲೂಕಿನ ದ್ಯಾಂಪುರು ಸಿದ್ದಯ್ಯ ಪುರಾಣಿಕರು ಹುಟ್ಟಿದ ಊರು. ಸಿದ್ದಯ್ಯ ಪುರಾಣಿಕರು ಸೆ. 5, 1994ರಲ್ಲಿ ನಿಧನರಾಗಿದ್ದು, 32 ವರ್ಷಗಳು ಗತಿಸಿದರೂ ಅವರ ಹುಟ್ಟೂರಲ್ಲಿ ಯಾವುದೇ ರೀತಿಯಲ್ಲಿ ಅವರ ನೆನಪಿಸುವ ಸ್ಮಾರಕ ಹಾಗೂ ಕಾರ್ಯಗಳಾಗಿಲ್ಲ. ಸದ್ಯ ಆ ಕಾರ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿದ್ದಯ್ಯ ಪುರಾಣಿಕ ಟ್ರಸ್ಟ್ ಮುಂದಾಗಿದ್ದು, ಸಿದ್ದಯ್ಯ ಪುರಾಣಿಕರ ಮನೆಯನ್ನು ಮ್ಯೂಸಿಯಂ ಮಾಡುವ ಸಂಕಲ್ಪ ಮಾಡಿದೆ. ಅವರ ಮನೆಯನ್ನು ಸಹ ಗುರುವಾರ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ವೀಕ್ಷಣೆ ಮಾಡಿದ್ದಾರೆ. ಅವರ ಮನೆಯ ವಾರಸುದಾರರು ಮನೆ ಮ್ಯೂಸಿಯಂ ಮಾಡಲು ಒಪ್ಪಿದರೆ ಕೂಡಲೇ ಮ್ಯೂಸಿಯಂ ಕಾರ್ಯದ ಪ್ರಸ್ತಾವನೆ ಸಲ್ಲಿಕೆಯಾಗಲಿದೆ.

ರಾಜ್ಯಾದ್ಯಂದ ಕನ್ನಡ ಕಹಳೆ ಮೊಳಗಿಸಿದವರಲ್ಲಿ ಸಿದ್ದಯ್ಯ ಪುರಾಣಿಕರು ಸಹ ಪ್ರಮುಖರು. ಅವರ ಸಮಗ್ರ ಸಾಹಿತ್ಯ, ಅವರ ನೆನವು ಮುಂದಿನ ಸಾಹಿತ್ಯ ಪೀಳಿಗೆಗೆ ಅನುಕೂಲ ಆಗುತ್ತದೆ, ಆ ನಿಟ್ಟಿನಲ್ಲಿ ಅವರ ತವರೂರು ದ್ಯಾಂಪೂರದಲ್ಲಿ ಅವರ ಮನೆಯನ್ನು ಮ್ಯೂಸಿಯಂ ಹಾಗೂ ಗ್ರಾಮದಲ್ಲಿ ಒಂದು ಸ್ಮಾರಕ ಹಾಗೂ ಅವರ ಸಮಗ್ರ ಸಾಹಿತ್ಯವನ್ನು ಗ್ರಾಮದಲ್ಲಿ ಇಡಲು ಟ್ರಸ್ಟ್ ಮುಂದಾಗಿದೆ. ಇದಾದ ನಂತರ ಮೊದಲು ಮಾನವನಾಗು ಎಂಬ ಸಂದೇಶವನ್ನೇ ಒಂದು ಕಾರ್ಯಕ್ರಮ ಮಾಡಿಕೊಂಡು ಜಿಲ್ಲೆಯ ಪ್ರತಿ ಶಾಲಾ, ಕಾಲೇಜು ಹಾಗೂ ಗ್ರಾಮಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಪುರಾಣಿಕರ ಸಾಹಿತ್ಯ ಪಸರಿಸುವ ಕಾರ್ಯಕ್ಕೆ ಟ್ರಸ್ಟ್ ಮುಂದಾಗಿದೆ.

ಪ್ರಸ್ತಾವನೆ ಸಲ್ಲಿಸಲಾಗುವುದು: ಕವಿ ಸಿದ್ದಯ್ಯ ಪುರಾಣಿಕರ ಮನೆಯನ್ನು ಒಂದು ಮ್ಯೂಸಿಯಂ ಮಾಡಿ, ಜನರಿಗೆ ಅವರ ಜೀವನ ಚರಿತ್ರೆ ಹಾಗೂ ಸಾಹಿತ್ಯವನ್ನು ತಲುಪಿಸುವ ಕಾರ್ಯ ಮಾಡಬೇಕು ಎಂಬ ದೃಷ್ಠಿಕೋನದಲ್ಲಿ ದ್ಯಾಂಪೂರು ಗ್ರಾಮದ ಸಿದ್ದಯ್ಯ ಪುರಾಣಿಕರ ಮನೆಗೆ ಭೇಟಿ ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರಿಗೆ ಸಿದ್ದಯ್ಯ ಪುರಾಣಿಕರ ಮ್ಯೂಸಿಯಂ ದ್ಯಾಂಪೂರದಲ್ಲಿ ಮಾಡಲು ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೊಪ್ಪಳದ ಡಾ. ಸಿದ್ದಯ್ಯ ಪುರಾಣಿಕ ಟ್ರಸ್ಟ್ ಅಧ್ಯಕ್ಷ ಅಜಮೀರ ನಂದಾಪುರ ಹೇಳಿದರು. ಮುನ್ನೆಲೆಗೆ ತರುತ್ತೇವೆ: ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಸಿದ್ದಯ್ಯ ಪುರಾಣಿಕರ ಮ್ಯೂಸಿಯಂ ಮಾಡಲು ಕೋರಿದ್ದೇವೆ. ಟ್ರಸ್ಟ್ ಸದಸ್ಯರ ಹಾಗೂ ಗ್ರಾಮಸ್ಥರ ಸಹಕಾರದಿಂದ ದ್ಯಾಂಪೂರದಲ್ಲಿ ಸಿದ್ದಯ್ಯ ಪುರಾಣಿಕರ ಕುರುಹುಗಳನ್ನು ನೆನಪುಗಳನ್ನು ಮುನ್ನೆಲೆಗೆ ತರುವ ಕಾರ್ಯ ಮಾಡುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಹೇಳಿದರು.

ಕೈ ಜೋಡಿಸುತ್ತೇವೆ: ಕವಿ ಸಿದ್ದಯ್ಯ ಪುರಾಣಿಕರ ಮ್ಯೂಸಿಯಂ, ಸ್ಮಾರಕ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಟ್ರಸ್ಟ್ ಮುಂದಾಗಿರುವುದು ಸಂತಸದ ಸಂಗತಿ. ಸಿದ್ದಯ್ಯ ಪುರಾಣಿಕರ ಕೊಡುಗೆ ರಾಜ್ಯಕ್ಕೆ ಅಪಾರ. ಆ ನಿಟ್ಟಿನಲ್ಲಿ ಅವರ ಹುಟ್ಟೂರು ದ್ಯಾಂಪೂರದಲ್ಲಿ ಅವರ ನೆನಪಿಸುವ ಕಾರ್ಯ ಮಾಡಲು ಗ್ರಾಮಸ್ಥರು ಸಹ ಸಹಕಾರ ನೀಡುತ್ತೇವೆ. ಅವರ ಸ್ಮರಿಸುವ ಕಾರ್ಯಕ್ಕೆ ಇಲಾಖೆ ಜತೆ ಕೈ ಜೋಡಿಸುತ್ತೇವೆ ಎಂದು ದ್ಯಾಂಪೂರು ಗ್ರಾಮದ ಮುಖಂಡ ಈಶಯ್ಯ ಶಿರೂರಮಠ ಹೇಳಿದರು.