ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ನ್ಯಾಯಾಲಯದಲ್ಲಿನ ಮೂಲ ಸೌಲಭ್ಯಗಳ ಕೊರತೆ ನಿವಾರಿಸಲು ಶೀಘ್ರವೇ ನೂತನ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗುವಂತಾಗಲಿ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ವಿ.ಮಾದೇಶ್ ತಿಳಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವಿಶ್ವಗುರು ಬಸವಣ್ಣ ಜಯಂತಿಯಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿ, ಪಟ್ಟಣದ ನ್ಯಾಯಾಲಯಕ್ಕೆ ನಿಗದಿಪಡಿಸಿರುವ ನಿವೇಶನದಲ್ಲಿ ನನ್ನ ಅವಧಿಯಲ್ಲಿಯೇ ಕಟ್ಟಡ ಆಗುತ್ತದೆ ಎಂದುಕೊಂಡಿದ್ದರೂ ಅದು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಳೆಯ ಕಟ್ಟಡದಲ್ಲಿ ವಕೀಲರಿಗೆ ಮತ್ತು ಕಕ್ಷಿದಾರರ ವಿಶ್ರಾಂತಿಗೆ ತೊಂದರೆ ಜೊತೆಗೆ ಮೂಲ ಸೌಲಭ್ಯಗಳು ಇಲ್ಲದಂತಾಗಿದೆ. ಕೂಡಲೇ ಕಟ್ಟಡ ನಿರ್ಮಾಣವಾಗಲಿ ಎಂದು ಆಶಿಸಿದರು.ವಕೀಲ ವೃತ್ತಿಯನ್ನು ಆರಂಭಿಸಿ ಕಷ್ಟಪಟ್ಟು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದೇನೆ. ಟೈಪ್ ಕಲಿತದಿಂದಲೇ ಈ ಸ್ಥಾನಕ್ಕೆ ಬರಲು ಕಾರಣವಾಗಿದೆ. ವಕೀಲರು ಕಡ್ಡಾಯವಾಗಿ ಟೈಪ್ ಮಾಡುವುದನ್ನು ಕಲಿಯಬೇಕು. ನಮಗೆ ಸಿಕ್ಕಿರುವ ಹುದ್ದೆಯನ್ನು ಸಮರ್ಪಕವಾಗಿ ನಿರ್ವಹಿಸಲು ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇನೆ ಎಂದರು.
ನ್ಯಾಯಾಲಯದಲ್ಲಿ ಪ್ರತಿಯೊಬ್ಬರು ಕುಟುಂಬದ ಸದಸ್ಯರಂತೆ ಇರಬೇಕು, ನ್ಯಾಯಾಲಯದಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೂ ನೇರವಾಗಿ ನ್ಯಾಯಾಧೀಶರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್ ಕುಮಾರ್ ಶಿವಪೂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಸವಾದಿ ಶರಣರಂತಹ ಮಹಾನೀಯರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಕಾಯಕದಿಂದಲೇ ಕೈಲಾಸ ಕಾಣಬೇಕೆಂದು ತಿಳಿಸಿದರು.
ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿ.ಮಾದೇಶ್ ಅವರು ಸರಳ ಜೀವಿಯಾಗಿದ್ದು, ತಾಳ್ಮೆ ಸಂಯಮಕ್ಕೆ ಹೆಸರು ವಾಸಿಯಾಗಿದ್ದಾರೆ. ಅವರಿಂದ ವಕೀಲರು, ನ್ಯಾಯಾಧೀಶರರು ಹಲವಾರು ವಿಷಯ ಕಲಿತಿದ್ದಾರೆಂದು ಹೇಳಿದರು.ವಕೀಲರ ಸಂಘದ ತಾಲೂಕು ಘಟಕದ ಅಧ್ಯಕ್ಷ ಡಿ.ಎಂ.ಸುಂದರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ, ಜ್ಞಾನದ ಭಂಡಾರ, ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಶ್ರಮಿಸಿದವರು. ಸಾಮಾಜಿಕ ನ್ಯಾಯ ಕಲ್ಪಿಸುವ ಧ್ಯೇಯದೊಂದಿಗೆ ಕ್ರಾಂತಿ ಮಾಡಿದ ಬಸವಣ್ಣ ಅವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಸಣ್ಣಪುಟ್ಟ ಕಾನೂನು ತೊಡಕುಗಳಿಂದ ನ್ಯಾಯಾಲಯ ಸಂಕೀರ್ಣ ನಿರ್ಮಾಣ ವಿಳಂಬವಾಗಿದೆ. ಎಲ್ಲರ ಆಶಯದಂತೆ ಸದ್ಯದಲ್ಲಿಯೇ ಕಟ್ಟಡ ಕಾರ್ಯ ಆರಂಭವಾಗಲಿದೆ. ಕಲಿಕೆಯಲ್ಲಿನ ಶ್ರದ್ಧೆಯಿಂದ ಜೀವನದಲ್ಲಿ ಉನ್ನತ ಹುದ್ದೆ ಸಿಗಲಿದೆ ಎನ್ನುವುದಕ್ಕೆ ಕು.ರಂಜಿತಾ ಅವರೇ ಸಾಕ್ಷಿಯಾಗಲಿದ್ದಾರೆ ಎಂದು ಹೇಳಿದರು.ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಕು.ರಂಜಿತಾ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನ್ಯಾಯಾಧೀಶರು ಹಾಗೂ ವಕೀಲರ ಸಹಕಾರದಿಂದ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು, ನೊಂದವರಿಗೆ ನ್ಯಾಯ ನೀಡುವ ಕಾರ್ಯ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಕಾವ್ಯಶ್ರೀ, ಪ್ರಧಾನ ಕಾರ್ಯದರ್ಶಿ ನಟೇಶ್, ಸರ್ಕಾರಿ ಅಭಿಯೋಜರು ಸೇರಿದಂತೆ ಇತರರು ಇದ್ದರು.