ಸಾರಾಂಶ
ತಂಗುದಾಣಕ್ಕೆ ಮರುಜೀವ ನೀಡಲು ನೂತನ ಫ್ಲೆಕ್ಸ್ ಅಳವಡಿಸಿ ಕುಳಿತುಕೊಳ್ಳಲು ಸಮರ್ಪಕವಾದ ವ್ಯವಸ್ಥೆಯನ್ನು ಮಾಡಿ ನವೀಕರಣಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ 10ನೇ ತಿಂಗಳ ಸ್ವಚ್ಛತಾ ಅಭಿಯಾನವನ್ನು ಭಾನುವಾರ ಕೂಳೂರಿನ ಹಿಂದು ರುದ್ರಭೂಮಿ ಪರಿಸರದಲ್ಲಿ ಹಮ್ಮಿಕೊಳ್ಳಲಾಯಿತು. ಎಂಆರ್‌ಪಿಎಲ್ ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮಗಳ ಮುಖ್ಯಸ್ಥ ಪ್ರಶಾಂತ್ ಬಾಳಿಗಾ ಹಾಗೂ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಧನೇಶ್ ಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.ಈ ಸಂದರ್ಭ ನಿವೃತ್ತ ಯೋಧ ಬೆಳ್ಳಾಲ ಗೋಪಿನಾಥ್ ರಾವ್, ಸಹಾಯಕ ಪ್ರಾಧ್ಯಾಪಕ ಪ್ರಕಾಶ್, ಕಮಲಾಕ್ಷ ಪೈ, ಸತ್ಯನಾರಾಯಣ, ಉಮಾನಾಥ್ ಕೋಟೆಕ್ಕಾರ್ ಮತ್ತು ರಂಜನ್ ಬೆಳ್ಳರ್ಪಾಡಿ ಇದ್ದರು.
ಬಳಿಕ ಕೂಳೂರಿನ ಹಿಂದೂ ರುದ್ರಭೂಮಿಯ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿದ್ದ ಪ್ಲಾಸ್ಟಿಕ್, ಬಾಟಲಿಗಳು ಮುಂತಾದ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು. ಇದೇ ವೇಳೆ ಹಿಂದೂ ರುದ್ರಭೂಮಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.ಬಸ್ ತಂಗುದಾಣಕ್ಕೆ ಜೀವಕಳೆ: ಪಂಜಿಮೊಗರು - ವಿದ್ಯಾನಗರದಲ್ಲಿ ೨೦೧೯ ರಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ವೇಳೆ ನಿರ್ಮಿಸಲಾಗಿದ್ದ ಬಸ್ ತಂಗುದಾಣ ಶಿಥಿಲಾವಸ್ಥೆಗೆ ತಲುಪಿತ್ತು. ಈ ಬಸ್ ತಂಗುದಾಣಕ್ಕೆ ಮರುಜೀವ ನೀಡಲು ನೂತನ ಫ್ಲೆಕ್ಸ್ ಅಳವಡಿಸಿ ಕುಳಿತುಕೊಳ್ಳಲು ಸಮರ್ಪಕವಾದ ವ್ಯವಸ್ಥೆಯನ್ನು ಮಾಡಿ ನವೀಕರಣಗೊಳಿಸಲಾಯಿತು.